ADVERTISEMENT

ಕನಕಗಿರಿ: ದಶಕ ಕಳೆದರೂ ಆರಂಭವಾಗದ ನೀರಿನ ಘಟಕ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಕನಕಗಿರಿ ಸಮೀಪದ ಚಿಕ್ಕಖೇಡ ಗ್ರಾಮದಲ್ಲಿ ಇದ್ದೂ ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ 
ಕನಕಗಿರಿ ಸಮೀಪದ ಚಿಕ್ಕಖೇಡ ಗ್ರಾಮದಲ್ಲಿ ಇದ್ದೂ ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ    

ಮೆಹಬೂಬ ಹುಸೇನ

ಬಿರುಬೇಸಿಗೆ ಮುಗಿದು ಮುಂಗಾರು ಸಮೀಪಿಸುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಾಂತಿ ಭೇದಿ ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಕಡೆ ನೀರಿಲ್ಲ. ಇದ್ದರೂ ಶುದ್ಧವಾಗಿಲ್ಲ. ಪೂರೈಕೆ ಸಮಸ್ಯೆಯಿಂದಾಗಿ ಜನ ನಿತ್ಯ ಪರದಾಡುವಂತಾಗಿದೆ.

ಕನಕಗಿರಿ: ಹಿರೇಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಖೇಡ ಗ್ರಾಮದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ.

ಗ್ರಾಮದಲ್ಲಿ 570 ಜನ ಮತದಾರರು ಹಾಗೂ 700 ಜನಸಂಖ್ಯೆ ಇದೆ. ಇವರೆಲ್ಲರಿಗೂ ಗ್ರಾಮದಲ್ಲಿರುವ ಒಂದೇ ಬೋರ್‌ವೆಲ್‌ ಅವಲಂಬಿಸಿದ್ದಾರೆ. ಬೋರ್‌ವೆಲ್‌ ಕೈಕೊಟ್ಟರೆ  ಜನ ದೂರದ ಹೊಲ, ತೋಟ ಇಲ್ಲವೇ ಹಿರೇಖೇಡ ಗ್ರಾಮಕ್ಕೆ ತೆರಳಿ ನೀರು ತರಬೇಕಾದ ಸಂಕಷ್ಟದ ಪರಿಸ್ಥಿತಿಯಿದೆ.

ADVERTISEMENT

ಗ್ರಾಮ ಪಂಚಾಯಿತಿಯ ಬೋರ್‌ವೆಲ್‌ನಲ್ಲಿ ನೀರು ಖಾಲಿಯಾದಾಗ ಪಂಪ್‌ಸೆಟ್ ಹೊಂದಿದ ರೈತರ ಹೊಲದಲ್ಲಿರುವ ನೀರನ್ನು ಬಾಡಿಗೆ ಹಣ ನೀಡಿ ಪಡೆದುಕೊಂಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಹತ್ತು ವರ್ಷದ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ ಒಂದೆರಡು ಸಲ ಮಾತ್ರ ಉಪಯೋಗವಾಗಿದ್ದು, ಆ ನಂತರ ನಿರುಪಯುಕ್ತವಾಗಿದ್ದು ಬಳಕೆ ಆಗುತ್ತಿಲ್ಲ, ಜನರು ಹಿರೇಖೇಡ ಗ್ರಾಮಕ್ಕೆ ಹೋಗಿ ಜನರು ನೀರು ತರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. 

ಗ್ರಾಮದಲ್ಲಿರುವ ಏಕೈಕ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಬರುವ ನೀರು ಗ್ರಾಮಸ್ಥರಿಗೆ ಸಾಲುವುದಿಲ್ಲ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಹಾಗೂ ವಿದ್ಯಾರ್ಥಿಗಳಿಗೆ ಕುಡಿಯಲು ಸಮಸ್ಯೆಯಾಗಿದೆ ಇನ್ನೂ ಎರಡ್ಮೂರು ಬೋರ್‌ವೆಲ್‌ ಕೊರೆಯಿಸಿ ಕೊಡಬೇಕು.
ಶೇಕ್ ಮಲಿಕಸಾಬ್, ಅಧ್ಯಕ್ಷ, ಚಿಕ್ಕಖೇಡ ಎಸ್ ಡಿಎಂಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಗ್ರಾಮದಲ್ಲಿ ಮಾಡಿರುವ ಜೆಜೆಎಂ (ಜಲ್ ಜೀವನ ಮಿಷನ್) ಕಾಮಗಾರಿ ಅಪೂರ್ಣವಾಗಿದೆ, ಕಾಮಗಾರಿ ಹಾಗೂ ಮನೆಗೆ ಹಾಕಿದ ಕೊಳವೆಗಳು ತೀರ ಕಳಪೆ ಗುಣಮಟ್ಟದಲ್ಲಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದಿನ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಕಾವ್ಯಾರಾಣಿ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಶುದ್ದ ಕುಡಿಯುವ ನೀರಿನ ಘಟಕದ ಸಮಸ್ಯೆ ಕುರಿತು ಹಲವು ಬಾರಿ ಪರಿಪರಿಯಾಗಿ ಬೇಡಿಕೊಂಡರೂ ದುರಸ್ತಿ ಕೆಲಸ ಮಾಡಿಸಲಿಲ್ಲ ಎಂದು ಗ್ರಾಮಸ್ಥರು ದೂರಿದರು.

