ಕಾರಟಗಿ: ಅನೇಕ ದಶಕಗಳಿಂದ ಸಾಗುವಳಿ ಮಾಡುತ್ತಾ, ಕಬ್ಜಾದಲ್ಲಿರುವ ಸರ್ಕಾರಿ ಜಮೀನನ್ನು ಬಡ ದಲಿತ ಕುಟುಂಬಗಳಿಗೆ ಮಂಜೂರು ಮಾಡಿ, ಸಾಗುವಳಿ ಚೀಟಿ, ಪಹಣಿ ಪತ್ರ ನೀಡಬೇಕು ಮತ್ತು ದೇವದಾಸಿಯರಿಗೆ ಮನೆ, ಭೂಮಿ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಸಿಪಿಐ (ಎಂ) ತಾಲ್ಲೂಕು ಘಟಕದ ನೇತೃತ್ವದಲ್ಲಿ 58 ದಿನಗಳಿಂದ ಕೈಗೊಂಡಿದ್ದ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬುಧವಾರ ತಹಶೀಲ್ದಾರ್ ಎಂ. ಕುಮಾರಸ್ವಾಮಿಯವರ ಭರವಸೆಯಿಂದ ಹಿಂದಕ್ಕೆ ಪಡೆಯಲಾಯಿತು.
ತಹಶೀಲ್ದಾರ್ ಎಂ. ಕುಮಾರಸ್ವಾಮಿ ತಮ್ಮ ಕಚೇರಿಯಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರನ್ನು ಅಹ್ವಾನಿಸಿ ಕಾನೂನು ತೊಡಕಿನಿಂದ ನಿಮ್ಮ ಬೇಡಿಕೆ ತಕ್ಷಣ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಕಾನೂನು ತೊಡಕು ನಿವಾರಿಸಿ ಆದ್ಯತೆಯ ಮೇರೆಗೆ ಹಕ್ಕುಪತ್ರ, ಪಹಣಿಗಳನ್ನು ಆದ್ಯತೆಯ ಮೇರೆಗೆ ವಿತರಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಉತ್ಸುಕತೆ ಹೊಂದಿ, ನಮಗೆ ಬೇಡಿಕೆ ಈಡೇರಿಸಲು ಸೂಚಿಸಿದ್ದಾರೆ. ಕಾನೂನು, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಧರಣಿ ಕೈಬಿಡಿ ಎಂದು ಮನವೊಲಿಸುವಲ್ಲಿ ಸಫಲರಾದರು.
ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಆದ್ಯತೆಯ ಮೇರೆಗೆ ಬೇಡಿಕೆ ಈಡೇರಿಸುವ ಭರವಸೆಯಿಂದ ಧರಣಿಯನ್ನು ಕೈಬಿಡಲಾಗಿದೆ ಎಂದು ಮುಖಂಡ ಬಸವರಾಜ ಮರಕುಂಬಿ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಸಿಂಗನಾಳ ಗ್ರಾಮದ ವಿವಿಧ ಸರ್ವೆ ನಂಬರ್‌ನಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ, ಪಹಣಿ ನೀಡಬೇಕು. ದೇವದಾಸಿ ಕುಟುಂಬಗಳಿಗೆ ಭೂಮಿ, ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಏ. 1ರಿಂದ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದರು. ಮೇ. 15ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ವಿಫಲವಾಗಿ, ಕೊನೆಗೆ ಸಚಿವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಓತ್ತಾಯಿಸಿದ್ದರು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಕೊನೆಗೂ ತಹಶೀಲ್ದಾರ್ ಎಂ. ಕುಮಾರಸ್ವಾಮಿ ಹೋರಾಟಗಾರರೊಂದಿಗಿನ ಮನವೊಲಿಕೆ ಯತ್ನ ಸಫಲವಾಗಿ ಧರಣಿ ಕೊನೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.