ADVERTISEMENT

ಗಂಗಾವತಿ: ಕುಡುಕರ ತಾಣವಾದ ಶ್ರೀರಾಮುಲು ಕಾಲೇಜು ಮೈದಾನ

ಸಂಜೆಯಾಗುತ್ತಲೇ ಸೇರುವ ಯುವಕರ ಗುಂಪುಗಳು: ವಿದ್ಯಾರ್ಥಿಗಳಲ್ಲಿ ಆವರಿಸಿದ ಭಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 6:13 IST
Last Updated 21 ಮಾರ್ಚ್ 2024, 6:13 IST
ಗಂಗಾವತಿ ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ಮದ್ಯಪಾನ ಮಾಡಿ ಬಾಟಲ್ ಒಡೆದಿರುವುದು
ಗಂಗಾವತಿ ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ಮದ್ಯಪಾನ ಮಾಡಿ ಬಾಟಲ್ ಒಡೆದಿರುವುದು   

ಗಂಗಾವತಿ: ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ನಿತ್ಯಸಂಜೆ ಯುವಕರು, ವಯಸ್ಕರು ಮದ್ಯಪಾನ, ಧೂಮಪಾನ ಮಾಡಿ, ಬಾಟಲ್, ಸಿಗರೇಟ್ ಪ್ಯಾಕೆಟ್, ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಹೋಗುತ್ತಿದ್ದು, ಮೈದಾನ ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿದೆ.

ಈ ಮೈದಾನದ ಆಸುಪಾಸಿನಲ್ಲಿ ಶ್ರೀರಾಮುಲು ಪಿಯುಸಿ, ಪದವಿ ಕಾಲೇಜು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಮತ್ತು ವಸತಿ ನಿಲಯ, ಅಪ್ಸಾನಿ ಎನ್.ಆರ್ ಕಾನೂನು ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಐಟಿಐ ಕಾಲೇಜುಗಳಿವೆ. ದೊಡ್ಡ ಮಟ್ಟದ ಕ್ರೀಡಾಕೂಟಗಳು ಇದೇ ಮೈದಾನದಲ್ಲಿ ಆಯೋಜಿಸಲಾಗುತ್ತದೆ.

ಆದರಿಲ್ಲಿ ನಿತ್ಯಸಂಜೆ ಸಾರ್ವಜನಿಕರು ಮದ್ಯಪಾನ ಮಾಡಿ ಬಾಟಲ್ ಒಡೆದು, ಮನಬಂದಂತೆ ಚಿಲ್ಲಾಪಿಲ್ಲಿ ಎಸೆಯುತ್ತಿದ್ದು,‌ ಮೈದಾನದ ತುಂಬೆಲ್ಲ ಗಾಜಿನ ಚೂರುಗಳು ಬಿದ್ದಿವೆ. ಪ್ಲಾಸ್ಟಿಕ್ ತ್ಯಾಜ್ಯವಂತೂ ರಸ್ತೆಬದಿ, ಮುಳ್ಳುಕಂಟಿ, ಚರಂಡಿ ಸೇರಿ ಕಣ್ಣು ಹಾಯಿಸಿದ ಕಡೆಯೆಲ್ಲ ಕಾಣುತ್ತದೆ. ಈವರೆಗೆ ಇದರ ವಿಲೇವಾರಿಯೇ ಇಲ್ಲ.

ADVERTISEMENT

ಮೈದಾನದ ಪಕ್ಕದಲ್ಲೊಂದು ಖಾಸಗಿ ಲೇಔಟ್ ಇದ್ದು, ಅಲ್ಲಿಯೂ ಸಹ ಎಗ್ಗಿಲ್ಲದೆ ಮದ್ಯಪಾನ ಮಾಡುತ್ತಾರೆ. ಇದರ ಸಮೀಪ ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯವಿದ್ದು, ಶಿಕ್ಷಣಕ್ಕೆ ಪೂರಕವಾದ ವಸ್ತುಗಳ ಖರೀದಿಸಲು ಸಂಜೆ ನಿಲಯದಿಂದ ಹೊರಹೋಗಲು ಭಯಪಡುವ ಪರಿಸ್ಥಿತಿಯಿದೆ.

