ADVERTISEMENT

ಉರ್ದು ಸೊಗಸಾದ ಭಾಷೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 15:29 IST
Last Updated 7 ಜನವರಿ 2019, 15:29 IST

ಕೊಪ್ಪಳ: ನಮ್ಮ ಭಾರತ ದೇಶದಲ್ಲಿಯೇ ಹುಟ್ಟಿ ಬೆಳೆದ ಉರ್ದು ಭಾಷೆ ಅತ್ಯಂತ ಸೊಗಸಾದ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಈ ಭಾಷೆಯಲ್ಲಿ ಮಾತನಾಡಲು ಇಷ್ಟ ಪಡುತ್ತಾರೆ ಎಂದು ಸ್ವಾತಂತ್ರ್ಯ ಯೋಧ ಹಾಗೂ ನಿವೃತ್ತ ಉರ್ದು ಶಿಕ್ಷಕ ಶರಣಬಸವರಾಜ ಬಿಸರಳ್ಳಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಬೆಂಗಳೂರು ಉರ್ದು ಅಕಾಡೆಮಿ ಹಾಗೂ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ನಡೆದಕುಲ್ ಹಿಂದ್ ಮಹೆಫಿಲೆ ಮುಶಾಯರಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಾಹ್ ವಾಹ್ ಇರ್ಷಾದ್, ಮುಕರ್ರರ್, ದುಬಾರಾ ಇರ್ಷಾದ್ ಎಂಬ ಪದಗಳು ಕವನ ವಾಚನ ಮಾಡುವ ಕವಿಗಳಿಗೆ ರೋಮಾಂಚನ ಮತ್ತು ಪ್ರೋತ್ಸಾಹ, ಧೈರ್ಯ ತುಂಬುತ್ತವೆ. ಇದರಿಂದ ವಾಚನ ಮಾಡುವ ಕವಿಗಳಿಗೆ ಶಕ್ತಿ ಮತ್ತು ಪ್ರೇರಣೆ ದೊರೆಯುತ್ತದೆ ಎಂದರು.

ADVERTISEMENT

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಈ ಹಿಂದಿನಿಂದಲು ಉರ್ದುಗೆ ಬಹಳ ಮಹತ್ವ ಇತ್ತು. ಅಂದಿನ ಕಾಲದಲ್ಲಿ ಈ ಭಾಗದ ಆಡಳಿತ ಭಾಷೆಯಾಗಿತ್ತು. ನಾನು ಸಹ ಉರ್ದು ಭಾಷೆಯಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದರು.

ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನವ್ವರ್ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಜೆಡಿಎಸ್ ಮುಖಂಡ ಕೆ.ಎಂ.ಸೈಯ್ಯದ್, ಅಂಜುಮನ್ ಅಧ್ಯಕ್ಷ ಎಂ.ಪಾಷಾ ಖಾಟಾನ್, ಹುಬ್ಬಳ್ಳಿಯ ಸಮಾಜ ಸೇವಕ ರಶೀದ್ ಶೇಖ್, ಅಕಾಡೆಮಿ ಸದಸ್ಯರಾದ ಶಫೀಕ ಆಬೀದಿ, ಶಾಹಿದ್ ಖಾಜಿ, ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಇಮಾಮ್ ಹುಸೇನ ಸಿಂದೋಗಿ, ಕಾಂಗ್ರೆಸ್‌ ಮುಖಂಡ ಗವಿಸಿದ್ದಪ್ಪ ಮುದಗಲ್, ಎಂ.ಬಿ ಯುಸೂಫ್ ಖಾನ್, ಬದಿಯೂದಿನ್ ನವಿದ್, ಮಹ್ಮದ್ ಅಲಿಇದ್ದರು.

ಉರ್ದು ಭಾಷೆಯ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಎಂ.ಎ ಮಾಜಿದ್ ಸಿದ್ದಿಕಿ ಅವರಿಗೆ ಸನ್ಮಾನಿಸಲಾಯಿತು. ಕುಲ್ ಹಿಂದ್ ಉರ್ದು ಮುಶಾಯರಾ ಕಾರ್ಯಕ್ರಮ ನಡೆಯಿತು. ಸುಮಾರು 15 ರಾಷ್ಟ್ರ ಹಾಗೂ ರಾಜ್ಯಗಳ ಉರ್ದು ಕವಿಗಳು ತಮ್ಮ ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.