ಕೊಪ್ಪಳ: ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸುಂದರ ಹಸಿರು ವಾತಾವರಣವಿದ್ದರೂ ಜಾನುವಾರುಗಳ ಹಾವಳಿಯಿಂದಾಗಿ ಅದೆಲ್ಲವೂ ಹಾಳಾಗುತ್ತಿತ್ತು. ಶಾಲೆಯಲ್ಲಿ ಶೌಚಾಲಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಯಲು ಶೌಚದ ಮೊರೆ ಹೋಗಬೇಕಿತ್ತು. ಇದನ್ನು ತಪ್ಪಿಸಲು ಜಿಲ್ಲಾ ಪಂಚಾಯಿತಿ ಒಂದೇ ಬಾರಿ 274 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ವರ್ಷಪೂರ್ತಿ ಒಂದಿಲ್ಲೊಂದು ಕೆಲಸಗಳು ನಡೆಯುತ್ತಿದ್ದರೂ ಇಲ್ಲಿನ ಜಿಲ್ಲಾ ಪಂಚಾಯಿತಿ 2024–25ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದೆ. 274 ಶೌಚಾಲಯ ಸೇರಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 461 ಯೋಜನೆಗಳನ್ನು ಆರಂಭಿಸಿದೆ. ಗಂಗಾವತಿ ತಾಲ್ಲೂಕಿನಲ್ಲಿ 65, ಕನಕಗಿರಿ 32, ಕಾರಟಗಿ 17, ಕೊಪ್ಪಳ 49, ಕುಕನೂರು 42, ಕುಷ್ಟಗಿ 156 ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ 96 ಶೌಚಾಲಯಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಶೌಚಾಲಯಗಳನ್ನು ಆದ್ಯತೆ ಮೇರೆಗೆ ನಿರ್ಮಾಣ ಮಾಡುವ ಜೊತೆಗೆ ಕಾಂಪೌಂಡ್, ಆಟದ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ. 321 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, 140 ಪೂರ್ಣಗೊಂಡಿವೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಹಾಜರಾತಿ ಇರುವುದರಿಂದ ಮಕ್ಕಳು ಶೌಚಕ್ಕಾಗಿ ಬಯಲು ಅವಲಂಬಿಸಬೇಕಾಗುತ್ತಿತ್ತು. ಇದರಿಂದ ಶಾಲೆಯ ಸುತ್ತಲಿನ ವಾತಾವರಣವೂ ಹದಗೆಡುತ್ತಿತ್ತು. ಮೈದಾನದ ಕೊರತೆಯಿಂದಾಗಿ ಇರುವ ಚಿಕ್ಕ ಜಾಗದಲ್ಲಿಯೇ ಆಟೋಟಗಳು ನಡೆಯುತ್ತಿದ್ದವು. ಕೆಲವು ಶಾಲೆಗಳಲ್ಲಿ ಅದೇ ಊರಿನ ಇನ್ನೊಂದು ಶಾಲೆಯ ಮೈದಾನಕ್ಕೆ ಹೋಗಿ ಕ್ರೀಡೆಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿತ್ತು. ಈಗ ಶೌಚಾಲಯ ನಿರ್ಮಾಣ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿಯೇ ಸೌಲಭ್ಯ ಲಭಿಸಿದಂತಾಗುತ್ತಿದೆ.
ಶಾಲೆಗೆ ಕಾಂಪೌಂಡ್ ಕೊರತೆ ಕಾರಣದಿಂದಾಗಿ ಆವರಣಕ್ಕೆ ದನ, ಕುರಿ, ಎಮ್ಮೆ, ಹಂದಿಗಳು ಬಂದು ಶಾಲೆಯ ಆವರಣದಲ್ಲಿರುವ ಸಸಿಗಳನ್ನು ಹಾಳು ಮಾಡುತ್ತಿದ್ದವು. ಅಲ್ಲದೇ ರಾತ್ರಿ ವೇಳೆ ಗ್ರಾಮದ ಕೆಲವರು ಕುಡಿದು, ತಿಂದು ಬೀಸಾಡಿ ಹೋಗುತ್ತಿದ್ದರು. ಹೀಗಾಗಿ ಬಹಳಷ್ಟು ಗ್ರಾಮಗಳಲ್ಲಿ ಶಾಲೆಗಳ ಆವರಣ ಮದ್ಯವ್ಯಸನಿಗಳಿಗೆ ತಾಣವಾಗುತ್ತಿತ್ತು. ಶೌಚಾಲಯ ಸಮಸ್ಯೆ ಮತ್ತು ಕಾಂಪೌಂಡ್ ಬೇಕು ಎನ್ನುವ ಬೇಡಿಕೆಯೂ ಶಾಲೆಗಳಿಂದ ವ್ಯಾಪಕವಾಗಿ ಕೇಳಿಬಂದಿತ್ತು.
‘ಜಿಲ್ಲಾ ಪಂಚಾಯಿತಿ ವತಿಯಿಂದ ಜಾರಿಗೊಳಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಮತ್ತು ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು.
ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಈ ಮೂಲಕ ಶಾಲೆಗಳ ಬಲವರ್ಧನೆಗೆ ಕ್ರಮ ವಹಿಸಲಾಗಿದೆ.ರಾಹುಲ್ ರತ್ನಂ ಪಾಂಡೆಯ ಜಿಲ್ಲಾ ಪಂಚಾಯಿತಿ ಸಿಇಒ ಕೊಪ್ಪಳ
ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ನಮ್ಮ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿದ್ದು ಖುಷಿ ನೀಡಿದೆ. ಶಾಲೆ ಸುತ್ತಲಿನ ವಾತಾವರಣವೂ ಆರೋಗ್ಯಕರವಾಗಿದೆ.-ಅರ್ಪಿತಾ ಪೂಜಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಕನಕಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.