‘ಈ ಭಾಗದಲ್ಲಿ ನಿತ್ಯ ಪುಂಡರ ಹಾವಳಿಯಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕಾದ ಕಾಲೇಜುಗಳ ಆಡ‌ಳಿತ ವರ್ಗ ಮೌನವಹಿಸಿದೆ. ಮೈದಾನ ನಿರ್ವಹಣೆ ಮಾಡಿ ಕ್ರೀಡಾಚಟುವಟಿಕೆಗಳಿಗೆ ಅವಕಾಶ ನೀಡಬೇಕಾದ ಕಾಲೇಜುಗಳ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಶ್ರೀರಾಮುಲು ಕಾಲೇಜಿನ ಸಂತೋಷ್ ಹೇಳುತ್ತಾರೆ.

‘ಸಂಜೆ ಕತ್ತಲಾಗುತ್ತಿದ್ದಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯರ ವಸತಿನಿಲಯದ ಮುಂಭಾಗದ ರಸ್ತೆ, ಖಾಸಗಿ ಲೇಔಟ್‌ನಲ್ಲಿ ಸಾಕಷ್ಟು ಜನರು ಮದ್ಯಪಾನ ಮಾಡುತ್ತಾ ಕುಳಿತಿರುತ್ತಾರೆ. ಒಮ್ಮೊಮ್ಮೆ ಸಂಜೆ ಊರಿನಿಂದ ವಸತಿ ನಿಲಯಕ್ಕೆ ಬರುವಾಗ ಕತ್ತಲಲ್ಲಿನ ಜನರ ಕಂಡು ಭಯ ಆಗುತ್ತದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ.

ಗಂಗಾವತಿ ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ಮದ್ಯಪಾನ ಮಾಡಿ ಬಾಟಲ್ ಒಡೆದಿರುವುದು
ಎಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆಯಿಂದಲೇ ಸೂರ್ಯನಾಯಕ ತಾಂಡಾಕ್ಕೆ ಹೋಗಬೇಕಿದ್ದು, ಮದ್ಯದ ಬಾಟಲ್ ರಸ್ತೆಗೆ ಎಸೆಯುವ ಕಾರಣ ಗಾಜಿನ ಚೂರುಗಳು ಬಿದ್ದಿರುತ್ತವೆ. ನಿವಾಸಿಗಳು ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ಸಂಜೆ ತಾಂಡಾಕ್ಕೆ ಮರಳುವಾಗ ಗಾಜಿನ ಚೂರು ತುಳಿದು ಗಾಯಗೊಂಡ ಪ್ರಕರಣಗಳು ಸಾಕಷ್ಟಿವೆ. ಇಲ್ಲಿ ಮದ್ಯಪಾನಕ್ಕೆ ಕಡಿವಾಣ ಬೀಳಬೇಕು.
ಪಂಪಾಪತಿ, ಸೂರ್ಯನಾಯಕ ತಾಂಡಾ ನಿವಾಸಿ
ಕತ್ತಲಾಗುತ್ತಿದ್ದಂತೆ ವಸತಿನಿಲಯದ ವಿದ್ಯಾರ್ಥಿನಿಯರನ್ನು ಹೊರಗಡೆ ಕಳುಹಿಸುವುದಿಲ್ಲ. ಅನಿವಾರ್ಯವಿದ್ದರೆ ಸಂಜೆ 5ರೊಳಗೆ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಬರುವಂತೆ ಹೇಳಲಾಗಿದೆ.
ಜ್ಯೋತಿ, ವಾರ್ಡನ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಸತಿನಿಲಯ
‘ಮದ್ಯಪಾನಕ್ಕೆ ಕಡಿವಾಣ ಹಾಕಿ’
ಎಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆಯಿಂದಲೇ ಸೂರ್ಯನಾಯಕ ತಾಂಡಾಕ್ಕೆ ಹೋಗಬೇಕಿದ್ದು, ಮದ್ಯದ ಬಾಟಲ್ ರಸ್ತೆಗೆ ಎಸೆಯುವ ಕಾರಣ ಗಾಜಿನ ಚೂರುಗಳು ಬಿದ್ದಿರುತ್ತವೆ. ನಿವಾಸಿಗಳು ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ಸಂಜೆ ತಾಂಡಾಕ್ಕೆ ಮರಳುವಾಗ ಗಾಜಿನ ಚೂರು ತುಳಿದು ಗಾಯಗೊಂಡ ಪ್ರಕರಣಗಳು ಸಾಕಷ್ಟಿವೆ. ಇಲ್ಲಿ ಮದ್ಯಪಾನಕ್ಕೆ ಕಡಿವಾಣ ಹಾಕಬೇಕು ಎಂದು ಸೂರ್ಯನಾಯಕ ತಾಂಡಾದ ನಿವಾಸಿ ಪಂಪಾಪತಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.