ADVERTISEMENT

ಕೊಪ್ಪಳ ಕಾರ್ಖಾನೆಗಳ ದೂಳಿನಿಂದ ಕಂಗೆಟ್ಟ ಗ್ರಾಮಗಳು: ತೋಂಟದ ಸ್ವಾಮೀಜಿ ದಿಗ್ಭ್ರಮೆ!

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:32 IST
Last Updated 18 ನವೆಂಬರ್ 2025, 7:32 IST
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ ಗದಗಿನ ತೋಂಟದಾರ್ಯ ಮಠದ ತೋಂಟದಾರ್ಯ ಸ್ವಾಮೀಜಿಗೆ ಕಾರ್ಖಾನೆಗಳ ದೂಳಿನಿಂದ ಕಪ್ಪಡರಿದ ತಮ್ಮ ಕೈಗಳನ್ನು ತೋರಿಸುತ್ತಿರುವ ಗವಿಮಠ ಜಹಗೀರ ಶಾಖಾ ಮಠದ ಗುರು ಶಾಂತವೀರ ಶಿವಾಚಾರ್ಯರು –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ ಗದಗಿನ ತೋಂಟದಾರ್ಯ ಮಠದ ತೋಂಟದಾರ್ಯ ಸ್ವಾಮೀಜಿಗೆ ಕಾರ್ಖಾನೆಗಳ ದೂಳಿನಿಂದ ಕಪ್ಪಡರಿದ ತಮ್ಮ ಕೈಗಳನ್ನು ತೋರಿಸುತ್ತಿರುವ ಗವಿಮಠ ಜಹಗೀರ ಶಾಖಾ ಮಠದ ಗುರು ಶಾಂತವೀರ ಶಿವಾಚಾರ್ಯರು –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಕೊಪ್ಪಳ: ಕಪ್ಪು ದೂಳು, ಕೈಗೆ ಮೆತ್ತಿಕೊಳ್ಳುವ ಕಪ್ಪು, ಕೆಟ್ಟ ಹೊಗೆ ಹಾಗೂ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಪರಿಸರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯ.

ಜಿಲ್ಲಾಕೇಂದ್ರದ ಸುತ್ತಲೂ ಇರುವ ಕಾರ್ಖಾನೆಗಳಿಂದ ಹೊರಬರುತ್ತಿರುವ ಕಪ್ಪುದೂಳಿನಿಂದ ಅಲ್ಲಿನ ಗ್ರಾಮಗಳ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲು ಗದುಗಿನ ತೋಂಟದಾರ್ಯಮಠದ ಸಿದ್ದರಾಮ ಸ್ವಾಮೀಜಿ ಸೋಮವಾರ ಗ್ರಾಮಗಳಿಗೆ ಭೇಟಿ ನೀಡಿದಾಗ ಕಂಡುಬಂದ ಚಿತ್ರಣವಿದು. ಸ್ವಾಮೀಜಿ ತಾಲ್ಲೂಕಿನ ಗಿಣಿಗೇರ, ಕನಕಾಪುರ, ಬಗನಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕಲುಷಿತ ವಾತಾವರಣ, ಅದರಿಂದ ಜನರ ಮೇಲಾಗಿರುವ ದುಷ್ಪರಿಣಾಮಗಳನ್ನು ಅವಲೋಕಿಸಿದರು.

ಹಿರೇಬಗನಾಳ ಗ್ರಾಮದ ಗವಿಮಠದಲ್ಲಿ ಜನರೊಂದಿಗೆ ಮಾತುಕತೆ ನಡೆಸಿದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಹೋರಾಟ, ಕ್ರಮಗಳ ಕುರಿತು ಚರ್ಚಿಸಿದರು. ಕ್ಯಾನ್ಸರ್‌ನಂತಹ ಭೀಕರ ಖಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ಜನ ತಿಳಿಸಿದಾಗ ಬೇಸರ ವ್ಯಕ್ತಪಡಿಸಿದರು. ಅಲ್ಲಿನ ಗವಿಮಠ ಜಹಗೀರ ಶಾಖಾಮಠದ ಗುರು ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಕಾರ್ಖಾನೆಗಳ ಹೊಗೆಯಿಂದಾಗಿ ಕಪ್ಪಡರಿದ ತಮ್ಮ ಕೈ ಕಾಲುಗಳನ್ನು ಸ್ವಾಮೀಜಿಗೆ ತೋರಿಸಿ ಅಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ADVERTISEMENT

