ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಕಾಯಂ ಶಿಕ್ಷಕರ ಕೊರತೆಯಿರುವ ಕಾರಣ ಪ್ರೌಢಶಾಲೆಗಳಿಗೆ 626 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಅವರ ಬೋಧನಾ ಗುಣಮಟ್ಟ ಹೆಚ್ಚಿಸಲು ಇಲ್ಲಿನ ಶಿಕ್ಷಣ ಇಲಾಖೆ ಡಯಟ್ ಮೂಲಕ ತರಬೇತಿ ಕೊಡಿಸಲು ಮುಂದಾಗಿದೆ.
ಹಿಂದಿನ ವರ್ಷ ಶೇ 66.16ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ರಾಜ್ಯಮಟ್ಟದಲ್ಲಿ 16ರಿಂದ 32ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಸಲ ಒಂದು ಸ್ಥಾನ ಏರಿಕೆ ಕಂಡಿದೆಯಾದರೂ ಒಟ್ಟು ಫಲಿತಾಂಶ ಶೇ 56.57ರಷ್ಟು ಆಗಿದೆ. ಪರೀಕ್ಷೆ ಬರೆದಿದ್ದ ಒಟ್ಟು 21,896 ವಿದ್ಯಾರ್ಥಿಗಳಲ್ಲಿ 12,387 ಮಕ್ಕಳಷ್ಟೇ ಉತ್ತೀರ್ಣರಾಗಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಫಲಿತಾಂಶ ನಿರಂತರವಾಗಿ ಕುಸಿಯುತ್ತಲೇ ಸಾಗಿದೆ. ಇದಕ್ಕೆ ಕಾಯಂ ಶಿಕ್ಷಕರ ಕೊರತೆ ಒಂದಾದರೆ, ಗುಣಮಟ್ಟದ ಅತಿಥಿ ಶಿಕ್ಷಕರ ಕೊರತೆಯೂ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ ಇಲ್ಲಿನ ಶಿಕ್ಷಣ ಇಲಾಖೆ ‘ಅತಿಥಿ’ಗಳಿಗೆ ತರಬೇತಿ ಕೊಡಿಸಿದ ಬಳಿಕ ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡಲು ತೀರ್ಮಾನಿಸಿದೆ.
ಹಿಂದಿನ ವರ್ಷ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕೆಲಸ ಮಾಡಿದ ಅತಿಥಿ ಶಿಕ್ಷಕರ ವಿಷಯಗಳಲ್ಲಿ ಫಲಿತಾಂಶ ಕಡಿಮೆಯಾಗಿದ್ದರೆ ಅವರನ್ನು ಈ ಬಾರಿ ಮುಂದುವರಿಸುವುದನ್ನು ಇಲಾಖೆ ಖಾತ್ರಿ ಪಡಿಸಿಲ್ಲ. ಶಿಕ್ಷಕರ ಬೋಧನಾ ಗುಣಮಟ್ಟ ಪರೀಕ್ಷಿಸಿ ಹಾಗೂ ಅವರಿಗೆ ತರಬೇತಿ ಕೊಡಿಸಿಯೇ ಬಳಿಕ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಕಳಿಸಲಾಗುತ್ತದೆ.
ಪ್ರಾಥಮಿಕದಲ್ಲಿಯೇ ಸಮಸ್ಯೆ: ಪ್ರಾಥಮಿಕ ಹಂತದಲ್ಲಿ ಸರಿಯಾಗಿ ಮೂಲಕ್ಷರಗಳು ಹಾಗೂ ಒತ್ತಕ್ಷರಗಳನ್ನು ಬರೆಯಲು ಬಾರದ ಅನೇಕ ಮಕ್ಕಳು ಪ್ರೌಢಶಾಲಾ ಹಂತಕ್ಕೆ ಬರುವುದರಿಂದ ಅವರಿಗೆ ಎಸ್‌ಎಸ್‌ಎಲ್‌ಸಿ ಹಂತ ಕಬ್ಬಿಣದ ಕಡಲೆಯಾಗುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿಯೂ ಶಿಕ್ಷಕರ ಕೊರತೆ ವ್ಯಾಪಕವಾಗಿದ್ದು ಅಲ್ಲಿಯೂ ಜಿಲ್ಲೆಗೆ 1,874 ಅತಿಥಿ ಶಿಕ್ಷಕರ ನೇಮಕಕ್ಕೂ ಅನುಮತಿ ಲಭಿಸಿದೆ.
ಜಿಲ್ಲೆಯಲ್ಲಿ ಒಟ್ಟು 1705 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇದ್ದು, ಇದರಲ್ಲಿ 1143 ಸರ್ಕಾರಿ, 496 ಖಾಸಗಿ ಮತ್ತು 66 ಅನುದಾನಿತ ಶಾಲೆಗಳು ಇವೆ. ಈ ವರ್ಷ 2,92,232 ಮಕ್ಕಳು ಅಭ್ಯಾಸ ಮಾಡಲಿದ್ದಾರೆ. ಎಸ್‌ಎಸ್‌ಎಲ್‌ಸಿ ಈ ಭಾಗದ ಫಲಿತಾಂಶ ಕುಸಿತವಾಗಲು ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳ ಗುಣಮಟ್ಟದ ಕಾಯಂ ಶಿಕ್ಷಕರ ಕೊರತೆಯಿರುವ ಕಾರಣ ಫಲಿತಾಂಶ ಕಡಿಮೆಯಾಗಲು ಕಾರಣವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಬಾರಿ ‘ಅತಿಥಿ’ಗಳಿಗೂ ತರಬೇತಿ ನೀಡುತ್ತಿರುವ ಕಾರಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬಹುದು ಎನ್ನುವ ನಿರೀಕ್ಷೆ ಮೂಡಿದೆ.
ಎರಡು ತಿಂಗಳು ಬೇಸಿಗೆ ರಜೆ ಕಳೆದಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಗುರುವಾರ ಶಾಲೆ ಆರಂಭದ ಸಮಯ. ಇದಕ್ಕಾಗಿ ಬುಧವಾರ ತರಗತಿಗಳನ್ನು ಸ್ವಚ್ಛಗೊಳಿಸುವುದು ಅಡುಗೆ ಕೊಠಡಿಗಳಲ್ಲಿ ಸಾಮಗ್ರಿ ಇರಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳು ನಡೆದವು. ‘ಶಾಲಾ ಆರಂಭದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳು ಅಧಿಕಾರಿಗಳು ಶಿಕ್ಷಣ ಪ್ರೇಮಿಗಳು ಹಾಗೂ ಆಯಾ ಊರಿನ ಗಣ್ಯರ ಸಮ್ಮುಖದಲ್ಲಿ ಮಕ್ಕಳನ್ನು ಸ್ವಾಗತಿಸಲಾಗುವುದು. ಮೊದಲ ದಿನ ಸಿಹಿ ತಿನಿಸಿನ ಜೊತೆಗೆ ಊಟ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಇಲಾಖೆ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿಲ್ಲ. ತೀರಾ ಕಳಪೆ ಫಲಿತಾಂಶ ಬಂದಿರುವ ಶಾಲೆ ಮತ್ತು ವಿಷಯದ ಅತಿಥಿ ಶಿಕ್ಷಕರನ್ನು ತಗೆದು ಹಾಕಿ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ. ಆದ್ದರಿಂದ ಡಿಡಿಪಿಐ ಪ್ರತಿ ಶಾಲೆಯ ವಿಷಯವಾರು ಫಲಿತಾಂಶದ ಮಾಹಿತಿ ಸಂಗ್ರಹಿಸಲು ತಮ್ಮ ಅಧೀನ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.