ADVERTISEMENT

ಮುಗಿದ ಪರೀಕ್ಷೆ: ವಿದ್ಯಾರ್ಥಿಗಳು ನಿರಾಳ

ಎಸ್ಸೆಸ್ಸೆಲ್ಸಿ ಭಾಷಾ ವಿಷಯಗಳ ಪರೀಕ್ಷೆ: 86 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 15:49 IST
Last Updated 22 ಜುಲೈ 2021, 15:49 IST
ಕೊಪ್ಪಳದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಭಾಷಾ ವಿಷಯದ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಕೊಪ್ಪಳದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಭಾಷಾ ವಿಷಯದ ಪರೀಕ್ಷೆ ಬರೆದ ವಿದ್ಯಾರ್ಥಿಗಳು   

ಕೊಪ್ಪಳ:ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯಾದ್ಯಂತ ಗುರುವಾರ ಭಾಷಾ ವಿಷಯಗಳ ಪರೀಕ್ಷೆ ಶಾಂತಿಯುತವಾಗಿ ನಡೆದು, ವಿದ್ಯಾರ್ಥಿಗಳಲ್ಲಿ ನಿರಾಳತೆ ಮೂಡಿಸಿತು.

ಕೋವಿಡ್‌ ಸೋಂಕು ಮತ್ತು ಲಾಕ್‌ಡೌನ್‌ನಿಂದ ಆನ್‌ಲೈನ್‌, ಆಫ್‌ಲೈನ್‌ ತರಗತಿ ಸೇರಿ ವಿವಿಧ ಕೆಲಸಗಳಲ್ಲಿ ತೊಡಗಿದ್ದ ಶಿಕ್ಷಕರು, ಒತ್ತಡದಲ್ಲಿ ಇದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟರು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆ ವಿಷಯಗಳ ಪರೀಕ್ಷೆ ನಡೆಯಿತು. ಜಿಲ್ಲೆಯ ಏಳು ತಾಲ್ಲೂಕಿನ 108 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆಯಿತು. ಕೆಲವು ಕಡೆ ಜಿಟಿಜಿಟಿ ಮಳೆಯಲ್ಲಿಯೇ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಕೋವಿಡ್‌ ಕಾರಣದಿಂದ ಈ ಸಾರಿಯ ಪರೀಕ್ಷೆ ಕೂಡಾ ವಿಶೇಷವಾಗಿ ನಡೆಯಿತು.

ADVERTISEMENT

ಯಾವುದೇ ಕೇಂದ್ರಗಳಲ್ಲಿ ನಕಲು, ಅಕ್ರಮ, ಪ್ರಶ್ನೆಪತ್ರಿಕೆ ದುರುಪಯೋಗ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಪ್ರಥಮ ಭಾಷೆ: ಪ್ರಥಮ ಭಾಷೆ ವಿಷಯದ ಪರೀಕ್ಷೆಗಾಗಿ 20,754 ರೆಗ್ಯೂಲರ್, 810 ಖಾಸಗಿ ಹಾಗೂ 445 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20,680 ರೆಗ್ಯೂಲರ್ ವಿದ್ಯಾರ್ಥಿಗಳು, 801 ಖಾಸಗಿ ಹಾಗೂ 440 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 74, ಖಾಸಗಿ 9 ಹಾಗೂ ಪುನರಾವರ್ತಿತ 5 ಜನ ಸೇರಿ ಒಟ್ಟು 88 ಅಭ್ಯರ್ಥಿಗಳು ಗೈರಾಗಿದ್ದಾರೆ.

ದ್ವಿತೀಯ ಭಾಷೆ: ದ್ವಿತೀಯ ಭಾಷೆ ವಿಷಯದ ಪರೀಕ್ಷೆಗಾಗಿ 20,738 ರೆಗ್ಯೂಲರ್ ವಿದ್ಯಾರ್ಥಿಗಳು, 810 ಖಾಸಗಿ ಹಾಗೂ 593 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20,664 ರೆಗ್ಯೂಲರ್ ವಿದ್ಯಾರ್ಥಿಗಳು, 801 ಖಾಸಗಿ ಹಾಗೂ 581 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 74, ಖಾಸಗಿ 9 ಹಾಗೂ ಪುನರಾವರ್ತಿತ 12 ಜನ ಸೇರಿ ಒಟ್ಟು 95 ಅಭ್ಯರ್ಥಿಗಳು ಗೈರಾಗಿದ್ದಾರೆ.

ತೃತೀಯ ಭಾಷೆ: ತೃತೀಯ ಭಾಷೆ ವಿಷಯದ ಪರೀಕ್ಷೆಗಾಗಿ 20,738 ರೆಗ್ಯೂಲರ್ ವಿದ್ಯಾರ್ಥಿಗಳು, 810 ಖಾಸಗಿ ಹಾಗೂ 237 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20,664 ರೆಗ್ಯೂಲರ್ ವಿದ್ಯಾರ್ಥಿಗಳು, 801 ಖಾಸಗಿ ಹಾಗೂ 234 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 74, ಖಾಸಗಿ 9 ಹಾಗೂ ಪುನರಾವರ್ತಿತ 3 ಜನ ಸೇರಿ ಒಟ್ಟು 86 ಅಭ್ಯರ್ಥಿಗಳು ಗೈರಾಗಿದ್ದಾರೆ.

ಅನಾರೋಗ್ಯದ ಕಾರಣದಿಂದಾಗಿ ಒಬ್ಬ ವಿದ್ಯಾರ್ಥಿಯು ವಿಶೇಷ ಕೊಠಡಿಯಲ್ಲಿ ಹಾಗೂ ಕೋವಿಡ್ ದೃಢಪಟ್ಟಿರುವ ಕಾರಣ ಮತ್ತೊಂದು ವಿದ್ಯಾರ್ಥಿಯು ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಪರೀಕ್ಷೆ ಬರೆದಿದ್ದಾರೆ. 310 ವಿದ್ಯಾರ್ಥಿಗಳು ಸರ್ಕಾರಿ/ ಖಾಸಗಿ ವಸತಿ ನಿಲಯಗಳಲ್ಲಿದ್ದು ಪರೀಕ್ಷೆಯನ್ನು ಪರೆದಿದ್ದಾರೆ. 343 ವಲಸೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ.

'ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಅಥವಾ ಅಹಿತಕರ ಘಟನೆ ನಡೆಯದೆ, ಶಾಂತಿಯುತ ಪರೀಕ್ಷೆ ನಡೆದಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.