
ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಜಿಲ್ಲೆಗಳ ರೈತರಿಗೆ ಎರಡನೇ ಬೆಳೆಗೆ ನೀರು ಹರಿಸದಿದ್ದರೆ ರೈತರೊಂದಿಗೆ ಟಿ.ಬಿ. ಡ್ಯಾಂಗೆ ಮುತ್ತಿಗೆ ಹಾಕುವ ಜೊತೆಗೆ ಜಲಾಶಯಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಗುರುವಾರ ನಡೆದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯ ಬಳಿಕ ಮಾಜಿ ಸಚಿವ ಬಿ.ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿ ಸಭೆಯ ತೀರ್ಮಾನವನ್ನು ತಿಳಿಸಿದರು.
‘ಬೆಂಗಳೂರಿನಲ್ಲಿ ಶುಕ್ರವಾರ ನಡೆಯುವ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದರೆ ನ. 15ರಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಿ ಹೋರಾಟದ ಯೋಜನೆ ರೂಪಿಸಲಾಗುವುದು’ ಎಂದು ದೂರಿದರು.
‘ನಮಗೆ ಜಲಾಶಯದ ಸುರಕ್ಷತೆ ಜೊತೆಗೆ ರೈತರ ಹಿತಾಸಕ್ತಿ ಕೂಡ ಅಗತ್ಯ. ಇನ್ನು ಮೂರು ತಿಂಗಳು ಕಾದು ಬಳಿಕ ಗೇಟ್ ಅಳವಡಿಸಬೇಕು, ಗೇಟ್ ಅಳವಡಿಕೆ ನೆಪದಲ್ಲಿ ಎರಡನೆ ಬೆಳೆಗೆ ನೀರು ಕೊಡದಿದ್ದರೆ ರೈತರು ಮಣ್ಣು ತಿನ್ನಬೇಕಾಗುತ್ತದೆ. ಜಲಸಂಪನ್ಮೂಲ ಸಚಿವರಾಗಿ ಡಿ.ಕೆ. ಶಿವಕುಮಾರ್ ಒಂದೇ ಒಂದು ಆಣೆಕಟ್ಟೆಗೆ ಭೇಟಿ ನೀಡಿಲ್ಲ. ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ವಿಚಾರದಲ್ಲಿ ₹52 ಕೋಟಿ ಅವ್ಯವಹಾರವಾಗಿದೆ. ರಾಜ್ಯದ ಬೇರೆ ಭಾಗದಲ್ಲಿ ನೀರಾವರಿ ವಿಚಾರದಲ್ಲಿ ಸಾಕಷ್ಟು ಆಸಕ್ತಿ ತೋರಿಸುವ ರಾಜ್ಯ ಸರ್ಕಾರ, ನಮ್ಮ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ಭಾಗದ ರೈತರ ಹೋರಾಟಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ವೀರಪ್ಪ ಕೆಸರೆಟ್ಟಿ, ಪ್ರತಾಪಗೌಡ ಪಾಟೀಲ, ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ದಢೇಸೂಗೂರು, ಮಾಜಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಬೇಸಿಗೆ ಬೆಳೆಗೆ ನೀರು ಕೊಡಬಾರದು ಮೊದಲೇ ತೀರ್ಮಾನಿಸಿದ್ದಾರೆ. ಇಚ್ಛಾಶಕ್ತಿ ಪ್ರದರ್ಶಿಸಿದರೆ ನೀರು ಕೊಡುವುದು ಕಷ್ಟವೇನಲ್ಲ.ಕೆ. ವಿರೂಪಾಕ್ಷಪ್ಪ ಮಾಜಿ ಸಂಸದ
ತುಂಗಭದ್ರಾದ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವಂತೆ ಜಲಾಶಯಗಳ ಸುರಕ್ಷಿತಾ ತಜ್ಞ ಕನ್ನಯ್ಯನಾಯ್ಡು ಏ. 4ರಂದೇ ಪತ್ರ ಬರೆದರೂ ರಾಜ್ಯ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ. ಎಲ್ಲ ಗೇಟ್‌ಗಳನ್ನು ಸಿದ್ಧಪಡಿಸಿದರೆ ನಾಲ್ಕು ತಿಂಗಳಲ್ಲಿ ಅಳವಡಿಸಬಹುದು.ತಿಪ್ಪೇರುದ್ರಸ್ವಾಮಿ ಮುನಿರಾಬಾದ್ ಕಾಡಾ ಮಾಜಿ ಅಧ್ಯಕ್ಷ
ಎರಡನೇ ಬೆಳೆಗೆ ನೀರು ನೀಡಬೇಕು ಎಂಬುದು ರೈತರ ಬೇಡಿಕೆ. ಜಲಾಶಯದ ಸಂರಕ್ಷಣೆಯೂ ಮುಖ್ಯವಾಗಿದೆ. ಐಸಿಸಿ ಸಭೆಯಲ್ಲಿ ರೈತರ ಅಭಿಪ್ರಾಯ ಮತ್ತು ಸರ್ಕಾರ ತೀರ್ಮಾನ ನೋಡಿಕೊಂಡು ಬಿಜೆಪಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.ದೊಡ್ಡನಗೌಡ ಪಾಟೀಲ್ ಶಾಸಕ
ಮೆಕ್ಕೆಜೋಳಕ್ಕೆ ಉತ್ತಮ ಇಳುವರಿ ಬಂದಿದೆ. ಕೇಂದ್ರ ಸರ್ಕಾರ ₹2400 ಬೆಂಬಲ ಬೆಲೆ ನಿಗದಿ ಪಡಿಸಿದೆ. ಮಾರುಕಟ್ಟೆ ಬೆಲೆ ₹1600 ಇದೆ. ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು.ಬಿ. ಶ್ರೀರಾಮುಲು ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.