ತುಂಗಭದ್ರಾ ಜಲಾಶಯ
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಮೂಲಕ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಕೆರೆಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗಿದೆ.
ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಯ 104 ಮೈಲ್‌ಗಳ ತನಕ ಕುಡಿಯುವ ನೀರಿಗಾಗಿ ಎರಡೂ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆಗಳನ್ನು ತುಂಬಿಸಿಕೊಳ್ಳಲು ಗುರುವಾರದಿಂದ (ಮೇ 15) ಮೇ 25ರ ತನಕ 2000 ಕ್ಯುಸೆಕ್‌ನಂತೆ ನೀರು ಬಿಡಲಾಗಿದೆ.
ರಾಯಚೂರು ಜಿಲ್ಲೆಯ ಯರಮರಸ್ ವಿಭಾಗದಲ್ಲಿ ಮೇ 18ರಿಂದ 20ರ ವರೆಗೆ, ಸಿರವಾರ ವಿಭಾಗದಲ್ಲಿ 20ರಿಂದ 22ರ ತನಕ, ಸಿಂಧನೂರು ವಿಭಾಗಕ್ಕೆ 22ರಿಂದ 24ರ ತನಕ ಮತ್ತು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ವಿಭಾಗಕ್ಕೆ 24ರಿಂದ 25ರ ತನಕ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಲ್. ಬಸವರಾಜ್ ತಿಳಿಸಿದ್ದಾರೆ.
‘ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮಾತ್ರ ಹರಿಸಲಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ರೈತರು ಕಾಲುವೆ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರು ಬಳಸುವುದನ್ನು ನಿಷೇಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.