ADVERTISEMENT

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಜೀವ ಕಳೆ

ಮುಂಗಾರು ಪೂರ್ವದಿಂದಲೂ ಉತ್ತಮ ಮಳೆ, ಪ್ರವಾಸಿಗರಿಗೆ ಖುಷಿ

ಗುರುರಾಜ ಅಂಗಡಿ
Published 5 ಜೂನ್ 2025, 5:51 IST
Last Updated 5 ಜೂನ್ 2025, 5:51 IST
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು  
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು     

ಮುನಿರಾಬಾದ್: ಅಂತರರಾಜ್ಯ ನೀರಾವರಿ ಯೋಜನೆಯಾದ ಇಲ್ಲಿನ ತುಂಗಭದ್ರಾ ಜಲಾಶಯ ಕ್ರಮೇಣ ಹೊಸ ನೀರಿನಿಂದ ತುಂಬಿಕೊಳ್ಳುತ್ತಿದ್ದು, ನೀರು ಅಲೆ ಅಲೆಯಾಗಿ ದಡದ ಹತ್ತಿರ ಬರುತ್ತಿವೆ.

ತುಂಗಾ ಮತ್ತು ಭದ್ರಾ ನದಿಗಳು ಜನ್ಮ ತಾಳುವ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೊಸ ನೀರು ಹರಿದು ಬರುತ್ತಿದೆ. 15-20 ದಿನಗಳ ಮುಂಚೆ ಮುಂಗಾರು ಪ್ರವೇಶಿಸಿದ್ದರಿಂದ ಈ ಸಲ ಅವಧಿ ಪೂರ್ವದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಳೆದ ಹಲವು ದಿನಗಳಿಂದ ನಿತ್ಯ ಸರಾಸರಿ 15 ರಿಂದ 20 ಸಾವಿರ ಕ್ಯುಸೆಕ್ ನೀರು ಹರಿದು ಬಂದು ಜಲಾಶಯದ ಒಡಲು ಸೇರುತ್ತಿದೆ.

ಪ್ರವಾಸಿಗರಿಗೆ ಮುಕ್ತ: ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ ಭಯೋತ್ಪಾದಕರ ಸಂಭಾವ್ಯ ದಾಳಿಯ ಶಂಕೆಯಿಂದ ಜಲಾಶಯ ಸಂರಕ್ಷಿಸಲು ಜಲಾಶಯಕ್ಕೆ ಭದ್ರತೆ ಒದಗಿಸಲಾಗಿತ್ತು. ಆಗ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈಗ ಮತ್ತೆ ಪ್ರವಾಸಿಗರಿಗೆ ಜಲಾಶಯ ವೀಕ್ಷಣೆ ಮುಕ್ತವಾಗಿದೆ.

ADVERTISEMENT

ಶನಿವಾರ, ಭಾನುವಾರ ಅಥವಾ ಸರ್ಕಾರಿ ರಜಾ ದಿನಗಳಂದು ಪ್ರವಾಸಿಗರ ಸಂಚಾರ ಹೆಚ್ಚಾಗಿರುತ್ತದೆ. ಜಲಾಶಯದ ಹಿನ್ನೀರಿನ ವೀಕ್ಷಣೆಗೆ ಬರುವ ಪ್ರವಾಸಿಗರು ಪಕ್ಕದಲ್ಲಿರುವ ಪಂಪಾವನ ಉದ್ಯಾನದಲ್ಲಿಯೂ ಪ್ರಕೃತಿ ಸವಿ ಸವಿಯುತ್ತಾರೆ. ತುಂಗಭದ್ರಾ ಜಲಾಶಯಕ್ಕೆ ಬರುವವರಿಗೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ, ಅಂಜನಾದ್ರಿ, ಸಾಣಾಪುರ ಕೆರೆ, ಪಂಪಾಸರೋವರ, ಆನೆಗೊಂದಿ ಹೀಗೆ ಅನೇಕ ಪ್ರವಾಸಿ ತಾಣಗಳಿವೆ.

ಜಲಾಶಯಕ್ಕೆ ಬಹಳಷ್ಟು ನೀರು ಬರುವಾಗ ಬಂದರೆ ನೀರಿನ ಪ್ರಕೃತಿಯ ಸವಿ ಜೊತೆಗೆ ಪ್ರವಾಸಿ ತಾಣಗಳನ್ನೂ ನೋಡಬಹುದು ಎನ್ನುವುದು ಜನರ ಲೆಕ್ಕಾಚಾರ. ಸಮೀಪದಿಂದಲೇ ಜಲಾಶಯದಲ್ಲಿ ನೀರಿನ ಅಲೆಗಳ ಸೌಂದರ್ಯ, ಅವುಗಳ ಶಬ್ದವನ್ನು ಕೇಳುವುದು ಪ್ರವಾಸಿಗರ ಮನಕ್ಕೆ ಹಿತವೆನಿಸುತ್ತದೆ. ನೀರಿನ ಪ್ರಮಾಣ ಇನ್ನಷ್ಟು ಜಾಸ್ತಿಯಾದರೆ ನೀರು ಜೋರಾಗಿ ದಡಕ್ಕೆ ಅಪ್ಪಳಿಸಿ ಪ್ರವಾಸಿಗರಿಗೂ ಸಿಡಿಯುತ್ತವೆ. ಈ ಖುಷಿಯನ್ನು ಅನುಭವಿಸಲು ಪ್ರವಾಸಿಗರು ಇಲ್ಲಿ ಬರುತ್ತಿದ್ದಾರೆ. ಒಳಹರಿವಿನ ಪ್ರಮಾಣ ಇದೇ ವೇಗದಲ್ಲಿ ಹೆಚ್ಚಾದರೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ.      

ಬೆಳಿಗ್ಗೆ 9.30ರಿಂದ ಸಂಜೆ 6ರ ತನಕ ಜಲಾಶಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಅವಕಾಶವಿದೆ. 

ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರು ನೀರು ಕಣ್ತುಂಬಿಕೊಂಡ ಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.