ಮುನಿರಾಬಾದ್: ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿ ದಂಡೆಯಲ್ಲಿ ಮೊದಲ ಬಾರಿಗೆ ಆಗಸ್ಟ್ 26ರಂದು ತುಂಗಭದ್ರಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಮುನಿರಾಬಾದ್ ಸಮೀಪದ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು,‘ಧಾರ್ಮಿಕ ದತ್ತಿ ಇಲಾಖೆ ಹಾಗೂ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ಅಂದು ಹುಲಿಗೆಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ, ಹೋಮ–ಹವನ ನಡೆಸಲಾಗುವುದು. ಅಂದು ಸಂಜೆ 6.30 ಗಂಟೆಗೆ ತುಂಗಭದ್ರಾ ನದಿ ದಡದಲ್ಲಿ ವಿಶೇಷ ವೇದಿಕೆ ರಚಿಸಿ ತುಂಗಭದ್ರಾ ಆರತಿ ಉತ್ಸವ ನಡೆಸಲಾಗುವುದು. ಇದಕ್ಕೂ ಮುನ್ನ 501 ಕುಂಭೋತ್ಸವ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಹ ನಡೆಯಲಿದೆ’ ಎಂದು ಹೇಳಿದರು.
ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಸಚಿವರು, ಶಾಸಕರು, ಎಲ್ಲಾ ಪಕ್ಷದ ಮುಖಂಡರು, ಮಠಾಧೀಶರು, ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.
ಮುದ್ದಮ್ಮನ ಕಟ್ಟೆಯಿಂದ ಕುಂಭ–ಕಳಸ ಸಹಿತ ಮೆರವಣಿಗೆ ಮೂಲಕ ಗಣ್ಯರನ್ನು ಸ್ವಾಗತಿಸುವ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನ ಮತ್ತು ನದಿ ದಡದಲ್ಲಿ ವಿದ್ಯುತ್ ದೀಪದ ಅಲಂಕಾರ, ದೇವಸ್ಥಾನ ಪ್ರಾಂಗಣದಲ್ಲಿ ಹೂವಿನ ಅಲಂಕಾರ ಮಾಡಲು ಉದ್ದೇಶಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ 5 ಉಸ್ತುವಾರಿ ಸಮಿತಿ ರಚಿಸಲಾಗುವುದು. ಈ ಬಗ್ಗೆ ಸುತ್ತಲಿನ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ನಿಷೇಧ ಮತ್ತು ನದಿಗೆ ಅನವಶ್ಯಕ ವಸ್ತು ಹಾಕುವುದನ್ನು ತಡೆಗಟ್ಟಿ ಸ್ವಚ್ಛತೆ ಕಾಪಾಡುವಂತೆ ಸಂಘ–ಸಂಸ್ಥೆಯ ಪ್ರತಿನಿಧಿಗಳು ಸಲಹೆ ನೀಡಿದರು.
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶರಾವ್, ಗಣ್ಯರಾದ ಶರಣಗೌಡ ಪಾಟೀಲ, ಈ.ಈರಣ್ಣ, ಪಾಲಾಕ್ಷಪ್ಪ ಗುಂಗಾಡಿ, ಪಂಪಾಪತಿ ರಾಟಿ, ಪ್ರಭುರಾಜ ಪಾಟೀಲ, ಎ.ಧರ್ಮರಾಜರಾವ್, ವೆಂಕಟೇಶ ವಡ್ಡರ್, ಹನುಮಂತಪ್ಪ ನಾಯಕ್, ಅನಿತಾ ಪೂಜಾರ್ ಹಾಗೂ ಹನುಮಂತಪ್ಪ ಗಿಡ್ಡಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.