ADVERTISEMENT

ಕ್ಷೀಣಿಸಿದ ಕೊರೊನಾ: ಚಿಗುರಿದ ಪ್ರವಾಸೋದ್ಯಮ

ಜಿಲ್ಲೆಯ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಭೇಟಿ: ಸೈಕಲ್‌, ಕುದುರೆ ಸವಾರಿ ಮೂಲಕ ಕಣ್ತುಂಬಿಕೊಳ್ಳುತ್ತಿರುವ ಜನ

ಸಿದ್ದನಗೌಡ ಪಾಟೀಲ
Published 2 ಮೇ 2022, 2:50 IST
Last Updated 2 ಮೇ 2022, 2:50 IST
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ದರ್ಶನಕ್ಕೆ ಬರುವ ಭಕ್ತರು
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ದರ್ಶನಕ್ಕೆ ಬರುವ ಭಕ್ತರು   

ಕೊಪ್ಪಳ: ಕೊರೊನಾ ಆವರಿಸುವುದಕ್ಕೂ ಮುನ್ನ ಪ್ರತಿ ವರ್ಷ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶಿಗಳಿಂದ 18 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಕೊರೊನಾ ವ್ಯಾಪಿಸಿದ ಬಳಿಕ ಪ್ರವಾಸಿಗರ ಸಂಖ್ಯೆ ಹಂತಹಂತವಾಗಿ ಕ್ಷೀಣಿಸಿತೊಡಗಿತು.

ಕೊರೊನಾ ಪ್ರಭಾವ ಕಡಿಮೆಯಾದ ಬಳಿಕ ಜಿಲ್ಲೆಗೆ ಜನವರಿಯಿಂದ ಇಲ್ಲಿಯವರೆಗೆ 2 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂಜನಾದ್ರಿಗೆ ಮೊದಲ ಸ್ಥಾನ. ಗಂಗಾವತಿ ತಾಲ್ಲೂಕಿನ ಆನೆಗೊಂದಿ ಪ್ರದೇಶಕ್ಕೆ ಹೆಚ್ಚು ಪ್ರವಾಸಿಗರು ಬರುವರು.

ನಂತರದ ಸ್ಥಾನ ಹುಲಿಗಿ, ಗವಿಮಠ, ಇಟಗಿ, ನವವೃಂದಾವನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರ್ಷಿಕ 18 ಸಾವಿರ ವಿದೇಶಿ ಪ್ರವಾಸಿಗರುಭೇಟಿ ನೀಡುತ್ತಿದ್ದ ಈ ಸ್ಥಳಗಳಿಗೆ ಈ ವರ್ಷ 1200 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ADVERTISEMENT

ಹನಮ ಜಯಂತಿಯಂದು ಅಂಜನಾದ್ರಿಗೆ 25 ಸಾವಿರ, ಪ್ರತಿ ಶನಿವಾರ 5 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಹುಲಿಗಿಗೆ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.

ಧಾರ್ಮಿಕ ಪ್ರವಾಸೋದ್ಯಮ: ಹುಲಿಗಿಯ ಹುಲಿಗೆಮ್ಮ ದೇವಿ, ಅಂಜನಾದ್ರಿಯ ಆಂಜನೇಯಸ್ವಾಮಿ, ಗವಿಮಠದ ಗವಿಸಿದ್ಧೇಶ್ವರನ ದರ್ಶನಕ್ಕೆ ರಜಾ ದಿನ ಅಮವ್ಯಾಸೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ, ಶನಿವಾರ ದಿನಗಳಂದುಸಾವಿರಾರುಭಕ್ತರು ಭೇಟಿ ನೀಡುತ್ತಾರೆ.

ಈ ದೇವಾಲಯಗಳಿಂದ ವಾರ್ಷಿಕ ₹ 10 ಕೋಟಿ ಆದಾಯ ಸರ್ಕಾರಕ್ಕೆ ಬರುತ್ತದೆ. ಪರಿಸರ ಪ್ರವಾಸೋದ್ಯಮ: ಚಳಿ ಆಸ್ವಾದಿಸಲು ಹಿಮಾಲಯ ಪ್ರಾಂತಗಳಿಗೆ ಹೋಗುವ ಪ್ರವಾಸಿಗರು ಇಲ್ಲಿನ ಬಿಸಿಲನ್ನು ಅನುಭವಿಸಲು ಬರುವುದು ವಿಶೇಷವಾಗಿದೆ. ಇಲ್ಲಿನ ಕಲ್ಲುಬಂಡೆಗಳು, ಪರಿಸರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಖಾಸಗಿ ಕಿಷ್ಕಿಂದಾ ರೆಸಾರ್ಟ್‌ಗೆ ನೂರಾರು ಜನರು ಭೇಟಿ ನೀಡುತ್ತಾರೆ. ಇಲ್ಲಿರುವ ಜಲಕ್ರೀಡೆಗಳು ತಮ್ಮದೇ ಆದ ವಿಶೇಷತೆ ಹೊಂದಿವೆ.

