ADVERTISEMENT

ಅವೈಜ್ಞಾನಿಕ ಕಾಮಗಾರಿ: 4 ದೇವಸ್ಥಾನಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 7:39 IST
Last Updated 18 ಆಗಸ್ಟ್ 2024, 7:39 IST
ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನಗಳು ಮಳೆಯ ನೀರಿನಿಂದ ಜಲಾವೃತವಾಗಿರುವುದು
ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನಗಳು ಮಳೆಯ ನೀರಿನಿಂದ ಜಲಾವೃತವಾಗಿರುವುದು   

ಕುಕನೂರು: ‘ತಾಲ್ಲೂಕಿನ ಶಿರೂರು ಗ್ರಾಮದ ಪುರ್ನವಸತಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಗ್ರಾಮದ ನಾಲ್ಕು ದೇವಸ್ಥಾನಗಳು ಮಳೆಯಿಂದ ಮುಳುಗಡೆಯಾಗಿವೆ’ ಎಂದು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮದ ಪುರ್ನವಸತಿಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಅರೆಬರೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಕಲ್ಲಿನಾಥೇಶ್ವರ, ದುರ್ಗಾದೇವಿ, ದ್ಯಾಮವ್ವ ಹಾಗೂ ಮಾರುತಿ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಕಳೇದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಆಗುತ್ತಿದ್ದರು ನಮಗೂ, ಇದಕ್ಕೂ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದರು.

ಮನ ಒಲಿಕೆ: ಶಿರೂರು ಗ್ರಾಮದ ನಿವಾಸಿಯೊಬ್ಬರು ಚರಂಡಿ ನಿರ್ಮಿಸಲು ತಕರಾರು ತೆಗೆದಿದ್ದರು, ಅದನ್ನು ಗಮನಹರಿಸಿ ಮಳೆ ನೀರನ್ನು ಸರಾಗವಾಗಿ ಹರಿದು ಹೋಗಲು ತಹಶೀಲ್ದಾರ್ ಎಚ್.ಪ್ರಾಣೇಶ, ಮುಖಂಡ ದೇವಪ್ಪ ಅರಕೇರಿ, ಪೊಲೀಸ್‌ ಅಧಿಕಾರಿಗಳು ನೀರು ಹರಿದು ಹೋಗುವಂತೆ ಮನ ಒಲಿಸಿದರು.

ADVERTISEMENT

ಜಮೀನಿಗೆ ನುಗ್ಗಿದ ಚರಂಡಿ ನೀರು: ಶಿರೂರು ಗ್ರಾಮದ ರೈತ ರಮೇಶ ವಾಲ್ಮೀಕಿ ಅವರ ಜಮೀನಿನ ಹತ್ತಿರ ಚರಂಡಿ ಕಾಮಗಾರಿಯನ್ನು ಅರೆಬರೆ ಮಾಡಿದ್ದರಿಂದ ಪ್ರತಿವರ್ಷ ಮಳೆ ಬಂದಾಗ ನೀರು ಜಮೀನಿಗೆ ಹರಿದು ಬರುತ್ತದೆ. ಇದರಿಂದ ರೈತ ರಮೇಶ ಅವರು ಜಮೀನು ಬಿತ್ತನೆ ಮಾಡುವುದನ್ನೇ ಬಿಟ್ಟಿದ್ದರು. ಇದರ ಬಗ್ಗೆ ಎಇಇ ಅಧಿಕಾರಿ ರಾಘವೇಂದ್ರ ಜೋಶಿ ಅವರಿಗೆ ಅನೇಕ ಬಾರಿ ಹೇಳಿದರೂ ಕ್ಯಾರೆ ಎಂದಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳ ನೀರಿನಲ್ಲಿ ಮುಳುಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾ.ಪಂ ಮಾಜಿ ಉಪಾಧ್ಯಕ್ಷ ಈಶಪ್ಪ ದೊಡ್ಡಮನಿ, ಗ್ರಾ.ಪಂ ಸದಸ್ಯ ವಿರೇಂದ್ರ ಮಾದಿನೂರು, ಮಲ್ಲಪ್ಪ ಬಂಗಾರಿ, ಮಂಜುನಾಥ ವಾಲ್ಮೀಕಿ, ಈರಪ್ಪ, ಶರಣಪ್ಪ, ಈರಪ್ಪ, ಶರಣಪ್ಪ ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.