ADVERTISEMENT

ಕುಷ್ಟಗಿ: ತೊಗರಿಗೆ ಬೇಕಿದೆ 'ಬೆಂಬಲ ಬೆಲೆ ಭಾಗ್ಯ'

ಜಿಲ್ಲೆಯಲ್ಲಿ ತೊಗರಿಗೆ ಉತ್ತಮ ಇಳುವರಿ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಿ ಕುಸಿದ ದರ

ನಾರಾಯಣರಾವ ಕುಲಕರ್ಣಿ
Published 8 ಡಿಸೆಂಬರ್ 2025, 6:21 IST
Last Updated 8 ಡಿಸೆಂಬರ್ 2025, 6:21 IST
ಕುಷ್ಟಗಿ ಎಪಿಎಂಸಿ ಪ್ರಾಂಣಗದಲ್ಲಿ ರೈತರ ತೊಗರಿಯನ್ನು ಸಾಣಿಗೆಯಲ್ಲಿ ಸ್ವಚ್ಛಗೊಳಿಸುತ್ತಿರುವುದು
ಕುಷ್ಟಗಿ ಎಪಿಎಂಸಿ ಪ್ರಾಂಣಗದಲ್ಲಿ ರೈತರ ತೊಗರಿಯನ್ನು ಸಾಣಿಗೆಯಲ್ಲಿ ಸ್ವಚ್ಛಗೊಳಿಸುತ್ತಿರುವುದು   

ಕುಷ್ಟಗಿ: ಜಿಲ್ಲೆಯಲ್ಲಿ ಮೆಕ್ಕೆಜೋಳ ಹೊರತುಪಡಿಸಿದರೆ ದ್ವಿದಳ ಧಾನ್ಯವಾಗಿರುವ ತೊಗರಿ ಪ್ರಮುಖ ವಾಣಿಜ್ಯ ಬೆಳೆಯೂ ಹೌದು. ಇಳುವರಿ ವಿಚಾರದಲ್ಲಿ ರೈತರಲ್ಲಿ ಖುಷಿಯೇನೊ ಇದೆ. ಆದರೆ ಮಾರುಕಟ್ಟೆಯಲ್ಲಿ ದರ ಕುಸಿತ ಮತ್ತೆ ಚಿಂತೆಗೀಡುಮಾಡಿದೆ.

ಮಳೆ ಬಿಡುವು ಮಾಡಿಕೊಂಡಿದ್ದು ಕಳೆದ ಒಂದು ವಾರದಿಂದಲೂ ತೊಗರಿ ಕಟಾವು ಭರ್ಜರಿಯಾಗಿ ನಡೆಯುತ್ತಿದೆ. ಕಾರ್ಮಿಕರ ಕೊರತೆ, ದುಬಾರಿ ಕೂಲಿ ಇರುವುದರಿಂದ ತೊಗರಿ ಬಹುತೇಕ ಕಟಾವು ಯಂತ್ರಗಳಿಂದಲೇ ನಡೆಯುತ್ತಿರುವುದು ಕಂಡುಬಂದಿದೆ. ಹೊಲದಲ್ಲಿಯೇ ಕಟಾವಿನ ನಂತರ ತೊಗರಿ ಒಣಗಿಸುವ ಮತ್ತು ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ. ತೊಗರಿ ಮೂಟೆಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ಮಾರಾಟಕ್ಕೆಂದು ತರುತ್ತಿದ್ದು ವಹಿವಾಟಿನಲ್ಲಿ ಏರುಗತಿ ಕಂಡುಬಂದಿದ್ದರೆ ದರ ಇಳಿಮುಖವಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರೈತರು ಆರಂಭದಿಂದಲೇ ಒತ್ತಾಯಿಸುತ್ತ ಬಂದಿದ್ದರು. ಆದರೆ ಶೇ 90ರಷ್ಟು ರೈತರು ಮೆಕ್ಕೆಜೋಳವನ್ನು ಕಡಿಮೆ ದರದಲ್ಲಿಯೇ ಮಾರಾಟಮಾಡಿ ಕೈಸುಟ್ಟುಕೊಂಡರು. ಆದರೂ ರಾಜಕೀಯ ಪಕ್ಷಗಳು ರೈತರಿಂದ ಮೆಕ್ಕೆಜೋಳ ಖರೀದಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈಗ ತೊಗರಿಯನ್ನು ರೈತರು ಕಡಿಮೆ ಬೆಲೆಗೆ ವರ್ತಕರಿಗೆ ಒಪ್ಪಿಸುವ ಮೊದಲು ಸರ್ಕಾರ ಖರೀದಿ ವಿಷಯದಲ್ಲಿ ಮಾರುಕಟ್ಟೆಗೆ ಮಧ್ಯಪ್ರವೇಶಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ADVERTISEMENT

