ಕೊಪ್ಪಳ: ‘ಏಳು ಎಕರೆ ಕೆಂಪು ಮಣ್ಣಿನ ಫಲವತ್ತಾದ ನೀರಾವರಿ ಭೂಮಿಯಿದ್ದರೂ ಕಾರ್ಖಾನೆಗಳಿಂದ ಹೊರಬರುವ ದೂಳಿನಿಂದಾಗಿ ಬಿತ್ತನೆ ಮಾಡುವುದನ್ನೇ ಬಿಟ್ಟು 15 ವರ್ಷಗಳಾಗಿವೆ. ಕಣ್ಣೆದುರೇ ಸ್ವಂತ ಭೂಮಿಯಿದ್ದರೂ ಉಳುಮೆ ಮಾಡಲಾಗದ ಅಸಹಾಯಕ ಸ್ಥಿತಿ ನನ್ನದು...’
ಇದು ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ರೈತ ರಮೇಶ ಡಂಬರಳ್ಳಿ ಅವರ ನೋವಿನ ಕಥೆ. ಇದೊಂದು ಉದಾಹರಣೆಯಷ್ಟೇ. ಇದೇ ರೀತಿ ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಹಾಲವರ್ತಿ, ಅಲ್ಲಾನಗರ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹೀಗೆ 20ಕ್ಕೂ ಹೆಚ್ಚು ಗ್ರಾಮಗಳ ಬಹಳಷ್ಟು ರೈತರ ಸಂಕಷ್ಟದ ಕಥೆಗಳು ಇದೇ ರೀತಿಯಿವೆ. ಹಿರಿಯರು ಮಾಡಿಟ್ಟ ಭೂಮಿಯಿದೆ. ಆದರೆ ಅದರಲ್ಲಿ ಕೃಷಿ ಮಾಡಲಾಗದ ಪರಿಸ್ಥಿತಿ ಇದೆ.
ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ಪ್ರಮಾಣದ ಸೇರಿ ಒಟ್ಟು 202 ಕಾರ್ಖಾನೆಗಳು ಇವೆ. ಇವುಗಳಲ್ಲಿ ಬಹಳಷ್ಟು ಉಕ್ಕು ತಯಾರಿಕೆ ಮಾಡುತ್ತವೆ. ಅವೈಜ್ಞಾನಿಕವಾಗಿ ಮಾಡುವ ದೂಳು ವಿಲೇವಾರಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಭೂಮಿಯ ಫಲವತ್ತತೆ ಹಾಳಾಗಿ ಕೃಷಿ ಮತ್ತು ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಕಾರ್ಖಾನೆಗಳಿಂದ ಉಸಿರಾಟದ ತೊಂದರೆ, ಅಸ್ತಮಾದಂಥ ಸಮಸ್ಯೆಗಳಾಗುತ್ತಿವೆ ಎನ್ನುತ್ತಾರೆ ಅಲ್ಲಾನಗರ ಗ್ರಾಮದ ನಿವಾಸಿ ಸರೋಜಮ್ಮ.
‘ಅನೇಕ ಗ್ರಾಮಗಳಲ್ಲಿ ಉಳಿದ ಭೂಮಿಯನ್ನಾದರೂ ಕಾರ್ಖಾನೆಯವರು ಖರೀದಿಸಿ ನಮ್ಮನ್ನು ಸ್ಥಳಾಂತರ ಮಾಡಿದರೆ ಇನ್ನುಳಿದ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯುತ್ತೇವೆ. ತೋಟದಲ್ಲಿ ಬೆಳೆ ಮೇಲೆ ಬೀಳುವ ಕಪ್ಪು ದೂಳು ಮೆತ್ತಿಕೊಂಡ ಫಸಲು ತಿಂದು ಜಾನುವಾರುಗಳು ಸಹ ಮೃತಪಟ್ಟಿವೆ. ನಮ್ಮ ಗ್ರಾಮದಲ್ಲಿ ಶಾಲೆಗೆ ಬರುವ ಮಕ್ಕಳಿಗೆ ನಿತ್ಯ ದೂಳು ಸ್ವಾಗತಿಸುತ್ತದೆ’ ಎನ್ನುತ್ತಾರೆ ಹಿರೇಬಗನಾಳ ಗ್ರಾಮದ ನಿಂಗಪ್ಪ ಗೊಂದಿಹೊಸಳ್ಳಿ.
