ADVERTISEMENT

ಕೊಪ್ಪಳ: ಮಾವಿನ ಫಸಲಿಗೆ ಅಕಾಲಿಕ ಮಳೆ ಕಂಟಕ

ಹೂವು ಬಿಡದ ಕೆಲವು ಗಿಡಗಳು, ಇಳುವರಿ ಕಡಿಮೆಯಾಗುವ ಭೀತಿಯಲ್ಲಿ ರೈತರು

ಸಿದ್ದನಗೌಡ ಪಾಟೀಲ
Published 12 ಜನವರಿ 2022, 6:03 IST
Last Updated 12 ಜನವರಿ 2022, 6:03 IST
ಕೊಪ್ಪಳ ತಾಲ್ಲೂಕಿನ ಕಾಮನೂರಿನ ರೈತರೊಬ್ಬರ ಜಮೀನಿನಲ್ಲಿ ಹೂವುಗಳು ಕಟ್ಟದೇ ಬರಿದಾದ ಗಿಡ ಪ್ರಜಾವಾಣಿ ಚಿತ್ರ
ಕೊಪ್ಪಳ ತಾಲ್ಲೂಕಿನ ಕಾಮನೂರಿನ ರೈತರೊಬ್ಬರ ಜಮೀನಿನಲ್ಲಿ ಹೂವುಗಳು ಕಟ್ಟದೇ ಬರಿದಾದ ಗಿಡ ಪ್ರಜಾವಾಣಿ ಚಿತ್ರ   

ಕೊಪ್ಪಳ: ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವೈವಿಧ್ಯಮಯ ತಳಿಯ ಮಾವು ಬೆಳೆದು ರಫ್ತು ಮಾಡಲಾಗುತ್ತದೆ. ಆದರೆ, ಈ ಬಾರಿ ಮಾವಿನ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಶೇ 60ರಷ್ಟು ಇಳುವರಿ ಬರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈಚೆಗೆ ಸುರಿದ ಅಕಾಲಿಕ ಮಳೆಗೆ ಅನೇಕ ಮರಗಳಲ್ಲಿ ಹೂವುಗಳು ಕಟ್ಟಿಕೊಳ್ಳದೇ ಮಾವಿನ ಕಾಯಿ ಬರುತ್ತವೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ.

ತಾಲ್ಲೂಕಿನ ಕಾಮನೂರ, ಕಲ್ಲತಾವರಗೇರಾ ಗ್ರಾಮದಲ್ಲಿ ಕೆಲವು ಹೊಲಗಳಲ್ಲಿ ಮಾವು ಹೂವು ಬಿಟ್ಟಿಲ್ಲ. ಇನ್ನೂ ಕೆಲವು ಮಾವಿನ ಗೊಂಚಲಗಳಲ್ಲಿ ವಿರಳವಾಗಿ ಹೂವುಗಳು ಕಾಣಿಸಿಕೊಂಡಿವೆ. ಇದು ಸಹಜ ಕೂಡಾ ಎಂದು ಕೃಷಿಕರು ಹೇಳುತ್ತಾರೆ. ಸತತ ಮೂರು ವರ್ಷ ಮಾವಿನ ಕಾಯಿ ಬಿಟ್ಟರೆ, ನಂತರದ ಒಂದು ವರ್ಷ ಹೂವು ಕಟ್ಟುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ
ಅವರು.

ADVERTISEMENT

ಇದಕ್ಕೆ ಆಫ್‌ ಸೀಸನ್‌ ಮತ್ತು ಆನ್‌ ಸೀಜನ್‌ ಎಂದು ಕರೆಯುತ್ತಾರೆ. ಈ ಬಾರಿ ಮಳೆ ಉತ್ತಮವಾಗಿ ಸುರಿದ ಕಾರಣ ಎಲ್ಲ ಹಣ್ಣಿನ ಗಿಡಗಳು ಸಮೃದ್ಧವಾಗಿ ಹಣ್ಣು ನೀಡುತ್ತವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದರೆ, ಅಕಾಲಿಕ ಮಳೆಯಿಂದ ಹೂವು ಉದುರಿ ಹೋಗಿವೆ. ಇದರಿಂದ ಇಳುವರಿ ಕೂಡಾ ಕಡಿಮೆಯಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಮಾರ್ಚ್‌ ಅಂತ್ಯಕ್ಕೆ ಮಾವಿನ ಗಿಡಗಳಲ್ಲಿ ಹೂವು, ಕಾಯಿಕಟ್ಟುವ ಕೊನೆಯ ಹಂತದಲ್ಲಿ ಮಾವಿನ ಇಳುವರಿ ಬಗ್ಗೆ ನಿಖರವಾಗಿ ಹೇಳಬಹುದು ಎಂದು ತಜ್ಞರು ಹೇಳುತ್ತಾರೆ. ಮಾವಿಗೆ ಉತ್ತಮ ವಾತಾವರಣ ಇರುವುದರಿಂದ ಅಕಾಲಿಕ ಮಳೆ, ಗಾಳಿ ಬೀಸದೇ ಇದ್ದರೆ ಭರ್ಜರಿ ಫಸಲು ತೆಗೆಯಬಹುದು ಎಂಬ ಅಂದಾಜು ರೈತರಲ್ಲಿದೆ.

