
ಕುಕನೂರು: ಪ್ರಾಮಾಣಿಕ ಹಾಗೂ ಮುತ್ಸದ್ದಿ ಜನಪ್ರತಿನಿಧಿಯಾಗಿದ್ದ ಮಾಜಿ ಶಾಸಕ ದಿವಂಗತ ವೀರಭದ್ರಪ್ಪ ಶಿರೂರ ಅವರ ಹುಟ್ಟೂರಿನಲ್ಲಿ ಸೋಮವಾರ ಅವರ ಪುತ್ಥಳಿ ಅನಾವರಣಗೊಳ್ಳಲಿದೆ.
ತಾಲ್ಲೂಕಿನ ಅಡೂರು ಗ್ರಾಮದ ವೀರಭದ್ರಪ್ಪ ಶಿರೂರ ಅವರು 1908ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಪ್ರಾಮಾಣಿಕತೆ ಬೆಳೆಸಿಕೊಂಡ ವೀರಭದ್ರಪ್ಪನವರು ಜನ ಈಗಲೂ ನೆನಪಿಸಿಕೊಳ್ಳಲು ಮಾದರಿ ರಾಜಕಾರಣಿಯಾಗಿ ಹೆಸರು ಮಾಡಿದ್ದಾರೆ. ಜನತಾ ಪಕ್ಷದಿಂದ 1962ರಲ್ಲಿ ಶಾಸಕರಾಗಿ ಆಯ್ಕೆಯಾದ ವೀರಭದ್ರಪ್ಪನವರು ಬಡತನದಲ್ಲಿಯೂ ಜನಸೇವೆಯನ್ನೇ ಪ್ರಥಮಾದ್ಯತೆ ಮಾಡಿಕೊಂಡಿದ್ದರು.
ಅವರು ಹರಿಜನರ ಉದ್ದಾರಕ್ಕಾಗಿ ಹುಟ್ಟೂರಿನಲ್ಲಿ ರಾಷ್ಟ್ರೀಯ ಶಾಲೆಯನ್ನು, ವಿಶ್ವನಾಥ ಗ್ರಂಥಾಲಯ ಹೀಗೆ ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಹಕಾರಿ ಸಂಘಗಳನ್ನು ಪ್ರಾರಂಭಿಸಿ ರೈತರ ಪ್ರಗತಿಗೂ ಶ್ರಮಿಸಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ತಾಲ್ಲೂಕಿನ ಭಾನಾಪುರ ರೈಲು ನಿಲ್ದಾಣಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
‘ಶಿರೂರು ವೀರಭದ್ರಪ್ಪನವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಧೀಮಂತ ನಾಯಕರಾಗಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಅವರು ಪ್ರೇರಣೆಯ ಚಿಲುಮೆಯಾಗಿದ್ದಾರೆ. ಅವರ ಪುತ್ಥಳಿ ಹುಟ್ಟೂರಿನಲ್ಲಿ ಅನಾವರಣ ಮಾಡಲಾಗುತ್ತಿದೆ’ ಎಂದು ಯುವ ಮುಖಂಡ ಹನುಮಂತರಡ್ಡಿ ಹೇಳಿದರು.
ಶಿರೂರು ವೀರಭದ್ರಪ್ಪನವರು ಶಾಸಕರಾಗಿದ್ದರೂ ಮಗಳ ಮದುವೆಯ ಸಂದರ್ಭದಲ್ಲಿ ಬಿಡಿಗಾಸು ಕೈಯಲ್ಲಿರಲಿಲ್ಲ. ಇದನ್ನು ತಿಳಿದುಕೊಂಡ ಅಂದಿನ ಕೊಪ್ಪಳ ಸಂಸದರಾಗಿದ್ದ ಅಗಡಿ ಸಂಗಣ್ಣನವರು ಈ ಕುರಿತು ಅಂದಿನ ಕೇಂದ್ರ ಗೃಹ ಸಚಿವರಾದ ಯಶವಂತರಾವ್ ಚೌಹಾಣ್ ಅವರಿಗೆ ಪತ್ರ ಬರೆದು ವಿವೇಚನಾ ನಿಧಿಯಲ್ಲಿ ಸಹಾಯ ಧನ ಕಳಿಸುವಂತೆ ಕೋರಿದ್ದರು.
ಇವರ ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ ಗೃಹ ಸಚಿವಾಲಯ ₹500 ಮನಿ ಆರ್ಡರ್ ಮೂಲಕ ಕಳಿಸಿದ್ದರು. ಈ ಮೊತ್ತದಲ್ಲಿ ಮಗಳ ಮದುವೆ ಮಾಡಿದ್ದರು ಎನ್ನುವುದನ್ನು ಅವರ ಕುಟುಂಬದವರು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಕುಟುಂಬದವರ ಬಳಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.