ಸಣಾಪುರ ಕೆರೆಯಲ್ಲಿನ ಈಜು, ದೋಣಿ ವಿಹಾರ, ತುಂಗಭದ್ರಾ ನದಿಯಲ್ಲಿನ ತೆಪ್ಪದ ವಿಹಾರ, ಪಾರಂಪರಿಕೆ ಆನೆಗೊಂದಿ ಗ್ರಾಮ ವೀಕ್ಷಣೆ, ನವವೃಂದಾವನ ದರ್ಶನಕ್ಕೆ ಬರುತ್ತಾರೆ. ಸಾಹಸಿಗಳಿಗೆ, ಪ್ರಕೃತಿ ಪ್ರೇಮಿಗಳಿಗೆ, ಹವ್ಯಾಸಿ ಛಾಯಾಚಿತ್ರಗ್ರಾಹಕರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಕರಕುಶಲ ವಸ್ತುಗಳು, ವೈವಿಧ್ಯಮಯ ಊಟೋಪಚಾರದ ರೆಸಾರ್ಟ್‌ಗಳು ಈ ಭಾಗದ ಆಕರ್ಷಕಣೆಯಾಗಿವೆ.

ಸೈಕಲ್‌ ಸವಾರಿ, ಕುದುರೆ ಸವಾರಿ ಮೂಲಕ ಇಲ್ಲಿನ ಸ್ಥಳಗಳನ್ನು ಕಣ್ತುಂಬಿಕೊಳ್ಳುತ್ತಾರೆ. ದೇಶಿ, ವಿದೇಶಿ ಪ್ರವಾಸಿಗರಿಗೆ ಬೈಕ್, ಅಟೊ ರಿಕ್ಷಾಗಳ ಮೂಲಕ ಪ್ರವಾಸಿ ಮಾರ್ಗದರ್ಶ ಕರುಇಲ್ಲಿನ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ವಿರೂಪಾಪುರ ಗಡ್ಡೆ ತೆರವಿನ ನಂತರ ಅನಧಿಕೃತ ರೆಸಾರ್ಟ್‌ಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ.

ಜಿಲ್ಲಾಡಳಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅನಧಿಕೃತ ರೆಸಾರ್ಟ್‌ಗಳನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿರುವು ದರಿಂದ ರೆಸಾರ್ಟ್‌ಗಳು ತಲೆ ಎತ್ತಿವೆ. ಈ ಭಾಗದಲ್ಲಿ 150ಕ್ಕೂ ಹೆಚ್ಚು ರೆಸಾರ್ಟ್‌ಗಳು ಇವೆ ಎಂದು ಅಂದಾಜಿಸಲಾಗಿದೆ.ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದರಿಂದ ಆದಾಯ ಅಷ್ಟಕ್ಕೆ ಇಷ್ಟೇ ಇದೆ ಎಂದು ಹೊಟೇಲ್‌ ಮಾಲೀಕರು ಹೇಳುತ್ತಾರೆ.

ಮೆಗಾ ಯೋಜನೆ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮಾಸ್ಟರ್‌ ಪ್ಲ್ಯಾನ್ ರೂಪಿಸುವ ಯೋಚನೆ ಇದೆ. ₹ 100 ಕೋಟಿ ಆದಾಯ ತರುವ ಜಿಲ್ಲೆಯ ಪ್ರವಾಸೋದ್ಯಮವನ್ನು ಎಲ್ಲ ವಯೋಮಾನದ, ಎಲ್ಲ ಅಭಿರುಚಿ ಹೊಂದಿದ ಜನರು ಭೇಟಿ ನೀಡುವಂತೆ ಶಾಶ್ವತ ಯೋಜನೆ ರೂಪಿಸುವ ಉದ್ದೇಶವಿದೆ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

ಅಂತರರಾಷ್ಟ್ರೀಯ ಮಟ್ಟದ ಹೋಟೆಲ್‌ಗಳು, ಮಕ್ಕಳ ಮನ ಸೆಳೆಯುವ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಯೋಚನೆ ಇದೆ. ಬರುವ ಆದಾಯದಲ್ಲಿಯೇ ಇಲ್ಲಿಯ ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತದೆ. ಹೊಸ ಯೋಜನೆ: ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದಲ್ಲಿ ತಲೆ ಎತ್ತುತ್ತಿರುವ ಗೊಂಬೆ ಕಾರ್ಖಾನೆಯ ಹಿನ್ನೆಲೆಯಲ್ಲಿ ಮಕ್ಕಳ ಆಟಿಕೆ ಮಾರಾಟಗಾರರ ಸಂಖ್ಯೆ, ಕೊಳ್ಳುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಮಕ್ಕಳ ಕೇಂದ್ರೀತ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆ ಯೋಜನೆ ರೂಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.