ADVERTISEMENT

ಕೊಪ್ಪಳ|ಉಪಲೋಕಾಯುಕ್ತರ ಜಿಲ್ಲಾ ಪ್ರವಾಸ: ದೂರುಗಳ ದುಮ್ಮಾನಕ್ಕೆ ಸಿಗುವುದೇ ಪರಿಹಾರ?

ಪ್ರಮೋದ ಕುಲಕರ್ಣಿ
Published 29 ಅಕ್ಟೋಬರ್ 2025, 7:12 IST
Last Updated 29 ಅಕ್ಟೋಬರ್ 2025, 7:12 IST
ಬಿ.ವೀರಪ್ಪ
ಬಿ.ವೀರಪ್ಪ   

ಕೊಪ್ಪಳ: ಬಹುವರ್ಷಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆಯಿಂದ ಕಾಯುತ್ತಿರುವ ಸಾರ್ವಜನಿಕರಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೂರು ದಿನಗಳ ಕಾಲ ಜಿಲ್ಲೆಯ ಭೇಟಿ ನೀಡುತ್ತಿರುವುದು ಭರವಸೆ ಮೂಡಿಸಿದೆ.

ಲೋಕಾಯುಕ್ತ ಕಚೇರಿಯಲ್ಲಿ ಜಿಲ್ಲೆಗೆ ಸಂಬಂಧಿಸಿದ 105 ಪ್ರಕರಣಗಳು ಬಾಕಿಯಿದ್ದು ಕಂದಾಯ ಇಲಾಖೆ, ತಹಶೀಲ್ದಾರರು, ಉಪವಿಭಾಗಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇವುಗಳ ಪರಿಹಾರಕ್ಕೆ ಜಿಲ್ಲಾಡಳಿತ ನಿರಂತರ ಸಭೆಗಳನ್ನು ಮಾಡಿದೆ. ಖುದ್ದು ಉಪಲೋಕಾಯುಕ್ತರೇ ಈಗ ಭೇಟಿ ನೀಡುತ್ತಿರುವ ಕಾರಣ ದೂರುದಾರರು ಹಾಗೂ ಎದುರುಗಾರರ ನಡುವೆ ಮುಖಾಮುಖಿ ವಿಚಾರಣೆ ನಡೆಯಲಿದ್ದು, ಸಮಸ್ಯೆಗೆ ತ್ವರಿತ ಪರಿಹಾರ ಲಭಿಸಬಹುದು ಎನ್ನುವ ನಿರೀಕ್ಷೆ ಜನರಲ್ಲಿ ಮನೆ ಮಾಡಿದೆ.

ಸಮಸ್ಯೆಗಳ ಅಹವಾಲು ಸಲ್ಲಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುವುದರಿಂದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬರುವ ನಿರೀಕ್ಷೆಯಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಇಲ್ಲಿನ ಲೋಕಾಯುಕ್ತ ಅಧಿಕಾರಿಗಳು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಉಪಲೋಕಾಯುಕ್ತರ ಭೇಟಿ ಬಗ್ಗೆ ಜನಸಂದಣಿ ಪ್ರದೇಶಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

ADVERTISEMENT

ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮ: ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧೆಡೆ ಭೇಟಿ ನೀಡಲಿದ್ದಾರೆ.

ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಹಾಗೂ 2.30ರಿಂದ ವಿವಿಧ ಸ್ಥಳಗಳಿಗೆ ಭೇಟಿ, ಅ.30ರಂದು ಬೆಳಿಗ್ಗೆ 6.30ರಿಂದ ವಿವಿಧೆಡೆ ಪರಿಶೀಲನೆ, 10ರಿಂದ ಮಧ್ಯಾಹ್ನ 1.30ರ ತನಕ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5ರ ತನಕ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಾರ್ವಜನಿಕರ ದೂರು, ಅಹವಾಲು ಸ್ವೀಕರಿಸುವರು.

ಸಂಜೆ 5.30ರಿಂದ 6.30ರ ತನಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗಿಯಾಗಿವರು.

ಅ.31ರಂದು ಬೆಳಿಗ್ಗೆ 6.30ಕ್ಕೆ ವಿವಿಧ ಸ್ಥಳಗಳಿಗೆ ಭೇಟಿ, ಬೆಳಿಗ್ಗೆ 9.30ರಿಂದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಂಗದ ಅಧಿಕಾರಿಗಳು, ವಕೀಲರು ಹಾಗೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ, ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.45ರ ತನಕ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಬಾಕಿ ಇರುವ ಹಾಗೂ ಉಪಲೋಕಾಯುಕ್ತರ ವ್ಯಾಪ್ತಿಗೆ ಬರುವ ವಿವಿಧ ಪ್ರಕರಣಗಳಲ್ಲಿ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಪ್ರಕರಣಗಳ ವಿಚಾರಣೆ ನಡೆಸುವರು.

ಮಧ್ಯಾಹ್ನ 2.30ರಿಂದ ಸಂಜೆ 6ರ ತನಕ ಪ್ರಕರಣಗಳ ವಿಚಾರಣೆ ಜರುಗಲಿದೆ ಎಂದು ಕರ್ನಾಟಕ ಲೋಕಾಯುಕ್ತದ ರಜಿಸ್ಟಾರ್‌ ಎಂ. ಚಂದ್ರಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.

ದೂರು ನೀಡಲು ಬರುವವರು ಅಥವಾ ಅರ್ಜಿದಾರರು ದಾಖಲೆಗಳೊಂದಿಗೆ ಹಾಜರಾಗಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯೊಂದಿಗೆ ಖುದ್ದು ಹಾಜರಾಗಿ ಉಪಲೋಕಾಯುಕ್ತರಿಗೆ ದೂರು ಸಲ್ಲಿಸಬೇಕು
ಸತೀಶ ಎಸ್.ಚಿಟಗುಬ್ಬಿ ಲೋಕಾಯುಕ್ತದ ರಾಯಚೂರು ಎಸ್‌.ಪಿ
ಉಪ ಲೋಕಾಯುಕ್ತರ ಭೇಟಿಗೆ ಜಿಲ್ಲೆಯ ವಿವಿಧ ಕಡೆಯಿಂದ ಬರುವ ಜನರಿಗೆ ಸರಿಯಾದ ಆಸನದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಬೇಕು
ಸಿದ್ರಾಮೇಶ್ವರ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.