ADVERTISEMENT

ಯಲಬುರ್ಗಾ: ಒತ್ತುವರಿಯಿಂದ ಕಿರಿದಾಗುತ್ತಿರುವ ತಲ್ಲೂರು ಕೆರೆ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:29 IST
Last Updated 13 ನವೆಂಬರ್ 2025, 6:29 IST
<div class="paragraphs"><p>ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಹೊಂದಿಕೊಂಡು ರೈತರು ಒತ್ತುವರಿ ಮಾಡಿಕೊಂಡು ವಿವಿಧ ಕೃಷಿಯಲ್ಲಿ ತೊಡಗಿರುವ ದೃಶ್ಯ&nbsp;</p></div>

ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಹೊಂದಿಕೊಂಡು ರೈತರು ಒತ್ತುವರಿ ಮಾಡಿಕೊಂಡು ವಿವಿಧ ಕೃಷಿಯಲ್ಲಿ ತೊಡಗಿರುವ ದೃಶ್ಯ 

   

ಯಲಬುರ್ಗಾ: ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆ ಎಂಬ ಹಿರಿಮೆಗೆ ಪಾತ್ರವಾಗಿದ್ದ ತಲ್ಲೂರು ಕೆರೆ ಸುತ್ತಮುತ್ತಲಿನ ರೈತರು ಮಾಡಿಕೊಂಡಿರುವ ಒತ್ತುವರಿಯಿಂದಾಗಿ ಕಿರಿದಾಗುತ್ತಾ ಸಾಗಿದೆ.

ಸುತ್ತಮುತ್ತಲ ಪ್ರದೇಶಗಳಿಂದ ಕೆರೆಗೆ ಹರಿದು ಬರುವ ನೀರಿನ ಹರಿವುಗಳ ಮಾರ್ಗಗಳು ಬಂದ್ ಆಗಿವೆ. ಪರಿಣಾಮ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಸಾವಿರಾರು ಎಕರೆ ನೀರಾವರಿ ಕಲ್ಪಿಸಿಕೊಟ್ಟು ರೈತರ ಬಾಳು ಹಸನಾಗಲು ಕಾರಣವಾಗಿದ್ದ ಈ ತಲ್ಲೂರು ಕೆರೆಯ ಅಸ್ತಿತ್ವ ಉಳಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆತಂಕ ವಿವಿಧ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ADVERTISEMENT

‘ಈ ಬಗ್ಗೆ ಕೆರೆ ಸಂರಕ್ಷಣಾ ಸಮಿತಿಯವರು ವಿವಿಧ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸಂಬಂಧಪಟ್ಟವರು ಅನುಸರಿಸಬೇಕಾದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಕೆರೆಗೆ ಸಂಬಂಧಿಸಿದ ಒಟ್ಟಾರೆ ಜಮೀನು ನೀರಾವರಿ ಇಲಾಖೆಯ ಹೆಸರಿಗೆ ವರ್ಗಾವಣೆಯಾಗಿಲ್ಲ. ಇದುವರೆಗೂ ಕೆರೆಗೆ ಸೇರಿದ ಜಮೀನು ರೈತರ ಹೆಸರಲ್ಲಿಯೂ ಇರುವುದರಿಂದ ರೈತರು ವಿವಿಧ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಈ ಬಗ್ಗೆ ದುರ್ಗಾದೇವಿ ಕೆರೆ ಅಭಿವೃದ್ದಿ ಸಂಘದ ಸದಸ್ಯರು ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಅವನತಿಯತ್ತ ಸಾಗುತ್ತಿದೆ’ ಎಂದು ದೂರಿದ್ದಾರೆ.