ಇದರಿಂದ ಸ್ವಾಮೀಜಿ ಆತಂಕವ್ಯಕ್ತಪಡಿಸಿ ’ಪರಿಸರವೇ ಹಾಳಾಗಿ ಹೋದ ಕೆಟ್ಟ ವಾತಾವರಣದಲ್ಲಿ ಜನ ಹೇಗೆ ಬದುಕುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಬಾಯಿ ಮುಚ್ಚುವ ಕೆಲಸ: ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಹೊಸದಾಗಿ ವಿಸ್ತರಣೆಗೆ ಮುಂದಾಗಿರುವ ನಾಲ್ಕು ಕಾರ್ಖಾನೆಗಳ ನಡೆ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸೋಮವಾರಕ್ಕೆ 18ನೇ ದಿನಕ್ಕೆ ಕಾಲಿರಿಸಿದೆ.

ಧರಣಿ ನಿರತ ವೇದಿಕೆಗೆ ಬಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ ತೋಂಟದಾರ್ಯಮಠದ ಸಿದ್ದರಾಮ ಸ್ವಾಮೀಜಿ ‘ಬಂಡವಾಳಶಾಹಿಗಳಿಗೆ ಜನಪ್ರತಿನಿಧಿಗಳನ್ನು ಹತ್ತಿಕ್ಕುವ ಕಲೆ ಕರಗತವಾಗಿದೆ. ಹಾಗಾಗಿಯೇ ಅವರು ಹೇಗಾದರೂ ಮಾಡಿ ಮೊದಲು ಅವರ ಬಾಯಿ ಮುಚ್ಚುವ ಕೆಲಸ ಮಾಡುತ್ತಾರೆ. ಇದರಿಂದಾಗಿ ಈ ವ್ಯವಸ್ಥೆ ಜನಸಾಮಾನ್ಯರೊಂದಿಗೆ ಆಟವಾಡುತ್ತಿರುವುದು ಸ್ಪಷ್ಟವಾಗುತ್ತದೆ. ಜನರಿದ್ದರೆ ರಾಜಕಾರಣಿಗಳು, ಈ ಪರಿಸರ ಹಾಳಾದರೆ ಜನರಿಗೂ ಉಳಿಗಾಲವಿಲ್ಲ. ರಾಜಕಾರಣಿಗಳಿಗೂ ಉಳಿಗಾಲವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ಬಗನಾಳ, ಗಿಣಿಗೇರಾ, ಕನಕಾಪುರ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಶಾಲಾ ಮಕ್ಕಳು, ಜನರನ್ನು ಮಾತನಾಡಿಸಿದಾಗ ‘ಅವರಿಗೆ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿರುವುದು ಕಂಡು ಬಂತು. ಮಕ್ಕಳಿಗೆ ಕಲುಷಿತ ಗಾಳಿ, ನೀರಿನಿಂದ ಉಂಟಾಗುವ ಚರ್ಮ, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿರುವುದು ಕಂಡು ಬಂತು. ಎಲ್ಲೆ ಮೀರಿದ ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ, ಕಾರ್ಖಾನೆಗಳ ದೂಳಿನಿಂದಾಗಿ ಆರೋಗ್ಯ ಸಮಸ್ಯೆಗಳಾಗುತ್ತಿವೆ’ ಎಂದು ಖೇದ ವ್ಯಕ್ತಪಡಿಸಿದರು.

