
ಕೊಪ್ಪಳ: ಕಲ್ಯಾಣ ಕರ್ನಾಟಕದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಜನರ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕ್ರಮೇಣವಾಗಿ ಕುಸಿಯುತ್ತಲೇ ಸಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಜಲಾಶಯ ನಿರ್ಮಾಣವಾಗಿ ಏಳು ದಶಕಗಳಾಗಿದ್ದು, ಆರಂಭದಲ್ಲಿ 133 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿತ್ತು. ಹಂತಹಂತವಾಗಿ ಹೂಳು ತುಂಬಿದ ಪರಿಣಾಮ 105.788 ಟಿಎಂಸಿ ಅಡಿಗೆ ಇಳಿಕೆಯಾಗಿದೆ. ಕಳೆದ ವರ್ಷ 19ನೇ ಕ್ರಸ್ಟ್‌ಗೇಟ್ ಮುರಿದ ಬಳಿಕ ಉಳಿದ ಗೇಟ್‌ಗಳ ಸಾಮರ್ಥ್ಯ ಪರೀಕ್ಷೆ ಮಾಡಲಾಗಿದ್ದು, ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಾವಣೆ ಮಾಡಬೇಕು ಎಂದು ಜಲಾಶಯಗಳ ಸುರಕ್ಷಿತಾ ತಜ್ಞ ಕನ್ನಯ್ಯನಾಯ್ಡು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
19ನೇ ಕ್ರಸ್ಟ್‌ಗೇಟ್ ದುರಸ್ತಿಯಾದ ಬಳಿಕ ಸುರಕ್ಷತೆಯ ದೃಷ್ಟಿಯಿಂದ ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹ ಮಾಡಲಾಗುತ್ತಿದ್ದು, ಜಲಾಶಯದಲ್ಲಿ ಪ್ರಸ್ತುತ 76.352 ಟಿಎಂಸಿ ಅಡಿ ನೀರು ಉಳಿದುಕೊಂಡಿದೆ. ಇರುವ ಈ ನೀರಿನಲ್ಲಿಯೇ ಎರಡನೇ ಬೆಳೆಗೂ ನೀರು ಹರಿಸಿ ರಾಜ್ಯದ ನಾಲ್ಕು ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ನೀರು ಕೊಡಬೇಕಾಗಿದೆ.
ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ರೈತರು ಭತ್ತಕ್ಕಾಗಿ ಇದೇ ನೀರು ನಂಬಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ರೈತರಿಗೆ ಭತ್ತದ ಜೊತೆಗೆ ಮೆಣಸಿನಕಾಯಿ ಬೆಳೆಗೆ ತುಂಗಭದ್ರಾ ನೀರು ಆಧಾರವಾಗಿದೆ. ಹಿಂದೆ ಎರಡು ವರ್ಷ ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಯಿಂದ ರೈತರು ನಷ್ಟ ಅನುಭವಿಸಿದ್ದಾರೆ.
ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ‘ಎರಡನೇ ಬೆಳೆಗೆ ನೀರು ಇಲ್ಲ’ ಎಂದು ಐಸಿಸಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ ತಂಗಡಗಿ ನೀಡಿರುವ ಹೇಳಿಕೆ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ನೀರು ಕೊಡಲೇಬೇಕು ಎಂದು ನಾಲ್ಕೂ ಜಿಲ್ಲೆಗಳಲ್ಲಿ ರೈತರು ಹೋರಾಟ ನಡೆಸಿ ಬಿಗಿಪಟ್ಟು ಹಿಡಿದಿದ್ದಾರೆ. ಹಿಂದಿನ ಎರಡು ತಿಂಗಳು ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯಾಗಿ ಜಲಾಶಯಕ್ಕೆ ಉತ್ತಮವಾಗಿ ನೀರು ಹರಿದುಬಂದರೂ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗಿಲ್ಲ.
ಈ ಸಲದ ಮುಂಗಾರು ಹಂಗಾಮು ಆರಂಭದ ಜೂನ್‌ನಿಂದ ನ. 13ರ ತನಕ ತನಕ ಒಟ್ಟು 414.741 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಬಂದಿದ್ದು, ಇದರಲ್ಲಿ 249.586 ಟಿಎಂಸಿ ಅಡಿ ನೀರನ್ನು ವ್ಯರ್ಥವಾಗಿ ನದಿಗೆ ಹರಿಸಲಾಗಿದೆ. ಒಂದೆಡೆ ಹೀಗೆ ನೀರು ವ್ಯರ್ಥವಾಗುತ್ತಿದ್ದರೆ, ಇನ್ನೊಂದೆಡೆ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದೇ ಕೃಷಿಕರ ಬದುಕು ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ ಎನ್ನುತ್ತಾರೆ ರೈತರು. ಎರಡನೇ ಬೆಳೆಗೆ ನೀರು ಹರಿಸುವ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಈ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
‘ಭತ್ತದಷ್ಟೇ ಮೆಣಸಿನಕಾಯಿ ಬೆಳೆಯನ್ನು ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎರಡನೇ ಬೆಳೆಗೆ ನೀರು ಕೊಡದಿದ್ದರೆ ರೈತರು ಮತ್ತೆ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ ಬಳ್ಳಾರಿ ಜಿಲ್ಲೆಯ ರೈತ ಮುಖಂಡ ಲಕ್ಷ್ಮೀಕಾಂತ ರೆಡ್ಡಿ ಅವರು, ‘ಕನಿಷ್ಠ ಜನವರಿ ತನಕವಾದರೂ ನೀರು ಹರಿಸಲೇಬೇಕು’ ಎಂದು ಒತ್ತಾಯಿಸಿದರು.
ಎರಡನೇ ಬೆಳೆಗೆ ನೀರು ಬಿಡದಿದ್ದರೆ ನಾವು ಮಣ್ಣು ತಿನ್ನಬೇಕಾಗುತ್ತದೆ. ಇಷ್ಟು ದಿನ ಕಾಲಹರಣ ಮಾಡಿ ಈಗ ಕ್ರಸ್ಟ್‌ಗೇಟ್ ಅಳವಡಿಸುವ ಕಾರಣ ನೀರು ಹರಿಸುವುದಿಲ್ಲ ಎನ್ನುವುದು ಸರಿಯೇ?ಪಾಮಣ್ಣ ನಾಯಕ ಗಂಗಾವತಿಯ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.