
ಕೊಪ್ಪಳ: ಶಾಲಾ, ಕಾಲೇಜು ಆರಂಭದ ಸಮಯಕ್ಕೆ ಅನುಗುಣವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ಬರುವ ಬಹಳಷ್ಟು ಬಸ್‌ಗಳು ’ನಾನ್ ಸ್ಟಾಪ್’ ಎನ್ನುವ ಫಲಕ ಹಾಕಿಕೊಳ್ಳುತ್ತಿದ್ದು, ಇದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಬೂದಗುಂಪಾದಲ್ಲಿ ಬುಧವಾರ ರಸ್ತೆ ಮೇಲೆ ಬಸ್‌ಗಳನ್ನು ತಡೆದು ದಿಢೀರ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಸ್ ಮುಂಭಾಗದಲ್ಲಿ ಕುಳಿತ ವಿದ್ಯಾರ್ಥಿಗಳು ‘ಬಸ್‌ನಲ್ಲಿ ಜೋತುಬಿದ್ದು ಸಾವಿನೊಂದಿಗೆ ಪ್ರಯಾಣ ಬೆಳೆಸುವ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳ ಕೊರತೆಯಿಂದ ಸರಿಯಾದ ಸಮಯಕ್ಕೆ ಶಾಲಾ, ಕಾಲೇಜಿಗೆ ಹೋಗಲಾಗದೆ ಅಲ್ಲಿಯೂ ಬೈಯಿಸಿಕೊಳ್ಳಬೇಕಾಗ ಸ್ಥಿತಿ ಎದುರಾಗಿದೆ. ಬಸ್‌ಗಳು ಇದ್ದರೂ ನಿಲುಗಡೆ ಮಾಡುವುದಿಲ್ಲ’ ಎಂದು ಆರೋಪಿಸಿದರು.
ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಮುಖಂಡರು ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.
ಬೆಂಬಲ: ವಿದ್ಯಾರ್ಥಿಗಳ ಹೋರಾಟಕ್ಕೆ ಎಐಡಿಎಸ್‌ಒ ಸಂಘಟನೆ ಬೆಂಬಲ ವ್ಯಕ್ತಪಡಿಸಿ ‘ಬೂದಗುಂಪ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ತಂಗುದಾಣ ಇಲ್ಲದ ಕಾರಣ ಬಸ್‌ಗಳು ನಿಲುಗಡೆಯಾಗುತ್ತಿಲ್ಲ. ವಯೋವೃದ್ಧರು, ಮಕ್ಕಳು ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮುಖಂಡರಾದ ತುಳಜಾ ರಾಮ್ ಮತ್ತು ಸಿಂಧು ಕೌದಿ ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಚಲಕರಂಜಿ, ಹುಬ್ಬಳ್ಳಿ, ಕಾರವಾರ, ಸಿಂಧನೂರು ಮತ್ತು ರಾಯಚೂರು ಸೇರಿದಂತೆ ಎಲ್ಲಾ ವೇಗದೂತ ಬಸ್‌ಗಳನ್ನು ನಿಲ್ಲಿಸಬೇಕು, ಎರಡು ಕಡೆ ಬಸ್ ತಂಗುದಾಣ ಆರಂಭಿಸಬೇಕು ಎಂದು ಸಾರಿಗೆ ಮೇಲ್ವಿಚಾರಕ ಮಂಜುನಾಥ್ ಮತ್ತು ಗ್ರಾಮ ಪಂಚಾಯಿತಿ ಪಿಡಿಒಗೆ ಮನವಿ ಸಲ್ಲಿಸಲಾಯಿತು. ಎರಡ್ಮೂರು ತಾಸು ಪ್ರತಿಭಟನೆ ನಡೆದಿದ್ದರಿಂದ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದವು.
ವಿದ್ಯಾರ್ಥಿಗಳಾದ ಭಾಗ್ಯಶ್ರೀ, ಮಂಜವ್ವ, ಕವಿತಾ, ಕೀರ್ತನ ಪವಿತ್ರಾ, ಹನುಮಂತಿ, ಶಶಿಕಲಾ, ಅಕ್ಷತಾ, ಕರಿಯಮ್ಮ, ನಫೀಜಾ, ಕರಿಯಣ್ಣ, ಮಲ್ಲಿಕಾರ್ಜುನ, ದೀಪಿಕಾ, ಬಸಮ್ಮ, ರೇಣುಕಾ, ಭೀಮಶ್ರೀ, ಸೌಂದರ್ಯ, ಲಕ್ಷ್ಮಿ, ರೈತ ಸಂಘಟನೆಯ ಹನುಮಂತಪ್ಪ, ಫಕೀರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬಸಾಪುರದಲ್ಲಿ ಹೋರಾಡಿದ್ದ ವಿದ್ಯಾರ್ಥಿಗಳು
ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಬಸಾಪುರ ಗ್ರಾಮ ಜಿಲ್ಲಾಕೇಂದ್ರದಲ್ಲಿ ಸಮೀಪದಲ್ಲಿದ್ದರೂ ಸಮರ್ಪಕ ಸೌಲಭ್ಯಗಳಿಲ್ಲದ ಕಾರಣಕ್ಕೆ ಪರದಾಡುವಂತಾಗಿದೆ. ಹೀಗಾದರೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೇಗೆ ಹೋಗಬೇಕು? ಎಂದು ಪ್ರಶ್ನಿಸಿದರು. ಬಳಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.