ADVERTISEMENT

ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಅಕ್ರಮ ಮೀನುಗಾರಿಕೆ ತಡೆಗೆ ಆಗ್ರಹ

ಹೈಕೋರ್ಟ್ ಆದೇಶ ಪಾಲನೆ: ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 12:28 IST
Last Updated 13 ಮೇ 2019, 12:28 IST

ಕೊಪ್ಪಳ:ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಅಕ್ರಮವಾಗಿ ಆಲಿವ್ ನೆಟ್ (ನೈಲಾನ್ ಬಲೆ) ಹಾಕಿ ನಿಯಮ ಉಲ್ಲಂಘಿಸಿ ಮೀನು ಹಿಡಿಯುತ್ತಿರುವ ಮೀನುಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತುಂಗಭದ್ರಾ ಮೀನು ಹಿಡಿಯುವವರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮೀನುಗಾರಿಕೆ ಇಲಾಖೆಯ ಸುತ್ತೋಲೆ ಮತ್ತು ಪ್ರಸ್ತುತ ಟೆಂಡರ್ ಪ್ರಕಾರ ನಿಷೇಧಿತ 8 ಅಲಿವ್ ನೆಟ್ಟಿನ 60 ರಿಂದ 70 ಬಲೆಗಳ ಬಳಕೆ ಮುಂದುವರೆಸಿದ್ದು, ಇದರ ಬಗ್ಗೆ ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ದೂರುಗಳನ್ನು ನೀಡಿ ತಡೆಗೆ ಪ್ರಯತ್ನಿಸಿದರೂ ಪ್ರಯೋಜನವಾಗದೆಹೈಕೋರ್ಟ್‌ನಲ್ಲಿಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ನಿಷೇಧ ಹೇರಬೇಕು ಎಂದು ಸಂಬಂಧಿಸಿದ ಎಲ್ಲ ಇಲಾಖೆಗೆ ಆದೇಶ ನೀಡಿದರೂ ಅಕ್ರಮವಾಗಿ ಮರಿ ಮೀನುಗಳನ್ನು 8 ಅಲಿವ್ ನೆಟ್‍ಗಳ 60 ರಿಂದ 70 ಬಲೆಗಳನ್ನು ಬಳಕೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಸಾಗಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಟೆಂಡರ್ ಷರತ್ತಿನ ಪ್ರಕಾರ 80 ಎಂ.ಎಂ. ಅಳತೆ ಬಲೆಗಳನ್ನು ಸೆಪ್ಟೆಂಬರ್‌ನಿಂದಮೇ ತಿಂಗಳವರೆಗೆ ಮತ್ತು 20-40 ಎಂ.ಎಂ. ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ಬಲೆಗಳನ್ನು ಫೆಬ್ರುವರಿಯಿಂದ ಮೇ ತಿಂಗಳವರೆಗೆ ಮೀನುಗಳನ್ನು ಹಿಡಿಯುವ ನಿಯಮಗಳಿವೆ. ಆದರೆ ಈ ನಿಯಮಗಳೆಲ್ಲ ಗಾಳಿಗೆ ತೂರಿ ಝೀರೋ ಸೈಜಿನ (ಸೊಳ್ಳೆ ಪರದೆಯಂತೆ) ಬಲೆಗಳನ್ನು ಬಳಕೆ ಮಾಡಿ ಆಗ ತಾನೆ ಹುಟ್ಟಿದ ಮರಿ ಮೀನುಗಳನ್ನು ಅಕ್ರಮವಾಗಿ ಹಿಡಿದು ದುಬಾರಿ ಬೆಲೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಮರಿ ಮೀನುಗಳನ್ನು ಅಕ್ರಮವಾಗಿ ಹಿಡಿಯುವುದನ್ನು ತಡೆಯಲು ಪ್ರತಿವರ್ಷ ನಿರಂತರ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡುತ್ತಾ ಬಂದರೂ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಟಿ.ಬಿ.ಡ್ಯಾಂನ ತುಂಗಭದ್ರಾ ಮಂಡಳಿಯಲ್ಲಿ ಆಂಧ್ರ ಪ್ರದೇಶದ ಅಧಿಕಾರಿಗಳು ಇರುವುದು ಮತ್ತು ತುಂಗಭದ್ರಾ ಮೀನುಗಾರಿಕೆಯ ಸಹಕಾರ ಸಂಘ ನಿ. ಮುಂಡರಗಿ ತಾಲ್ಲೂಕಿನ ಇವರ ಬದಲಿಗೆ ನಿಯಮ ಬಾಹಿರವಾಗಿ ಉಪಗುತ್ತಿಗೆ ಪಡೆದವರು ಅಕ್ರಮವಾಗಿ ಮರಿ ಮೀನು ಹಿಡಿಯುತ್ತಿರುವವರು ಆಂಧ್ರಮೂಲದ ಮೀನುಗಾರರೇ ಆಗಿದ್ದಾರೆ. ಈ ಅಕ್ರಮಕ್ಕೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ಸಂಶಯವಿದೆ ಎಂದು ಮೀನುಗಾರರ ಸಂಘದ ಸದಸ್ಯರು ತಿಳಿಸಿದ್ದಾರೆ.

ಸದ್ಯ ತುಂಗಭದ್ರಾ ನದಿಯಲ್ಲಿ ಕಡಿಮೆ ನೀರಿದ್ದು, ಪ್ರತಿ ರಾತ್ರಿ ತುಂಗಭದ್ರಾ ನದಿಯಲ್ಲಿ ಝೀರೋ ಸೈಜಿನ ಬಲೆಗಳನ್ನು ಬಳಸಿ ಮರಿ ಮೀನುಗಳನ್ನು ಹಿಡಿಯುತ್ತಿದ್ದರಿಂದ ಇಡಿಜಲಾಶಯದ ನೀರಿನಲ್ಲಿ ಬಲೆಗಳನ್ನು ತಳದಿಂದ ತರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ.ಕೊಪ್ಪಳ ನಗರ ಸೇರಿದಂತೆ ವಿವಿಧ ಊರುಗಳಿಗೆ ಕುಡಿಯಲು ಪೂರೈಕೆಯಾಗುತ್ತಿರುವ ನೀರು ಮಲೀನವಾಗುತ್ತಿದ್ದು ಇದರಿಂದ ಅನೇಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಕ್ರಮ ತಡೆಯದಿದ್ದರೆ ಮೀನುಗಾರರ ಸಂಘದ ಸದಸ್ಯರ ನೇತೃತ್ವದಲ್ಲಿ ಮೇ 15ರಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಉಪಾಧ್ಯಕ್ಷ ಸಣ್ಣರಾಜಪ್ಪ ಬಿ ಪೂಜಾರ್, ಜನಪರ ಒಕ್ಕೂಟಗಳ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಎಚ್ಚರಿಕೆ ನೀಡಿದ್ದಾರೆ.

ಕರಿಯಪ್ಪ ಹ್ಯಾಟಿ, ನಾಸೀರ್ಸಾಬ್, ರಾಜಾಸಾಬ್, ಮೌಲಾಹುಸೇನ, ಫಕ್ರುಸಾಬ್ ಗೊಂಡಬಾಳಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.