ಹೆಚ್ಚುತ್ತಿರುವ ಆವಕ: ಮಸಾರಿಯಲ್ಲಿ ಮಾತ್ರ ಬೆಳೆಯುತ್ತಿದ್ದ ತೊಗರಿಯನ್ನು ಎರೆ ಭಾಗದಲ್ಲಿನ ರೈತರು ಕಡಲೆ, ಹೆಸರಿಗೆ ಪರ್ಯಾಯವಾಗಿ ಬೆಳೆದಿದ್ದು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ.

ಡಿ. 2ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕುಷ್ಟಗಿ ಎಪಿಎಂಸಿ ಪ್ರಾಂಗಣಕ್ಕೆ 3,540 ಕ್ವಿಂಟಲ್‌ ತೊಗರಿ ಬಂದಿದೆ. ಇದು ಆರಂಭವಷ್ಟೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುವ ನಿರೀಕ್ಷೆ ಇದೆ ಎಂದು ಎಪಿಎಂಸಿ ಸಮಿತಿ ಕಾರ್ಯದರ್ಶಿ ಸುರೇಶ ತಂಗನೂರು ವಿವರಿಸಿದರು.

ರೈತರು ತೊಗರಿಯನ್ನು ದಲ್ಲಾಳಿ ವರ್ತಕರು ಸಾಣಿಗೆಗೆ ಹಾಕುತ್ತಿದ್ದು, ಸ್ವಚ್ಛಗೊಳಿಸಿದ ನಂತರವಷ್ಟೇ ಖರೀದಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ತೊಗರಿ ಅತ್ಯಂತ ಗುಣಮಟ್ಟದಿಂದ ಕೂಡಿದೆ. ಹಿಂದೆ ಕಳಪೆ ಮಾಲು ಬರುತ್ತಿದ್ದುದರಿಂದ ರೈತರು ಮತ್ತು ದಲ್ಲಾಳಿ ವರ್ತಕರ ಮಧ್ಯೆ ದರ ವಿಷಯದಲ್ಲಿ ಜಟಾಪಟಿ ನಡೆಯುತ್ತಿತ್ತು. ಈ ವರ್ಷ ಅಂಥ ಸಮಸ್ಯೆ ಇಲ್ಲ ಎನ್ನುತ್ತಾರೆ ಎಪಿಎಂಸಿ ವರ್ತಕ ಬಸವರಾಜ.