ವಿಸ್ತರಣೆಗೆ ವಿರೋಧ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್) ಸೇರಿದಂತೆ ಮೂರು ದೊಡ್ಡ ಕಂಪನಿಗಳ ಕಾರ್ಖಾನೆ ವಿಸ್ತರಣೆಗೆ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬಿಎಸ್‌ಪಿಎಲ್ ₹54 ಸಾವಿರ ಕೋಟಿ ವೆಚ್ಚದಲ್ಲಿ 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇ೦ಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದಕ್ಕೆ ಜನರ ವಿರೋಧ ವ್ಯಕ್ತವಾಗಿದೆ.
‘ಈಗಿನ ಕಾರ್ಖಾನೆಗಳಿಂದಲೇ ಜನರ ಬದುಕು ದುರ್ಬರವಾಗಿದೆ. ಸ್ವಚ್ಛ ಗಾಳಿ, ನೀರು ಹಾಗೂ ಬದುಕು ನಮಗೆ ಮರೀಚಿಕೆಯಾಗಿದೆ. ಇನ್ನಷ್ಟು ಕೈಗಾರಿಕೆಗಳು ಬಂದರೆ ಕೊಪ್ಪಳವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ. ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಮಾಡಬಾರದು. ಇರುವ ಕಾರ್ಖಾನೆಗಳು ಕಡ್ಡಾಯವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಪಾಲಿಸಬೇಕು’ ಎಂದು ಚಿಕ್ಕಬಗನಾಳ ಗ್ರಾಮದ ರವಿಚಂದ್ರ ಹೇಳುತ್ತಾರೆ.
ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಹಿತರಕ್ಷಣಾ ವೇದಿಕೆ ಹಾಗೂ ಕೊಪ್ಪಳ ಬಚಾವೊ ಜನಾಂದೋಲನ ಸಮಿತಿ ವಿಚಾರ ಸಂಕಿರಣ ಹಾಗೂ ಹೋರಾಟಗಳನ್ನು ನಡೆಸುತ್ತಿದೆ.
ಸರ್ಕಾರ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ಮಾಡಬೇಕು. ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.-ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳ ಜನಾಂದೋಲನ ಸಮಿತಿ ಪ್ರಧಾನ ಸಂಚಾಲಕ
ಕಾರ್ಖಾನೆಗಳಿಂದ ದೂಳು ಬರುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ ಕೈಗಾರಿಕೆಗಳಿಗೆ ಭೇಟಿ ನೀಡಿ ವರದಿ ಪಡೆದುಕೊಂಡಿದೆ.-ವೈ.ಎಸ್. ಹರಿಶಂಕರ್ ಕೊಪ್ಪಳ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ
ಈಗಿರುವ ಕಾರ್ಖಾನೆಗಳಿಂದಲೇ ಕೊಪ್ಪಳ ನಗರಕ್ಕೆ ದೂಳು ಬರುತ್ತಿದೆ. ಬಲ್ಡೋಟಾ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಿದರೆ ಜಿಲ್ಲಾಕೇಂದ್ರವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ.-ಮಂಜುನಾಥ ಅಂಗಡಿ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ
ಕಾರ್ಖಾನೆಗಳ ವಿಪರೀತ ದೂಳಿನಿಂದಾಗಿ ಕೃಷಿ ಭೂಮಿ ಕಣ್ಣೆದುರೇ ಹಾಳಾಗಿದೆ. ಸ್ವಂತ ಹೊಲವಿದ್ದರೂ ಇನ್ನೊಬ್ಬರ ಹೊಲದಲ್ಲಿ ಬೇರೆ ಊರಿಗೆ ಹೋಗಿ ಕೆಲಸ ಮಾಡುವ ದುಸ್ಥಿತಿ ಬಂದಿದೆ.ರಮೇಶ ಡಂಬರಳ್ಳಿ ರೈತ
ಬೆಳೆಗಳ ಮೇಲೆ ಪರಿಣಾಮ: ವರದಿಯಲ್ಲಿ ಉಲ್ಲೇಖ ‘ಕಾರ್ಖಾನೆಗಳ ಕಪ್ಪು ದೂಳು ಎಲೆಗಳ ಮೇಲೆ ಬೀಳುವುದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತವಾಗಿ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿರುತ್ತದೆ’ ಎಂದು ಸಂಶೋಧಕರ ತಂಡ ವರದಿ ನೀಡಿದೆ. ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧಕರ ತಂಡವು 2024ರಲ್ಲಿ ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಹಿರೇಬಗನಾಳ ಅಲ್ಲಾನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಪರಿಶೀಲನೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.