‘ತಲ್ಲೂರು ಗ್ರಾಮಸ್ಥರ ಮನವಿಯ ಹಿನ್ನೆಲೆಯಲ್ಲಿ 2023ರಲ್ಲಿಯೇ ಶಾಸಕ ಬಸವರಾಜ ರಾಯರಡ್ಡಿ ಸಂಬಂಧಪಟ್ಟ ಅಧಿಕಾರಿಗಳ ಪತ್ರದ ಮೂಲಕ ಒತ್ತುವರಿಯನ್ನು ತೆರವುಗೊಳಿಸಿ ಹದ್ದುಬಸ್ತ್ ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಕೆರೆಯತ್ತ ಕಾಲಿಟ್ಟಿಲ್ಲ. ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿಯೂ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಚಿತ್ರನಟ ಯಶ್ ಕೂಡಾ ತಮ್ಮ ಸ್ವಂತ ಹಣದಿಂದ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸಂರಕ್ಷಣೆ ಮಾಡಿ ಉಳಿಸಿಕೊಳ್ಳುವತ್ತ ಕಾಳಜಿ ವಹಿಸುತ್ತಿಲ್ಲ. ಒಟ್ಟು 96 ಎಕರೆ ಪ್ರದೇಶದ ಕೆರೆಯಲ್ಲಿ ಸುಮಾರು 25-30 ಎಕರೆಯಷ್ಟು ಒತ್ತುವರಿಯಾಗಿದೆ’ ಎಂದು ತಲ್ಲೂರು ಗ್ರಾಮಸ್ಥರಾದ ಓಬಳೆಪ್ಪ ಕುಲಕರ್ಣಿ, ಪರಸಪ್ಪ ಬತ್ತಿ ಹಾಗೂ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಶಾಸಕ ರಾಯರಡ್ಡಿಯವರ ಪತ್ರಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಗಳು, ಗ್ರಾಮಸ್ಥರ ಮನವಿಗೆ ಸ್ಪಂದಿಸುವುದು ದೂರದ ಸಂಗತಿಯಾಗಿದೆ. ಸುಮಾರು ಎರಡು ವರ್ಷ ಕಳೆದರೂ ಕಾರ್ಯಗತಗೊಳಿಸಲು ಮನಸ್ಸು ಮಾಡದೇ ಇರುವುದನ್ನು ಗಮನಿಸಿದರೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒತ್ತುವರಿಯಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸಂರಕ್ಷಣೆ ಮತ್ತು ಒತ್ತುವರಿ ತೆರವುಕಾರ್ಯಕ್ಕೆ ಸಂಬಂಧಿಸಿದಂತೆ ಅಗತ್ಯಕ್ರಮಕ್ಕೆ ಮುಂದಾಗಬೇಕಾಗಿದೆ’ ಎಂದು ಸ್ಥಳೀಯ ಯುವ ವಕೀಲ ನಾಗರಾಜ ತಲ್ಲೂರು, ಸಿದ್ದನಗೌಡ ಗೌಡ್ರ ಹಾಗೂ ಇತರರು ಆಗ್ರಹಿಸಿದ್ದಾರೆ.

ವಜ್ರಬಂಡಿ ತಲ್ಲೂರು ಹಾಗೂ ಮದ್ಲೂರು ಗ್ರಾಮಗಳ ಸೀಮಾದಿಂದ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು ವರ್ಷಪೂರ್ತಿ ತುಂಬಿರುತ್ತಿತ್ತು. ಆದರೆ ವಿವಿಧ ರೀತಿಯಲ್ಲಿ ಕೆರೆ ಅಭಿವೃದ್ಧಿಯಾದ ನಂತರ ನೀರಿನ ಸಂಗ್ರಹಣೆಯ ಪ್ರಮಾಣ ಕಡಿಮೆಯಾಗಿದೆ
-ನಾಗರಾಜ ತಲ್ಲೂರು, ಗ್ರಾಮಸ್ಥ
ಗ್ರಾಮಸ್ಥರಿಗೆ ಪರಿಹಾರ ನೀಡಿ ಪಡೆದ ಜಮೀನನ್ನು ಕಂದಾಯ ಇಲಾಖೆಯವರು ಸಣ್ಣನೀರಾವರಿ ಇಲಾಖೆಯ ಹೆಸರಲ್ಲಿ ಆಸ್ತಿ ವರ್ಗಾವಣೆ ಮಾಡಿಕೊಟ್ಟರೆ ಮುಂದಿನ ಅಗತ್ಯಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ
- ಜಗನ್ನಾಥ ಜೋತಗೊಂಡದ್, ಎಇಇ, ಸಣ್ಣ ನೀರಾವರಿ ಇಲಾಖೆ ಯಲಬುರ್ಗಾ
ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಲ್ಲೂರು ಕೆರೆ ಒತ್ತುವರಿ ಬಗ್ಗೆ ದೂರುಗಳಿವೆ. ಸಣ್ಣ ನೀರಾವರಿ ಇಲಾಖೆ ಕೆರೆ ವಿಸ್ತೀರ್ಣಕ್ಕೆ ಹದ್ದುಬಸ್ತು ಮಾಡಿಕೊಟ್ಟರೆ ಸಂರಕ್ಷಣೆಗೆ ಅನುಕೂಲವಾಗುತ್ತದೆ
- ದೊಡ್ಡಪ್ಪ ನಾಯಕ, ಪಿಡಿಒ, ಗ್ರಾಪಂ ಗೆದಗೇರಿ
ಯಲಬುರ್ಗಾ ತಾಲ್ಲೂಕು ತಲ್ಲೂರು ಕೆರೆಗೆ ಸೇರಿದ ಜಮೀನಿನಲ್ಲಿ ರೈತರೊಬ್ಬರು ಮನೆ ಕಟ್ಟಿಕೊಂಡಿರುವುದು ಮತ್ತು ಬೆಳೆ ಬೆಳೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.