ಕೆ. ಬಿ. ಗೋನಾಳ, ಡಿ.ಎಚ್‌. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತ್ರಿ, ಮಹಿಳಾ ಕಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಮಾಲಾ ಬಡಿಗೇರ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಎಂ.ಎಸ್. ಘಂಟಿ, ಕಾಶಪ್ಪ ಛಲವಾದಿ, ಭೀಮಸೇನ ಕಲಿಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಕಪ್ಪತ್ತಗುಡ್ಡ ಹೋರಾಟದ ವೇಳೆ ತೋಂಟದಾರ್ಯ ಸ್ವಾಮೀಜಿಗೆ ಹಲವು ಆಮಿಷಗಳನ್ನು ಬಂಡವಾಳಷಹಿಗಳು ಒಡ್ಡಿದ್ದರು. ಆ ಮೂಲಕ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸಿದ್ದರು. ಇದ್ಯಾವುದಕ್ಕೂ ಅವರು ಬಗ್ಗದೆ ಇದ್ದುದರಿಂದಲೇ ನಾವು ಕಪ್ಪತ್ತಗುಡ್ಡ ಉಳಿಕೊಳ್ಳಲು ಸಾಧ್ಯವಾಯಿತು.

-ಸಿದ್ದರಾಮ ಸ್ವಾಮೀಜಿ ತೋಂಟದಾರ್ಯಮಠ ಗದಗ

ಕಲುಷಿತ ಕಾರ್ಖಾನೆಗಳು ಮತ್ತು ಕೊಪ್ಪಳ ಒಂದೇ ಕಡೆ ಇರಲು ಸಾಧ್ಯವಿಲ್ಲ. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿರೋಧಿ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರ ಈ ಹೋರಾಟವನ್ನು ಹಿಂಸಾರೂಪಕ್ಕೆ ತಿರುಗುವಂತೆ ಮಾಡಬಾರದು. ಕಾರ್ಖಾನೆಗೆ ನೀಡಿದ ಪರವಾನಗಿ ರದ್ದು ಮಾಡಿ ಆದೇಶ ಮಾಡಬೇಕು.

-ಅಲ್ಲಮಪ್ರಭು ಬೆಟ್ಟದೂರು ವೇದಿಕೆ ಪ್ರಧಾನ ಕಾರ್ಯದರ್ಶಿ

‘ಶುದ್ಧ ಗಾಳಿ ವರದಿ ಕೊಟ್ಟವರು ಯಾರು’

ಕೊಪ್ಪಳ ಜಿಲ್ಲೆ ಪರಿಶುದ್ಧ ಗಾಳಿ ಹೊಂದಿರುವ ದೇಶದ ನಾಲ್ಕನೇ ನಗರ ಎಂದು ಯಾವುದೋ ಮಾಧ್ಯಮದಲ್ಲಿ ವರದಿಯಾಗಿದೆಯಂತೆ. ಬಹುಷಃ ವರದಿ ಕೊಟ್ಟ ಆ ಪುಣ್ಯಾತ್ಮರು ಬಗನಾಳ ಗಿಣಿಗೇರಿ ಬಸಾಪುರಕ್ಕೆ ಬಂದಂತಿಲ್ಲ ಎಂದು ಸ್ವಾಮೀಜಿ ಹೇಳಿದರು. 

ಮುಖ್ಯಮಂತ್ರಿ ಜೊತೆ ಚರ್ಚೆ: ತಂಗಡಗಿ

ಕೊಪ್ಪಳ: ’ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ಅವಕಾಶ ಕೊಟ್ಟಿದ್ದು ಕೇಂದ್ರ ಸರ್ಕಾರ. ಇದರ ಬಗ್ಗೆ ಪತ್ರ ವ್ಯವಹಾರ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚೆ ನಡೆಸುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು ‘ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಖಾನೆ ವಿಸ್ತರಣೆಗೆ ವಿರೋಧವಿದೆ. ಕಾರ್ಖಾನೆ ಬೇಕು ಎಂದೂ ಕೆಲವರು ಹೋರಾಟ ಮಾಡುತ್ತಿದ್ದು ಸಾಧಕ ಬಾಧಕಗಳ ಬಗ್ಗೆ ಸಮಾಲೋಚಿಸುವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.