
ಅಳವಂಡಿ: ಸಮೀಪದ ಕಂಪ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸುಣ್ಣಬಣ್ಣಗಳಿಂದ ಆಕರ್ಷಣೆಗೊಂಡಿದ್ದು, ಶಾಲೆಯತ್ತ ಮಕ್ಕಳನ್ನು ಕೈಬಿಸಿ ಕರೆಯುತ್ತಿದೆ.
ಕೊಪ್ಪಳ ತಾಲ್ಲೂಕಿನ ಕಂಪ್ಲಿ ಗ್ರಾಮದಲ್ಲಿ ಶಾಲೆಯು 1962ರಲ್ಲಿ ಪ್ರಾರಂಭವಾಗಿದೆ. ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೊಠಡಿಗಳಿದ್ದು, ಸುಮಾರು 31 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಬೆಂಗಳೂರಿನ ಟ್ರಿಲೀಕ್ಸ್ ಸಾಫ್ಟ್‌ವೇರ್ ಕಂಪನಿಯು ತನ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿಕೊಂಡು, ಈ ಶಾಲೆಗೆ ಸುಣ್ಣ ಬಣ್ಣದಿಂದ ಆಕರ್ಷಣೆ ಮಾಡುವುದರ ಜೊತೆಗೆ ಮೂಲಸೌಕರ್ಯ ಒದಗಿಸಿಲಾಗಿದೆ. ಖಾಸಗಿ ಕಂಪನಿಯಲ್ಲಿ ಗ್ರಾಮದ ಯುವಕ, ಶಾಲೆಯ ಹಳೆ ವಿದ್ಯಾರ್ಥಿ ವಿಶ್ವನಾಥ ಹೊಟ್ಟಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಕಂಪನಿಯವರನ್ನು ಮನವೊಲಿಸಿ, ತಮ್ಮೂರಿನ ಶಾಲೆಯನ್ನು ಅಂದಗೊಳಸಿ, ಮಕ್ಕಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಶ್ರಮಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆಯು ಹಲವು ವರ್ಷಗಳಿಂದ ಬಣ್ಣ ಕಂಡಿರಲಿಲ್ಲ. ಇದಕ್ಕೆ ಅಷ್ಟು ಅನುದಾನವೂ ಇರಲಿಲ್ಲ. ಮೂಲಸೌಕರ್ಯ ಕೊರತೆಯಿಂದ ಮಕ್ಕಳ ದಾಖಲಾತಿ ಕೂಡ ಕಡಿಮೆಯಾಗಿದೆ. ಈಗ ಖಾಸಗಿ ಕಂಪನಿಯ ಸುಮಾರು ₹ 3 ಲಕ್ಷ ಹಣದಿಂದ ಮಕ್ಕಳಿಗೆ ಸಾಮಗ್ರಿ ಹಾಗೂ ಬಣ್ಣ ಬಳಿಯಲಾಗಿದೆ. ಶಾಲೆಯು ಇನ್ನು ಹೆಚ್ಚು ಸರ್ಕಾರದಿಂದ ಅಭಿವೃದ್ಧಿಯಾಗಬೇಕಿದೆ ಎನ್ನುತ್ತಾರೆ ಗ್ರಾಮದ ಶಿಕ್ಷಣ ಪ್ರೇಮಿಗಳು.
ಶಾಲೆಗೆ ನೀಡಿರುವ ಸಾಮಗ್ರಿಗಳು: ಸ್ಮಾರ್ಟ್ ಕ್ಲಾಸ್, ಒಂದು ಪ್ರೊಜೆಕ್ಟರ್, ಸ್ಟಿಲ್ ಅಲಾಮರ್, ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚು, ಶಾಲೆಯ ಎಲ್ಲ ಮಕ್ಕಳಿಗೆ ಬ್ಯಾಗ್, ಗ್ರೀನ್ ಬೋರ್ಡ್, ಶಾಲೆಯ ಮಕ್ಕಳಿಗೆ ಬೇಕಾದ ಕ್ರೀಡಾ ಕಿಟ್, ಕುರ್ಚಿಗಳನ್ನು ಕಂಪನಿಯು ಶಾಲೆಗೆ ಕೊಡುಗೆಯಾಗಿ ನೀಡಿದೆ.
ನಮ್ಮೂರು ಶಾಲೆಯು ಸುಣ್ಣಬಣ್ಣ ಕಾಣದೇ ಮಾಸಿ ಹೋಗಿತ್ತು. ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳಿರಲಿಲ್ಲ. ಇದನ್ನು ಮನಗಂಡು ನಾನು ಕೆಲಸ ಮಾಡುತ್ತಿದ್ದ ಕಂಪನಿಯವರಲ್ಲಿ ಮನವಿ ಮಾಡಿದೆ. ಇದಕ್ಕೆ ₹ 3 ಲಕ್ಷ ಅನುದಾನ ನೀಡಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆವಿಶ್ವನಾಥ ಹೊಟ್ಟಿ ಶಾಲೆ ಹಳೆ ವಿದ್ಯಾರ್ಥಿ
‘ಸಹಕಾರದಿಂದ ಅಭಿವೃದ್ಧಿ ಸಾಧ್ಯ’
ಶಾಲೆಯ ಹಳೆ ವಿದ್ಯಾರ್ಥಿ ವಿಶ್ವನಾಥ ಹೊಟ್ಟಿ ಅವರ ತಮ್ಮ ಕಂಪನಿಗೆ ಮನವಿ ಮಾಡಿಕೊಂಡು ಶಾಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಿದ್ದಾರೆ. ಶಾಲೆಯು ಸುಣ್ಣ ಬಣ್ಣದಿಂದ ಸುಂದರವಾಗಿ ಕಾಣುತ್ತಿದೆ. ಮಕ್ಕಳ ಕಲಿಕೆಗೆ ನಿರಂತರ ಶ್ರಮಿಸಲಾಗುವುದು. ಸರ್ಕಾರದ ಜೊತೆಗೆ ಗ್ರಾಮಸ್ಥರಿಂದ ಹಾಗೂ ದಾನಿಗಳ ಸಹಕಾರದಿಂದ ಶಾಲೆಯು ಅಭಿವೃದ್ಧಿ ಕಾಣಲು ಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮುಖ್ಯಶಿಕ್ಷಕಿ ಜಯಲಕ್ಷ್ಮೀ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.