ಬಂಧನ
(ಸಾಂದರ್ಭಿಕ ಚಿತ್ರ)
ಕೊಪ್ಪಳ: ಪ್ರಕರಣವೊಂದರ ವಿಚಾರಣೆಗಾಗಿ ಇಲ್ಲಿಗೆ ಸ್ಥಳಾಂತರಗೊಂಡಿರುವ ಜಿಲ್ಲಾ ಕಾರಾಗೃಹದ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಆತ ರಂಪಾಟ ಮಾಡಿದ್ದು, ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.
ಡಿಎಆರ್ ಕೇಂದ್ರದ ಪೊಲೀಸ್ ಅಧಿಕಾರಿ ಸಂತೋಷ ಕೋಚಲಾಪೂರಮಠ ಇತ್ತೀಚೆಗೆ ಆರೋಪಿ ಕಾರ್ಮಿಕ ಮಹಮ್ಮದ್ ಖಲೀಲ್ ಉಲ್ಲಾನನ್ನು ಪೈಲ್ಸ್ ಕಾಯಿಲೆ ಚಿಕಿತ್ಸೆ ಮಾಡಿಸಿಕೊಂಡು ಬರಲು ತಮ್ಮ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದಾಗ ಅರೋಪಿ ಏಕಾಏಕಿ ಸಿಟ್ಟಿಗೆದ್ದು ಪೊಲೀಸರನ್ನು ಎಳೆದಾಡಿ ಕೂಗಾಡಿದ್ದಾನೆ.
ನಿಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ. ಅವರೊಂದಿಗೆ ಮಾತನಾಡಬೇಕು. ಇಲ್ಲವಾದರೆ ಆಸ್ಪತ್ರೆಯ ಗಾಜು ಒಡೆದು ಹಾಕುತ್ತೇನೆ ಎಂದು ಕೂಗಾಡಿ ಪಕ್ಕದಲ್ಲಿಯೇ ಇದ್ದ ಆಸ್ಪತ್ರೆಗೆ ಬಣ್ಣ ಬಳೆಯುತ್ತಿದ್ದ ಕಾರ್ಮಿಕರ ಹತ್ತಿರದ ಟಿನ್ನರ್ ಬಾಟಲ್ ಎತ್ತಿಕೊಂಡು ಕುಡಿಯಲು ಮತ್ತು ಮೈಮೇಲೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾನೆ.
ಜೊತೆಯಲ್ಲಿಯೇ ಇದ್ದ ಪೊಲೀಸರು ಆರೋಪಿಯನ್ನು ಹಿಡಿಯಲು ಹೋದಾಗ ಆತ ಪೊಲೀಸ್ ಸಿಬ್ಬಂದಿ ಹುಲಗಪ್ಪ ಎಂಬುವರಿಗೆ ಗಾಯಗೊಳಿಸಿದ್ದಾನೆ. ಬಳಿಕ ಎಲ್ಲ ಪೊಲೀಸರು ಸೇರಿ ಹಿಡಿದುಕೊಂಡು ಮಹಮ್ಮದ್ ಖಲೀಲ್‌ನನ್ನು ತುರ್ತು ನಿಗಾ ಘಟಕದ ವಾರ್ಡ್‌ಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಕೂಲಿ ಕೆಲಸ ಮಾಡುವ ಬೆಂಗಳೂರಿನ ಮಹಮ್ಮದ್ ಖಲೀಲ್ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತನ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದಾಖಲಾದ ಪ್ರಕರಣದ ಆರೋಪಿಯಾಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.