
ತಾವರಗೇರಾ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ದ್ವಿತೀಯ ಪಿಯು ಕನ್ನಡ ವಿಷಯದ ವಾರ್ಷಿಕ ಪರೀಕ್ಷೆ ನಡೆಯಿತು.
ಪರೀಕ್ಷಾ ಕೇಂದ್ರದ ಸುತ್ತಲೂ ಇಲಾಖೆ ನಿಯಮಾವಳಿ ಪ್ರಕಾರ ನಿಷೇಧ ಹೇರಲಾಗಿತ್ತು. ವೆಬ್ ಕಾಸ್ಟಿಂಗ್ ವ್ಯವಸ್ಥೆ ಮತ್ತು ನಕಲು ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊದಲ ದಿನದ ವಿಷಯ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು, ಸಂತೋಷದಿಂದ ಕ್ರಮ ಸಂಖ್ಯೆ, ಕೊಠಡಿ ಹುಡುಕಿಕೊಂಡು ಪರೀಕ್ಷೆ ಬರೆದರು.
ಕೇಂದ್ರದ 12 ಕೊಠಡಿಗಳಲ್ಲಿ ನೊಂದಣಿಯಾದ ಒಟ್ಟು 353 ವಿದ್ಯಾರ್ಥಿಗಳ ಪೈಕಿ, 336 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ಗೈರಾಗಿದ್ದರು. ಕೇಂದ್ರದಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ಭೀಮಪ್ಪ ಗೊಲ್ಲರ ತಿಳಿಸಿದರು.
ಪೊಲೀಸ್ ಸಿಬ್ಬಂದಿ ಅವ್ಯವಸ್ಥೆ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ವಿಭಾಗದ ಬಾಲಕಿಯರ ಪ.ಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಕನ್ನಡ ವಿಷಯ ಪರೀಕ್ಷೆ ಬಂದೋಬಸ್ತ್ ವೇಳೆ ಸ್ಥಳೀಯ ಪೋಲೀಸ್ ಸಿಬ್ಬಂದಿ ಕೊರತೆ ಕಂಡು ಬಂದಿತು.
ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಯಾಗಿದ್ದ ಕಾನ್‌ಸ್ಟೆಬಲ್ ಶರಣಪ್ಪ ಮತ್ತು ಎಸ್‌ಐ ಖಾಜಾಹುಸೇನ್ ಇಬ್ಬರಲ್ಲಿ ಒಬ್ಬರು ಮಾತ್ರ ಕರ್ತವ್ಯ ನಿರತರಾಗಿದ್ದರು. ಎಸ್‌ಐ ಖಾಜಾಹುಸೇನ್ ಅವರು ಒಬ್ಬರೇ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಆವರಣದಲ್ಲಿ ಆಗಮಿಸಿದ 336 ವಿದ್ಯಾರ್ಥಿಗಳು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಆದರೆ ಪರೀಕ್ಷೆ ಆರಂಭವಾಗಿ ಒಂದು ಗಂಟೆ ಕಳೆದರೂ ನಿಯೋಜಿತ ಕಾನ್‌ಸ್ಟೆಬಲ್ ಕರ್ತವ್ಯಕ್ಕೆ ಹಾಜರಾಗಲಿಲ್ಲ.
ಈ ಕುರಿತು ಎಸ್‌ಐ ಚಂದ್ರಪ್ಪ ಎಚ್. ಅವರನ್ನು ಸಂಪರ್ಕಿಸಿದಾಗ, ಕೇಂದ್ರದ ಬಂದೋಬಸ್ತ್ ಕರ್ತವ್ಯಕ್ಕೆ ಇಬ್ಬರನ್ನು ನಿಯೋಜಿಸಲಾಗಿದೆ. ಆದರೆ ಎಸ್‌ಐ ಮಾತ್ರ ಕರ್ತ್ಯ ನಿರ್ವಹಿಸಿದರು. ಈ ವಿಷಯವಾಗಿ ಪರೀಕ್ಷಾ ಕೇಂದ್ರ ಆವರಣದ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದರೆ, ಸ್ಪಷ್ಟ ಚಿತ್ರಣ ಸಿಗಲಿದೆ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ. ಪರೀಕ್ಷಾ ಜಾಗೃತ ದಳ, ಪೊಲೀಸ್ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ಜಾಗೃತ ದಳ ಭೇಟಿ: ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಜಾಗೃತ ದಳ ತಂಡದ ಸಂಜಯ ಬಡಿಗೇರ ಮತ್ತು ನಾಗರಾಜ ಕೊಟ್ನೇಕಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಮೇಲ್ವಿಚಾರಕರ ಕೊಠಡಿ, ಕೇಂದ್ರದ ವೆಬ್ ಕಾಸ್ಟಿಂಗ್ ಸಿಸ್ಟಮ್ ಕೊಠಡಿ, ಆವರಣದಲ್ಲಿ ವ್ಯವಸ್ಥೆಗಳನ್ನು ಪರಿಶಿಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.