ಜಿಲ್ಲೆಯ ಮಾವಿನ ಕ್ಷೇತ್ರಗಳಲ್ಲಿ ಆಫೋಸ್, ಕೇಸರ್, ಬೆನಿಸನ್, ಗೋವೆ, ಜವಾರಿ, ರಸಫೂರಿ, ತೋತಾಪುರಿ ಸೇರಿದಂತೆ ವಿವಿಧ ಬಗೆಯ ಉತ್ಕೃಷ್ಟ ಮತ್ತು ಸ್ವಾದಿಷ್ಟವಾದ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ತೋಟಗಾರಿಕೆ ಇಲಾಖೆ ಆಯೋಜಿಸುವ ಹಣ್ಣುಗಳ ರಾಜ ಮಾವಿನ ಮೇಳಕ್ಕೆ ವ್ಯಾಪಕ ಸ್ಪಂದನೆ ಬರುತ್ತದೆ. ಪ್ರದರ್ಶನ ಮತ್ತು ಮಾರಾಟದಲ್ಲಿ ಕೂಡಾ ದಾಖಲೆ ಕೂಡಾ ಇದೆ.

ಆದರೆ ಈ ಬಾರಿಯ ಹಂಗಾಮಿನಲ್ಲಿ ಎಲ್ಲ ತಿಂಗಳುಗಳಲ್ಲಿ ಹವಾಮಾನ ಬದಲಾವಣೆಗೊಂಡು ಮಳೆಯಾದರೆ ಹೂವುಗಳು ಆಗದೇ ಬರಡು ಆಗುವ ಭಯ ಮಾವಿನ ಬೆಳೆಗಾರರಲ್ಲಿ ಇದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಮಾವಿನ ತೋಟಗಳನ್ನು ವ್ಯಾಪಾರಿಗಳು ಗುತ್ತಿಗೆ ಪಡೆದು, ಕ್ರಿಮಿನಾಶಕ ಸೇರಿದಂತೆ ವಿವಿಧ ಔಷಧಗಳನ್ನು ಸಿಂಪಡಣೆ ಮಾಡುತ್ತಿರುವುದು ಕಂಡು ಬಂದಿದೆ. ಇಳುವರಿ ಹೆಚ್ಚಾದರೆ ಲಾಭದ ಮುಖ ನೋಡಬಹುದು ಎಂಬುವುದು ದಲ್ಲಾಳಿಗಳ ಆಸೆ ಕೂಡಾ ಆಗಿದೆ. ಕೊರೊನಾ ಮತ್ತು ಲಾಕ್‌ಡೌನ್‌ ಶಬ್ದಗಳು ಮತ್ತೆ, ಮತ್ತೆ ಕೇಳಿ ಬರುತ್ತಿದ್ದು, ಕಳೆದ ಎರಡು ವರ್ಷಗಳಿಂದ ವ್ಯಾಪಾರ, ವಹಿವಾಟು ಇಲ್ಲದೆ ಮಾವಿನ ಬೆಳೆಗಾರರು ತೊಂದರೆಗೆ ಒಳಗಾಗಿದ್ದಾರೆ.

ಭರ್ಜರಿ ಫಸಲಿಗೆ ಅಕಾಲಿಕ ಮಳೆ, ಗಾಳಿ ಕಾರಣವಾದರೆ ಮತ್ತೆ ರೈತರಿಗೆ ಹಾನಿ ತಪ್ಪಿದ್ದಲ್ಲ ಎಂಬ ಆತಂಕ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.