ತೊಗರಿ ಕಾಳು ಒಕ್ಕಣೆಯಲ್ಲಿ ತೊಡಗಿರುವ ರೈತ ಮಹಿಳೆ
ಈ ಬಾರಿ ತೊಗರಿ ಉತ್ತಮ ಇಳುವರಿ ಬಂದಿದೆ ನಾವು ತೊಗರಿ ಬೆಳೆದರೂ ಜಿಪಿಎಸ್‌ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ನಮೂದಾಗದ ಕಾರಣ ಕೇಳಿದಷ್ಟು ದರಕ್ಕೆ ದಲ್ಲಾಳಿಗಳಿಗೆ ಕೊಟ್ಟು ಬಂದಿದ್ದೇನೆ
ಹನುಮಂತ ಚನ್ನದಾಸರ ಕಂದಕೂರು ರೈತ
ರೈತರ ತೊಗರಿ ದಲ್ಲಾಳಿಗಳ ಗೋದಾಮು ಸೇರಿದ ಮೇಲೆ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗುತ್ತದೆ. ಇದು ರೈತರ ದೌರ್ಭಾಗ್ಯ. ಈ ಬಗ್ಗೆ ಈ ಭಾಗದ ಸಚಿವರು ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕಿದೆ
ಶಂಕರಗೌಡ ಪಾಟೀಲ ಚಳಗೇರಿ ರೈತ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ನಾಫೆಡ್‌ದಿಂದ ಈ ಬಗ್ಗೆ ಸೂಚನೆ ಬರಬೇಕಿದೆ
ಕೃಷ್ಣಮೂರ್ತಿ  ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ
ತೊಗರಿ ಖರೀದಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಅಲ್ಲದೆ ರೈತರ ವಿಷಯವಾಗಿಯೇ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಪಕ್ಷದಿಂದ ನಿಲುವಳಿ ಸೂಚನೆ ಮಂಡಿಸುತ್ತೇವೆ
ದೊಡ್ಡನಗೌಡ ಪಾಟೀಲ  ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ

ಹೀಗಿದೆ ತೊಗರಿ ದರ ಪರಿಸ್ಥಿತಿ

ಕಳೆದ ವರ್ಷ ಆರಂಭದಲ್ಲಿ ತೊಗರಿ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರಕ್ಕೂ ಅಧಿಕ ದರದಲ್ಲಿ ಮಾರಾಟವಾದರೂ ನಂತರ ಬೆಲೆ ಕುಸಿದು ರೈತರು ಹಾನಿ ಅನುಭವಿಸಿದ್ದರು. ಸದ್ಯ ಇಲ್ಲಿಯ ಮಾರುಕಟ್ಟೆಯಲ್ಲಿ ತೊಗರಿ ದರ ಪ್ರತಿ ಕ್ವಿಂಟಲ್‌ಗೆ ಕನಿಷ್ಟ ₹ 6470ರಿಂದ ₹ 6880 ಗರಿಷ್ಠ ಬೆಲೆ ನಿಗದಿಯಾಗಿದೆ. ಕಳೆದ ವರ್ಷ ಕನಿಷ್ಠ ದರವೇ ₹7500 ಇತ್ತು. ಒಟ್ಟು 99576 ಕ್ವಿಂಟಲ್‌ ತೊಗರಿ ಈ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. 2025–26ರಲ್ಲಿ ಕೇಂದ್ರ ಸರ್ಕಾರ ₹ 8000 ಬೆಂಬಲ ಬೆಲೆ ನಿಗದಿಪಡಿಸಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಮಧ್ಯಪ್ರವೇಶಿಸಿದರೆ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತವೆ ಮಾರುಕಟ್ಟೆ ಮೂಲಗಳು.

ಬೆಳೆ ಸಮೀಕ್ಷೆ ಅಸಮರ್ಪಕ

ತೊಗರಿ ಬೆಳೆಯನ್ನು ಬಹಳಷ್ಟು ರೈತರು ಮೂಲ ಬೆಳೆಯಾಗಿ ಬೆಳೆದಿದ್ದರೂ ಸರ್ಕಾರದ ದಾಖಲೆಯಲ್ಲಿ ಸರಿಯಾಗಿ ನಮೂದಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಳೆ ಸಮೀಕ್ಷೆ ಕಾಟಾಚಾರಕ್ಕೆ ನಡೆದಿದೆ. ಜಿಪಿಎಸ್‌ ಮಾಡಲು ಬರುವ ಸಿಬ್ಬಂದಿ ಮೂಲೆಯಲ್ಲಿ ನಿಂತು ಬೆಳೆ ಸಮೀಕ್ಷೆ ನಡೆಸಿದ್ದಾರೆ. ತೊಗರೆ ಬೆಳೆದಿದ್ದರೂ ಅದು ಸಮೀಕ್ಷೆಯಲ್ಲಿ ಸೇರ್ಪಡೆಯಾಗದ ಕಾರಣ ಬಹುತೇಕ ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ದೋಟಿಹಾಳದ ರೈತರ ವೀರಭದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.