ತಾಲ್ಲೂಕಿನ ಒಂದೊಂದು ಊರಿನಲ್ಲಿ ಎರಡು ಶುದ್ದ ಕುಡಿಯುವ‌ ನೀರಿನ ಘಟಕಗಳಿವೆ ಯೋಗ್ಯವಲ್ಲದ ನೀರಿನ‌ ಮೂಲಗಳನ್ನು ಬಂದ್ ಮಾಡಿಸಿ ಯೋಗ್ಯವಾದ ನೀರಿನ‌ ಮೂಲಗಳನ್ನು ಬಳಕೆ ಮಾಡಲು ಸೂಚಿಸಲಾಗಿದೆ.
ಚಂದ್ರಶೇಖರ ಕಂದಕೂರು, ಪ್ರಬಾರ ಇಒ ತಾ.ಪಂ. ಕನಕಗಿರಿ

ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಓವರ್ ಹೆಡ್ ಟ್ಯಾಂಕ್‌ ಇದ್ದೂ ಇಲ್ಲದಂತಾಗಿದೆ. ಇಲ್ಲಿಂದ ನೀರು ಸರಬರಾಜು ಆಗಿಲ್ಲ. ತಾಲ್ಲೂಕು ಪಂಚಾಯಿತಿ ಗಮನಕ್ಕೆ ಈ ಸಮಸ್ಯೆ ಇದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.   

ಗ್ರಾಮದ ಕೆಲ ಕಡೆಗಳಲ್ಲಿ ಮಾತ್ರ ಚರಂಡಿ ವ್ಯವಸ್ಥೆ ಇದ್ದು ತ್ಯಾಜ್ಯ ತುಂಬಿದರೆ ಮುಂದಕ್ಕೆ ಹರಿಯುವುದಿಲ್ಲ, ಮಳೆಗಾಲದಲ್ಲಿ ಜನರ ಪಾಡು ಹೇಳತೀರದು, ಹಲವಾರು ಸಲ ಚರಂಡಿಯನ್ನು ನಾವೆ ಸ್ವಚ್ಛ ಮಾಡಿದ್ದೇವೆ ಎಂದು ಯುವಕ ಹನುಮಂತ ಕುರುಬರ ಹೇಳಿದರು.  ಚರಂಡಿ ಪಕ್ಕದಲ್ಲಿಯೆ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಲಾಗಿದೆ, ನಲ್ಲಿಯಲ್ಲಿ ಕೊಳಚೆ ಸೇರಿಕೊಂಡರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು.

ಶುದ್ದ ಕುಡಿಯುವ ನೀರಿನ ಘಟಕದ ನೀರು ಸಂಗ್ರಹದ ಟ್ಯಾಂಕ್ ಪ್ಲಾಸ್ಟಿಕ್‌ನಲ್ಲಿದೆ. ಅದರ ಬದಲಾಗಿ ಸ್ಟೀಲ್ ಟ್ಯಾಂಕ್ ಮಾಡಲು ಹೇಳಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ. ನೀರು ಶುದ್ದೀಕರಿಸುವ ಯಂತ್ರ ಕಳಪೆ ಮಟ್ಟದ್ದಾಗಿದೆ.
ಗ್ಯಾನಪ್ಪ ಗಾಣದಾಳ, ಚಿಕ್ಕಖೇಡ ಮುಖಂಡರು

ಕನಕಗಿರಿ ತಾಲ್ಲೂಕಿನಲ್ಲಿ ಒಟ್ಟು 46 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಅವರ ತಂಗಡಗಿ ಟ್ರಸ್ಟ್‌ಗೆ ಸೇರಿದ 6 ಘಟಕಗಳು ಇವೆ. ಇದರಲ್ಲಿ 20 ದುರಸ್ತಿಗೆ ಕಾದಿವೆ. ಹಿರೇಖೇಡ ರಸ್ತೆಯಲ್ಲಿರುವ ನೀರಿನ ತೊಟ್ಟಿಯ ನೀರು ಪಡೆದು ಮಹಿಳೆಯರು ಬಟ್ಟೆ ಸ್ವಚ್ಛ ಮಾಡುತ್ತಾರೆ ಇಲ್ಲಿ ಗಲೀಜು ವಾತಾವರಣ ನಿರ್ಮಾಣವಾಗಿರುವುದು ಕಂಡು ಬಂತು.

ಬಿರುಬೇಸಿಗೆ ಮುಗಿದು ಮುಂಗಾರು ಸಮೀಪಿಸುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಾಂತಿ ಭೇದಿ ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಕಡೆ ನೀರಿಲ್ಲ. ಇದ್ದರೂ ಶುದ್ಧವಾಗಿಲ್ಲ. ಪೂರೈಕೆ ಸಮಸ್ಯೆಯಿಂದಾಗಿ ಜನ ನಿತ್ಯ ಪರದಾಡುವಂತಾಗಿದೆ. ಇಂಥ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ಇಂದಿನಿಂದ ಆರಂಭ.

ಚರಂಡಿ ಪಕ್ಕದಲ್ಲಿಯೆ ಕುಡಿಯುವ ನೀರಿನ ನಲ್ಲಿ ಹಾಕಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.