ADVERTISEMENT

ಕುಡುಕರ ತಾಣವಾದ ಮಂಥನ ಸಭಾಂಗಣ

ಶಿವಕುಮಾರ್ ಕೆ
Published 12 ನವೆಂಬರ್ 2019, 19:30 IST
Last Updated 12 ನವೆಂಬರ್ 2019, 19:30 IST
ಸಭಾಂಗಣದ ಮುಂಭಾಗದಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು
ಸಭಾಂಗಣದ ಮುಂಭಾಗದಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು   

ಗಂಗಾವತಿ: ಸ್ವಚ್ಛತೆ ಹಾಗೂ ಇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ತಾಲ್ಲೂಕು ಕೇಂದ್ರ ಕಚೇರಿಯು ಅಸ್ವಚ್ಛತೆಯಿಂದ ಕೂಡಿದ್ದು, ಇದರ ಸಭಾಂಗಣವು ಕುಡುಕರ ತಾಣವಾಗುತ್ತಿದೆ.

ಸ್ವಚ್ಛ ಭಾರತ ಮಿಷನ್, ಬಯಲು ಶೌಚಮುಕ್ತ, ಪ್ಲಾಸ್ಟಿಕ್ ಮುಕ್ತ ನಗರ ಸೇರಿದಂತೆ ಇತರ ಅನೇಕ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕಚೇರಿಯೇ ಈ ಸ್ಥಿತಿಗೆ ತಲುಪಿರುವುದು ದುರಂತ.

ನೂರಾರು ಜನರು ನಾನಾ ಕೆಲಸ ಕಾರ್ಯಗಳಿಗೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ನಿತ್ಯ ಬರುತ್ತಾರೆ. ಆದರೆ, ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಕಚೇರಿಯ ಮಂಥನ ಸಭಾಂಗಣವು ಕುಡುಕರ ಸಭಾಂಗಣವಾಗಿ ಮಾರ್ಪಟ್ಟಿದೆ.

ADVERTISEMENT

ಸಭಾಂಗಣದ ಆವರಣದ ಸುತ್ತಲೂಎಲ್ಲಿ ನೋಡಿದರೂ, ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಸಂಜೆಯಾದರೆ ಸಾಕು ಕುಡುಕರ ಸಭಾಂಗಣವಾಗಿ ಮಾರ್ಪಾಡಾಗಿರುತ್ತದೆ. ಸಭಾಂಗಣ ಕಟ್ಟಡದ ಗೋಡೆಗಳಲ್ಲಿ ತಂಬಾಕು ಉಗಿದಿರುವ ದೃಶ್ಯಗಳು, ಸಭಾಂಗಣದ ದ್ವಾರ ಭಾಗದಲ್ಲೇ ಎಲ್ಲೆಂದರಲ್ಲಿ ಬಿಸಾಡಿರುವ ಮದ್ಯದ ಬಾಟಲಿಗಳು, ಪಾಕೇಟ್‌ಗಳು ಕಣ್ಣಿಗೆ ರಾಚುತ್ತವೆ. ಇಷ್ಟೆಲ್ಲನಡೆಯುತ್ತಿದ್ದರೂ ಯಾವ ಅಧಿಕಾರಿಗಳು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.

ಸಭಾಂಗಣದ ಪಕ್ಕದಲ್ಲೇ ಗ್ರಂಥಾಲಯವಿದ್ದು, ನಿತ್ಯ ನೂರಾರು ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ, ಗ್ರಂಥಾಲಯದ ಸುತ್ತಲೂ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಇದರಿಂದ ಓದುಗರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಓದುಗರು ಅಳಲು ತೋಡಿಕೊಳ್ಳುತ್ತಾರೆ.

ಸಭಾಂಗಣದ ಮುಂಭಾಗದಲ್ಲಿ ಸಾಮಾರ್ಥ್ಯ ಸೌಧ, ಕನ್ನಡ ಸಾಹಿತ್ಯ ಭವನ ಹಾಗೂ ಕೃಷ್ಣದೇವರಾಯ ಭವನವೂ ಇದೆ. ಇಲ್ಲಿ ನಿತ್ಯ ಸಾಹಿತಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಬಂದು ಸಭೆ ನಡೆಸುತ್ತಾರೆ. ಆದರೆ, ಸಂಜೆಯಾದರೆ ಸಾಕು ಸಭಾಂಗಣದ ಆವರಣ ಕುಡುಕರ ಅಡ್ಡೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.