ADVERTISEMENT

ಮನೆ ಕಳೆದುಕೊಂಡವರಿಗೆ ಬಂತು ಪರಿಹಾರ

ನಗರಸಭೆ, ಕಂದಾಯ ಇಲಾಖೆಯಿಂದ ಜಂಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 3:51 IST
Last Updated 1 ಆಗಸ್ಟ್ 2022, 3:51 IST
ಕೊಪ್ಪಳದಲ್ಲಿ ಶನಿವಾರ ತಹಶೀಲ್ದಾರ್‌ ವಿಠ್ಠಲ್‌ ಚೌಗುಲಾ, ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ ಹಾನಿಗೊಳಗಾದ ಮನೆ ಪರಿಶೀಲಿಸಿದರು
ಕೊಪ್ಪಳದಲ್ಲಿ ಶನಿವಾರ ತಹಶೀಲ್ದಾರ್‌ ವಿಠ್ಠಲ್‌ ಚೌಗುಲಾ, ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ ಹಾನಿಗೊಳಗಾದ ಮನೆ ಪರಿಶೀಲಿಸಿದರು   

ಕೊಪ್ಪಳ: ರಭಸದ ಮಳೆಗೆ ಶೇಂಗಾ ಮಿಲ್‌ನ ಗೋಡೆ ಕುಸಿದು ಮನೆ ಕಳೆದುಕೊಂಡಿರುವ ಇಲ್ಲಿನ ಮೂರನೇ ವಾರ್ಡ್‌ ವ್ಯಾಪ್ತಿಯ ಕುವೆಂಪು ನಗರ (500 ಪ್ಲಾಟ್‌) ಆಶ್ರಯ ಕಾಲೊನಿಯ ಪ್ರಕಾಶ ವಟ್ಟಿ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ.

ಗೋಡೆ ಕುಸಿದಿದ್ದರಿಂದ ಮನೆ ನೆಲಸಮಗೊಂಡು, ಪ್ರಕಾಶ ಅವರ ಮನೆಯ ಸಾಮಗ್ರಿಗಳೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಈ ಕುರಿತು ‘ಪ್ರಜಾವಾಣಿ‘ ಭಾನುವಾರದ ಸಂಚಿಕೆಯಲ್ಲಿ ವಿವರವಾಗಿ ವರದಿ ಮಾಡಿತ್ತು.

ಮೊದಲು ನಡೆಸಿದ ಸಮೀಕ್ಷೆಯಲ್ಲಿ ಅಧಿಕಾರಿಗಳು ಮನೆಗೆ ಶೇ 15ರಷ್ಟು ಮಾತ್ರ ಹಾನಿಯಾಗಿದೆ ಎಂದು ಹೇಳಿದ್ದರು. ಹೀಗಾಗಿ ಪರಿಹಾರ ಲಭಿಸುವ ಅನುಮಾನವಿತ್ತು. ಅಲ್ಲಿನ ಗಂಭೀರ ಪರಿಸ್ಥಿತಿಯನ್ನು ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲಾ ಮತ್ತು ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ ಭಾನುವಾರ ಮತ್ತೊಮ್ಮೆ ಜಂಟಿಯಾಗಿ ಪರಿಶೀಲಿಸಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ತಹಶೀಲ್ದಾರ್‌ ವಿಠ್ಠಲ್ ’ಎನ್‌ಡಿಆರ್‌ಎಫ್‌ ಪ್ರಕಾರ ಮನೆಬಿದ್ದರೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಗೃಹಪಯೋಗಿ ಮತ್ತು ಧವಸ ಧಾನ್ಯ ಹಾಳಾಗಿದ್ದಕ್ಕೆ ₹10 ಸಾವಿರ ಮತ್ತು ಮೊದಲ ಕಂತು ₹95 ಸಾವಿರ ಪರಿಹಾರ ನೀಡಲಾಗುತ್ತದೆ. ಒಂದೆರೆಡು ದಿನಗಳಲ್ಲಿ ಫಲಾನುಭವಿ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.