ADVERTISEMENT

ಜಾಗತಿಕವಾಗಿ ದೇಶಕ್ಕೆ ಉನ್ನತ ಸ್ಥಾನ: ಶಾಸಕ ಹಾಲಪ್ಪ ಆಚಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 5:45 IST
Last Updated 16 ಜೂನ್ 2021, 5:45 IST
ಯಲಬುರ್ಗಾ ತಾಲ್ಲೂಕು ಬಂಡಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಹಾಲಪ್ಪ ಆಚಾರ ಭೂಮಿ ಪೂಜೆ ನೆರವೇರಿಸಿದರು
ಯಲಬುರ್ಗಾ ತಾಲ್ಲೂಕು ಬಂಡಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಹಾಲಪ್ಪ ಆಚಾರ ಭೂಮಿ ಪೂಜೆ ನೆರವೇರಿಸಿದರು   

ಬಂಡಿ (ಯಲಬುರ್ಗಾ): ‘ವಿಶ್ವಮಟ್ಟದಲ್ಲಿ ಭಾರತಕ್ಕೆ ಉನ್ನತ ಸ್ಥಾನ ತಂದುಕೊಟ್ಟ ಹಿರಿಮೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ದೇಶವನ್ನು ಆರ್ಥಿಕ, ಸಾಂಸ್ಕೃತಿಕವಾಗಿ ಸದೃಢ ರಾಷ್ಟ್ರವನ್ನಾಗಿ ಅಭಿವೃದ್ಧಿಗೊಳಿ
ಸುತ್ತಿದ್ದಾರೆ’ ಎಂದು ಶಾಸಕ ಹಾಲಪ್ಪ ಆಚಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಂಡಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರದ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಪರೂಪದ ಹಾಗೂ ಸಮರ್ಥ ನಾಯಕರಾದ ಮೋದಿಯವರ ಆಡಳಿತಾವಧಿಯಲ್ಲಿಯೇ ನೂರಾರು ಜನಪರ ಯೋಜನೆಗಳನ್ನು ಜನರಿಗೆ ಕಲ್ಪಿಸಿಕೊಡಲಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲಿ ಎನ್ನುವ ಕಾರಣಕ್ಕೆ ಅವರಿಗೆ ಆರ್ಥಿಕ ನೆರವು ನೀಡುವುದಲ್ಲದೇ ಅವರ ಆದಾಯ ದ್ವಿಗುಣಗೊಳಿಸಲು ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಅವುಗಳ ಪ್ರಯೋಜನವನ್ನು ಅನೇಕರು ಪಡೆದಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ದೇಶದ ಕಡೆ ಎಲ್ಲರೂ ತಿರುಗಿ ನೋಡುವಂತೆ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ಪ್ರಸ್ತುತ ತಲೆದೋರಿರುವ ಆರೋಗ್ಯ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸಿದೆ. ಜನರ ಹಿತ ಕಾಪಾಡಿದೆ. ಆರ್ಥಿಕ ನೆರವು ನೀಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಕೋವಿಡ್ ಕಾರಣ ಅಭಿವೃದ್ಧಿಯ ವೇಗ ತುಸು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನಗಳು ನಡೆಯುತ್ತವೆ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಹಂತದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲಿಯೇ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಪೂರೈಕೆಗೆ ಕೈಗೊಳ್ಳಲಾಗುವುದು. ಜನರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ತಾ.ಪಂ. ಇಒ ಡಾ.ಜಯರಾಂ ಚವ್ಹಾಣ, ತುಮ್ಮರಗುದ್ದಿ ಗ್ರಾ.ಪಂ. ಅಧ್ಯಕ್ಷೆ ನಿಂಗಮ್ಮ ತಳವಾರ, ಉಪಾಧ್ಯಕ್ಷೆ ಬಸಮ್ಮ ಹಿರೇಮಠ, ಬಂಡಿ ಗ್ರಾ.ಪಂ. ಅಧ್ಯಕ್ಷೆ ರತ್ನವ್ವ ವಣಗೇರಿ, ಉಪಾಧ್ಯಕ್ಷೆ ಹುಲಿಗಮ್ಮ ಕಡೇಮನಿ, ಮುಖಂಡರಾದ ಸಿ.ಎಚ್.ಪೊಲೀಸ್ ಪಾಟೀಲ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ನೀಲಮ್ಮ ಭಾವಿಮನಿ, ಪಿಡಿಒ ರವಿಕುಮಾರ ಹಾಗೂ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.