ಕುಷ್ಟಗಿ: ‘ಎಲ್ಲ ಆಸ್ಪತ್ರೆಗಳಲ್ಲೂ ರೇಡಿಯಾಲಾಜಿಸ್ಟ್‌ಗಳನ್ನು ಇಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡಲು ತಜ್ಞ ಸಿಬ್ಬಂದಿಯೂ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಟೆಲಿ ರೇಡಿಯಾಲಜಿ ಪರಿಕಲ್ಪನೆಯನ್ನು ಪರಿಚಯಿಸಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಬಹುಕೋಟಿ ವೆಚ್ಚದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಕೆಲಸ ಕಾಮಗಾರಿ ವೀಕ್ಷಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಟಿ ಸ್ಕ್ಯಾನ್ ಯಂತ್ರಗಳನ್ನು ಸದ್ಯ ಎಕ್ಸ್‌ರೇ ತಂತ್ರಜ್ಞರು ನಿರ್ವಹಿಸುತ್ತಿದ್ದಾರೆ. ಹಾಗಾಗಿ ಟೆಲಿ ರೆಡಿಯಾಲಜಿ ವ್ಯವಸ್ಥೆ ಬಂದ ನಂತರ ಡಿಜಿಟಲಿ ಮಾಹಿತಿ ತಜ್ಞರಿಗೆ ರವಾನಿಸಿ ಅವರಿಂದ ಆನ್‌ಲೈನ್ ಮೂಲಕವೇ ಅಭಿಪ್ರಾಯ ಪಡೆಯಲಾಗುವುದು. ಇದರಿಂದ ರೇಡಿಯಾಲಜಿಸ್ಟ್‌ಗಳು ಇಲ್ಲ ಎಂಬ ಕೊರಗು ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಗ್ರಾಮಾಂತರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಬಿಎಎಂಎಸ್ ವೈದ್ಯರೇ ಕರ್ತವ್ಯದಲ್ಲಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಕಡೆಗೂ ಎಂಬಿಬಿಎಸ್ ವೈದ್ಯರು ಇರಬೇಕೆಂಬುದು ಸರ್ಕಾರದ ಅಚಲ ನಿರ್ಧಾರವಾಗಿದ್ದು ಈಗಾಗಲೇ 1,850 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿ ಆದೇಶ ನೀಡಲಾಗಿದ್ದು ವೈದ್ಯರೂ ಆಸ್ಪತ್ರೆಗಳಲ್ಲಿ ವರದಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು. ಅಲ್ಲದೆ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಎಲ್ಲ ತಾಲ್ಲೂಕು ಆಸ್ಪತ್ರೆಗಳು ಮತ್ತು ಎಂಸಿಎಚ್‌ಗಳಿಗೆ ಸ್ತ್ರೀರೋಗ, ಅರವಳಿಕೆ ಮತ್ತು ಚಿಕ್ಕಮಕ್ಕಳ ತಜ್ಞರನ್ನು ತಲಾ ಇಬ್ಬರಂತೆ ನೇಮಕ ಮಾಡಲಾಗುತ್ತದೆ. ಮತ್ತು ಎಲ್ಲ ಕಡೆ ಒಬ್ಬ ರೇಡಿಯಾಲಾಜಿಸ್ಟ್ ಹುದ್ದೆ ಸೃಷ್ಟಿಸಲಾಗುತ್ತದೆ. ಮೂರು ನೂರಕ್ಕೂ ಅಧಿಕ ಹೆರಿಗೆಗಳು ಆಗುವ ಆಸ್ಪತ್ರೆಗಳಿಗೆ ಮೂವರು ಸ್ತ್ರೀರೋಗ ತಜ್ಞರನ್ನು ನೇಮಕ ಮಾಡುವ, ಸ್ಟಾಫ್‌ನರ್ಸ್‌ಗಳ ಸಂಖ್ಯೆ ಹೆಚ್ಚಿಸಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ. ಅಕ್ಟೋಬರ್ ಒಳಗಾಗಿ ವೈದ್ಯರು ಮತ್ತು ಸಿಬ್ಬಂದಿಯನ್ನು ಮರು ಹೊಂದಾಣಿಕೆ ಮಾಡಲಾಗುತ್ತದೆ’ ಎಂದರು.
ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಭರವಸೆಯೇ ಇಲ್ಲದಂತಾಗಿದೆ ಎಂಬ ದೂರಿಗೆ ಉತ್ತರಿಸಿದ ಸಚಿವ ದಿನೇಶ್, ‘ಸುಧಾರಣೆ, ಬದಲಾವಣೆ ಪ್ರಕ್ರಿಯೆ ನಿರಂತರ ಸಾಗುತ್ತಿರುತ್ತದೆ, ಉತ್ತಮ ಸೇವೆ ನೀಡಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ₹ 850 ಕೋಟಿ ವೆಚ್ಚದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಎಲ್ಲ ಕಡೆಗೂ ಹೊಸ ಡಯಾಲಿಸಿಸ್ ಯೂನಿಟ್ ಹೊಸ ಯಂತ್ರಗಳನ್ನು ನೀಡಲಾಗುತ್ತಿದ್ದು 15 ಹೊಸ ತಾಲ್ಲೂಕುಗಳಿಗೂ ಡಯಾಲಿಸಿಸ್ ಕೇಂದ್ರ ತೆರೆಯಲು ಟೆಂಡರ್ ಕರೆಯಲಾಗಿದೆ’ ಎಂದರು.
‘ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಕುಷ್ಟಗಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುತ್ತಿರುವುದರಿಂದಲೇ ಹೆಚ್ಚಿನ ಹೆರಿಗೆ ಪ್ರಕರಣಗಳು ವರದಿಯಾಗುತ್ತಿವೆ. ಸುಧಾರಣೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ವೈದ್ಯರು, ಸಿಬ್ಬಂದಿಯಲ್ಲಿ ಸೇವಾ ಬದ್ಧತೆ ಹೆಚ್ಚಿಸಲು ಮುಖಚಹರೆ ಮೂಲಕ ಹಾಜರಿ ಖಾತರಿಪಡಿಸುವ ವ್ಯವಸ್ಥೆಯೂ ಜಾರಿಯಾಗಿದೆ’ ಎಂದರು.
ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ಟಿಎಚ್‌ಒ ಡಾ.ಆನಂದ ಗೋಟೂರು, ಪ್ರಭಾರ ಸಿಎಂಒ ಡಾ.ಚಂದ್ರಕಲಾ ಇತರರು ಇದ್ದರು.
ಕೊಪ್ಪಳದಲ್ಲಿ ಅ.6ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಷ್ಟಗಿಯ ಮಹಿಳಾ ಮಕ್ಕಳ ಆಸ್ಪತ್ರೆಯ ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಡಾ.ರೆಡ್ಡಿ ವರ್ಗಾವಣೆ
ಮರುಪರಿಶೀಲನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 32 ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯ ಡಾ.ಕೆ.ಎಸ್.ರೆಡ್ಡಿ ಅವರು ಹಗರಿಬೊಮ್ಮನಹಳ್ಳಿಗೆ ವರ್ಗವಾದ ನಂತರ ಕುಷ್ಟಗಿ ಆಸ್ಪತ್ರೆಯಲ್ಲಿ ಸಮಸ್ಯೆಯಾಗಿದೆ. ಅಲ್ಲದೆ ಅವರು ವರ್ಗಾವಣೆಯಾದ ಸ್ಥಳಕ್ಕೂ ಹೋಗಿಲ್ಲ. ಹಾಗಾಗಿ ಅವರನ್ನು ಇಲ್ಲಿಯೇ ಉಳಿಸಿಕೊಂಡರೆ ಉತ್ತಮ ಎಂಬುದನ್ನು ಸ್ಥಳದಲ್ಲಿದ್ದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಡಾ.ಚಂದ್ರಕಲಾ ಸಚಿವ ದಿನೇಶ ಅವರ ಗಮನಕ್ಕೆ ತಂದರು. ಡಾ.ರೆಡ್ಡಿ ಅವರ ಬಗ್ಗೆ ಮಾಹಿತಿ ಪಡೆದ ಸಚಿವರು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಕೆಲ ನ್ಯೂನತೆಗಳ ನಡುವೆಯೂ ಕುಷ್ಟಗಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುತ್ತಿದ್ದು ವೈದ್ಯರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು. ಅಲ್ಲದೆ ಖಾಲಿ ಇರುವ ಕಾಯಂ ಆಡಳಿತಾಧಿಕಾರಿ (ಸಿಎಂಒ) ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.