ಕೊಪ್ಪಳ: ಜಿಲ್ಲೆಯ ಶಕ್ತಿಕೇಂದ್ರವಾಗಿರುವ ಕೊಪ್ಪಳಕ್ಕೆ ಸಾರ್ವಜನಿಕರು ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಬರುತ್ತಲೇ ಇರುತ್ತಾರೆ. ಆದರೆ ಅವರಿಗೆ ನಗರದ ಸಂಚಾರದ ಅಶಿಸ್ತಿನ ಬಿಸಿ ಕಾಡಿರುತ್ತದೆ.
ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಸಂಚಾರ ನಿಯಮ ಲೆಕ್ಕಕ್ಕೇ ಇಲ್ಲವೇನೋ? ಎನ್ನುವಂಥ ವರ್ತನೆ, ಎಲ್ಲಿ ಬೇಕಾದರೂ ವಾಹನಗಳನ್ನು ನಿಲ್ಲಿಸಿ ಹೋದರೂ ನಡೆಯುತ್ತದೆ ಎನ್ನುವ ಉಡಾಫೆ ಮತ್ತು ಜವಾಹರ ರಸ್ತೆಯಲ್ಲಿ ಜನರಿಗೆ ಓಡಾಟಕ್ಕೂ ಕಷ್ಟವಾಗುವ ರೀತಿಯ ವಾಹನಗಳ ಅಬ್ಬರ...ಹೀಗೆ ಅನೇಕ ಸಮಸ್ಯೆಗಳು ನಗರದಲ್ಲಿ ಅನೇಕ ವರ್ಷಗಳಿಂದ ಇವೆ. ಯಾರೇ ನೂತನ ಪೊಲೀಸ್ ಅಧಿಕಾರಿಗಳು ಬಂದರೂ ಒಂದಷ್ಟು ದಿನ ಕರಾರುವಾಕ್ಕಾಗಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಬಳಿಕ ಎಲ್ಲವೂ ಸಹಜವಾಗಿ ನಿಯಮಗಳು ಗೊತ್ತೇ ಇಲ್ಲವೇನು ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.
ಹೀಗಾಗಿ ಇಲ್ಲಿನ ಲೇಬರ್ ಸರ್ಕಲ್, ವರ್ಣೇಕರ್ ಕಾಂಪ್ಲೆಕ್ಸ್ ಮುಂಭಾಗ, ಬಸ್ ನಿಲ್ದಾಣದ ಸಮೀಪ, ಅಶೋಕ ಸರ್ಕಲ್, ಬಸವೇಶ್ವರ ವೃತ್ತ(ಗಂಜ್ ಸರ್ಕಲ್) ಹೀಗೆ ಪ್ರಮುಖ ಸ್ಥಳಗಳಲ್ಲಿ ನಿತ್ಯ ವಾಹನಗಳ ದಟ್ಟಣೆ ಕಂಡುಬರುತ್ತದೆ. ನಿತ್ಯ ಲಕ್ಷಾಂತರ ಜನ ಓಡಾಡುವ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿಯೂ ನಿತ್ಯ ಇದೇ ಸಮಸ್ಯೆ. ಇದರಿಂದ ಪಾದಚಾರಿಗಳಿಗೆ ಹಾಗೂ ದ್ವಿಚಕ್ರವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಿಂದೆ ಅನೇಕ ಬಾರಿ ಜಿಲ್ಲಾ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.
ಬಸ್ ನಿಲ್ದಾಣದ ಮುಂಭಾಗದಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಥದ ಗುರುತು (ಮಾರ್ಕ್) ಮಾಡಿದ್ದರೂ ಯಾರೂ ಅಲ್ಲಿ ವಾಹನಗಳನ್ನು ನಿಲ್ಲಿಸುತ್ತಿರಲಿಲ್ಲ. ಹೀಗಾಗಿ ಮತ್ತೆ ಸಂಚಾರದ ಅವ್ಯವಸ್ಥೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿ ಆಗಿ ಬಂದಿರುವ ಡಾ. ರಾಮ್ ಎಲ್. ಅರಸಿದ್ಧಿ ಅವರು ಮೊದಲ ಆದ್ಯತೆಯಾಗಿ ‘ಶಿಸ್ತಿನ ಸಂಚಾರ’ಕ್ಕೆ ಆದ್ಯತೆ ನೀಡಿದ್ದಾರೆ.
