ಕೊಪ್ಪಳ: ’ಅಭಿವೃದ್ಧಿ ಹೀನವಾಗಿರುವ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಈಗ ಸಮೀಕ್ಷೆಯತ್ತ ಮುಖ ಮಾಡಿದೆ. ಯಾವ ಕಾರಣಕ್ಕಾಗಿ ಈ ಸಮೀಕ್ಷೆ ನಡೆಯುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಾತಿಗಳನ್ನು ತುಂಡು ತುಂಡು ಮಾಡಿ ಸಮೀಕ್ಷೆ ಯಾಕೆ ಮಾಡಬೇಕು. ವೈಫಲ್ಯಗಳೇ ತುಂಬಿಕೊಂಡಿರುವ ರಾಜ್ಯ ಸರ್ಕಾರ ಜನರ ಗಮನ ಬೇರೆ ಕಡೆ ಸೆಳೆಯಲು ಈ ಕೆಲಸ ಮಾಡುತ್ತಿದೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯ ಕಾಲಂನಲ್ಲಿ ತಮ್ಮ ಜಾತಿಯನ್ನು ಬರೆಯಿಸುವಂತೆ ಎಲ್ಲರಿಗೂ ತಿಳಿಸಲಾಗಿದೆ’ ಎಂದರು.
ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ’ಕೆರೆ ತುಂಬಿಸುವ ವಿಚಾರದಲ್ಲಿ ಶೇ. 90ರಷ್ಟು ಕಾಮಗಾರಿಯನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಉಳಿದ ಸಣ್ಣ ಕೆಲಸ ಮುಗಿಸಿ ನೀರು ತರಲು ಬಸವರಾಜ ರಾಯರಡ್ಡಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಕಟ್ಟಡಗಳನ್ನು ಕಟ್ಟಿಸಲು ಇರುವ ಆಸಕ್ತಿ ಬೇರೆ ವಿಷಯಗಳಲ್ಲಿ ಇಲ್ಲ’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ’ಜಿಲ್ಲಾಕೇಂದ್ರದ ಸಮೀಪದಲ್ಲಿ ಕಾರ್ಖಾನೆ ಬೇಡ ಎಂದು ಪರಿಷತ್‌ನಲ್ಲಿ ಅನೇಕ ಬಾರಿ ಮಾತನಾಡಿದ್ದೇನೆ. ಅಲ್ಲಿ ಕೊಟ್ಟ ಮಾತಿನಂತೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನಡೆದುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿ. ವೀರಪ್ಪ, ಮಹೇಶ, ಗಣೇಶ ಹೊರತಟ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.