ADVERTISEMENT

ಗಂಗಾವತಿ: ಬಸ್ ನಿಲುಗಡೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:25 IST
Last Updated 22 ನವೆಂಬರ್ 2024, 4:25 IST
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಗುರುವಾರ ವಡ್ಡರಹಟ್ಟಿ ಗ್ರಾಮದ ನಾಗರಿಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ಬಸ್ಸುಗಳ ನಿಲುಗಡೆಗೆ ಒತ್ತಾಯಿಸಿ, ಬಸ್ ತಡೆದು ಪ್ರತಿಭಟನೆ ನಡೆಸಿದರು
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಗುರುವಾರ ವಡ್ಡರಹಟ್ಟಿ ಗ್ರಾಮದ ನಾಗರಿಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ಬಸ್ಸುಗಳ ನಿಲುಗಡೆಗೆ ಒತ್ತಾಯಿಸಿ, ಬಸ್ ತಡೆದು ಪ್ರತಿಭಟನೆ ನಡೆಸಿದರು   

ಗಂಗಾವತಿ: ಸಾರಿಗೆ ಇಲಾಖೆ ಬಸ್ಸುಗಳ ನಿಲುಗಡೆಗೆ ಒತ್ತಾಯಿಸಿ, ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಗುರುವಾರ ನಾಗರಿಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಪ್ಯಾರಾಮೆಡಿಕಲ್ ಕಾಲೇಜುಗಳಿಗೆ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಗಂಗಾವತಿ ಸೇರಿ ಕೊಪ್ಪಳ ನಗರಕ್ಕೆ ತೆರಳುತ್ತಾರೆ. ಬೆಳಿಗ್ಗೆ ಸಮಯಕ್ಕೆ ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ, ನಿತ್ಯ ಕಾಲೇಜಿನ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಡ್ಡರಹಟ್ಟಿ ಗ್ರಾಮ ಬೃಹತ್ ಆಗಿ ಬೆಳೆದು, ಅಪಾರ ಜನಸಂಖ್ಯೆ ಹೊಂದಿದೆ. ಆದರೇ ಗ್ರಾಮದಲ್ಲಿ ಬಸ್ಸುಗಳೇ ನಿಲ್ಲಿಸುತ್ತಿಲ್ಲ.

ಯಲಬುರ್ಗಾ, ಕುಷ್ಟಗಿ, ಕುಕನೂರುನಿಂದ ಹಳ್ಳಿ ಮಾರ್ಗವಾಗಿ ಬರುವ ಬಸ್ಸುಗಳು, ಗಂಗಾವತಿಯಿಂದ ಕೊಪ್ಪಳ್ಕಕ್ಕೆ ತೆರಳುವ ಬಸ್ಸುಗಳು ಪ್ರಯಾಣಿಕರಿಂದ ಭರ್ತಿಯಾಗಿ ಬರುತ್ತಿದ್ದು, ಹೆಚ್ಚಿನ ಪ್ರಯಾಣಕರನ್ನು ಹತ್ತಿಸಿಕೊಳ್ಳಲು ಜಾಗದ ಕೊರತೆ ಕಾರಣ ವಡ್ಡರಹಟ್ಟಿಯಲ್ಲಿ ಬಸ್ಸುಗಳೇ ನಿಲ್ಲಿಸುತ್ತಿಲ್ಲ. ಹಾಗಾಗಿ ವಿದ್ಯಾಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನಿವಾರ್ಯವಾಗಿ ಹಣನೀಡಿ, ಆಟೊ, ಖಾಸಗಿ ವಾಹನಗಳನ್ನ ಆಶ್ರಯಿಸಬೇಕಾಗಿದೆ. ಈಚೆಗೆ ವೆಂಕಟಗಿರಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಡ್ಡರಹಟ್ಟಿ ಗ್ರಾಮದಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವಿದ್ಯಾರ್ಥಿನಿ ರುದ್ರಮ್ಮ ಮಾತನಾಡಿ, ‘ನಿತ್ಯ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ವಡ್ಡರಹಟ್ಟಿ ಬಸ್ ನಿಲ್ದಾಣಕ್ಕೆ ಬೆಳಿಗ್ಗೆ 7ಕ್ಕೆ ಆಗಮಿಸುತ್ತಾರೆ. ಆದರೆ ಬಸ್ಸುಗಳನ್ನು ನಿಲ್ಲಿಸಲ್ಲ. ಬಸ್ಸಿಗಾಗಿ ಕಾದು, ಕಾದು ಸುಸ್ತಾಗುತ್ತಾರೆ. ಕೆಲವೊಮ್ಮೆ ತುಂಬಿದ ಬಸ್ಸಿನಲ್ಲಿಯೇ ಜೋತು ಬಿದ್ದು ಹೋಗುವ ಘಟನೆಗಳು ಸಹ ನಡೆದಿವೆ. ಅಹಿತಕರ ಘಟನೆಗಳು ನಡೆಯುವ ಮುನ್ನವೇ, ಗಂಗಾವತಿ ಬಸ್ ಡಿಪೋ ಅಧಿಕಾರಿಗಳು ಎಚ್ಚೆತ್ತು, ವಡ್ಡರಹಟ್ಟಿ ಗ್ರಾಮದಲ್ಲಿ ಸಮಯಕ್ಕೆ ಬಸ್ ವ್ಯವಸ್ಥೆ ಜತೆಗೆ ಬಸ್ ನಿಲುಗಡೆಗೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಗ್ರಾ.ಪಂ.ಸದಸ್ಯ ಮೇರಾಜ್ ದಳಪತಿ, ವಡ್ಡರಹಟ್ಟಿ ನಾಗರಿಕ ಸಮಿತಿಯ ಹರನಾಯಕ, ವೆಂಕಟೇಶ ತಳವಾರ, ಲಕ್ಷ್ಮಣ್‌, ಹನುಮಂತಪ್ಪ, ಯರಿಸ್ವಾಮಿಗೌಡ, ಶಿವರಾಜ ಡಂಬರ್, ಹುಲಗಪ್ಪ ಸಿರವಾರ, ಬಾರೀಮ್ ಸಾಬ, ದಾವಲಸಾಬ ಮುಲ್ಲಾರ್, ಯಮನೂರಪ್ಪ, ನೀಲಪ್ಪ ದೋಟಿಹಾಳ, ಹನುಮೇಶ ಬಳ್ಳಾರಿ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.