ಕಿನ್ನಾಳ ರಸ್ತೆ, ಜವಾಹರ ರಸ್ತೆ ಹಾಗೂ ಬಸ್ ನಿಲ್ದಾಣ ಹೀಗೆ ಪ್ರಮುಖ ಪ್ರದೇಶಗಳ ಸಂಪರ್ಕ ಕೊಂಡಿ ಅಶೋಕ ವೃತ್ತ ನಾಲ್ಕೂ ದಿಕ್ಕಿನಲ್ಲಿ ನೇರವಾಗಿ ಹೋಗುವವರು ಹಾಗೂ ಎಡಭಾಗಕ್ಕೆ ಹೋಗುವವರಿಗೆ ಬ್ಯಾರಿಕೇಡ್ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ. ಸಿಗ್ನಲ್ ಬೀಳುವ ತನಕ ಕಾದು ಸಂಚಾರ ನಿಯಮಕ್ಕೆ ಅನುಗುಣವಾಗಿಯೇ ತೆರಳಬೇಕಾದ ಶಿಸ್ತು ಜಾರಿಗೆ ತರಲಾಗಿದೆ. ಇದಕ್ಕಾಗಿ ಸಂಚಾರ ಠಾಣೆಯ ಪೊಲೀಸರು ಬೆಳಿಗ್ಗೆಯಿಂದಲೇ ಸಂಜೆ ತನಕ ಕೆಲಸ ಮಾಡುತ್ತಿದ್ದಾರೆ. ಮೈಕ್ ಮೂಲಕ ಜನರಿಗೆ ಸಂಚಾರ ನಿಯಮ ಪಾಲನೆಯ ಸಂದೇಶಗಳನ್ನು ತಿಳಿಸುತ್ತಿದ್ದಾರೆ.
ತಿಳಿವಳಿಕೆ ಹೇಳಿದ ಮೇಲೂ ಅನೇಕ ವಾಹನಗಳ ಸವಾರರು ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ರಸ್ತೆಯ ಬದಿಯಿರುವ ಅಂಗಡಿಗಳ ಮುಂದೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವ ವಾಹನಗಳಿಗೆ ಬೀಗ ಹಾಕುತ್ತಿದ್ದಾರೆ. ಈ ಭಯದಿಂದ ಸಾರ್ವಜನಿಕರು ಕೂಡ ನಿಧಾನವಾಗಿ ‘ಸಂಚಾರ ಶಿಸ್ತಿ’ಗೆ ಹೊಂದಿಕೊಳ್ಳುತ್ತಿದ್ದಾರೆ.
ಹೊಸ ಎಸ್.ಪಿ. ಬಂದ ಬಳಿಕ ಬದಲಾವಣೆ ಆಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದ್ದು ’ಸಂಚಾರದ ಶಿಸ್ತು ಪಾಲನೆ ನಿರಂತರವಾಗಿರಬೇಕು. ಕೆಲ ದಿಕನಗಳಿಗೆ ಮಾತ್ರ ಸೀಮಿತವಾದರೆ ಆರಂಭಿಕ ಶ್ರಮ ಪ್ರಯೋಜನವಾಗುವುದಿಲ್ಲ’ ಎಂದು ಹೇಳುತ್ತಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕೆಲಸಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡದ ರೈತ ಮಲ್ಲಪ್ಪ ಬಸಾಪುರ, ‘ಹಳ್ಳಿಗಳ ಜನರ ಮೇಲಷ್ಟೇ ಪೊಲೀಸರು ಅಧಿಕಾರ ಚಲಾಯಿಸುತ್ತಾರೆ. ದ್ವಿಚಕ್ರವಾಹನಗಳ ದಾಖಲಾತಿ, ಚಾಲನಾ ಪರವಾನಗಿ, ಹೆಲ್ಮೆಟ್ ಕೇಳುತ್ತಾರೆ. ಅದೇ ನಗರ ಪ್ರದೇಶದವರು ಎಂದು ಮುಖಭಾವ ನೋಡಿ ಗೊತ್ತಾದರೆ ಅವರನ್ನು ಯಾರೂ ಕೇಳುವುದೇ ಇಲ್ಲ. ಇದು ಸರಿಯೇ’ ಎಂದು ಪ್ರಶ್ನಿಸಿದರು. ಹೀಗಾಗಿ ಪೊಲೀಸರು ಕಾನೂನುಬದ್ಧವಾಗಿ ಎಲ್ಲರನ್ನೂ ಪ್ರಶ್ನಿಸುವ ಮತ್ತು ಒಂದೇ ರೀತಿ ನಡೆದುಕೊಳ್ಳುವ ಅಗತ್ಯತೆಯೂ ಇದೆ.
ಕೊಪ್ಪಳದ ಅಶೋಕ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು –
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.