ADVERTISEMENT

ಕೊಪ್ಪಳ: ತ್ಯಾಜ್ಯ ಸಂಸ್ಕರಣಾ ಘಟಕ ಅನುಷ್ಠಾನಕ್ಕೆ ಯೋಜನೆ

147 ಗ್ರಾಮ ಪಂಚಾಯಿತಿಯಲ್ಲಿ ಹೊಸಳ್ಳಿ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ಸಾಧನೆ

ಸಿದ್ದನಗೌಡ ಪಾಟೀಲ
Published 9 ಅಕ್ಟೋಬರ್ 2019, 20:00 IST
Last Updated 9 ಅಕ್ಟೋಬರ್ 2019, 20:00 IST
ಭಾಗ್ಯನಗರದ ಸ್ಮಶಾನ ರಸ್ತೆಯಲ್ಲಿ ಜನವಸತಿ ಪ್ರದೇಶದ ಬಳಿ ಸುರಿಯಲಾದ ಕಸದ ರಾಶಿ
ಭಾಗ್ಯನಗರದ ಸ್ಮಶಾನ ರಸ್ತೆಯಲ್ಲಿ ಜನವಸತಿ ಪ್ರದೇಶದ ಬಳಿ ಸುರಿಯಲಾದ ಕಸದ ರಾಶಿ   

ಕೊಪ್ಪಳ: ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆಯನ್ನು ಸುಂದರ ಮತ್ತು ಸ್ವಚ್ಛ ಗ್ರಾಮ ಮಾಡುವ ನಿಟ್ಟಿನಲ್ಲಿ 58 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನಕ್ಕೆಪ್ರಯತ್ನ ನಡೆದಿದೆ.

ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೆ ವೈಜ್ಞಾನಿಕ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾದರಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಆಮೆಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲೆಯ ಒಟ್ಟು 147 ಗ್ರಾಮ ಪಂಚಾಯಿತಿಗಳಿದ್ದು, 2013ರಲ್ಲೇ 38 ಗ್ರಾಮ ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 6 ವರ್ಷಗಳಲ್ಲಿ 9 ಪಂಚಾಯಿತಿಗಳಲ್ಲಿ ಘಟಕ ನಿರ್ಮಿಸಲಾಗಿದ್ದು, ಇನ್ನೂ 9 ಪ್ರಗತಿಯಲ್ಲಿವೆ. ಪ್ರಸ್ತುತ ವರ್ಷ 20 ಘಟಕ ಆರಂಭಕ್ಕೆ ಅನುಮೋದನೆ ದೊರೆತಿದೆ.

ವಿಳಂಬ ಏಕೆ:

ADVERTISEMENT

ತ್ಯಾಜ್ಯ ಸಂಗ್ರಹಣ ಘಟಕ ನಿರ್ಮಾಣಕ್ಕೆ ಕೆಲ ಪಂಚಾಯಿತಿಗಳಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಜಮೀನು ಕೊರತೆಯೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೆ ವೈಜ್ಞಾನಿಕ ಕಸ ಸಂಗ್ರಹಣೆ, ವಿಂಗಡಣೆ, ಸಂಸ್ಕರಣೆ, ಜಾಗೃತಿ ಕೊರತೆಯಿಂದಲೂ ಘಟಕ ಕಾರ್ಯಾರಂಭಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಹೊಸಳ್ಳಿ ಮಾದರಿ:

ತಾಲ್ಲೂಕಿನ ಮುನಿರಾಬಾದ್ ಸಮೀಪ ಹೊಸಳ್ಳಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಸುತ್ತಮುತ್ತಲಿನ ಪಂಚಾಯಿತಿಗಳಿಂದ ಕಸ ಖರೀದಿಸಿ ಅನೇಕ ಉತ್ಪನ್ನಗಳನ್ನು ತಯಾರಿಸಿ ಹೆಸರುವಾಸಿಯಾಗಿದೆ. ಈ ಘಟಕದಲ್ಲಿ ಗೊಬ್ಬರ, ಪ್ಲಾಸ್ಟಿಕ್ ಬ್ಯಾಗ್, ಇಟ್ಟಂಗಿ, ರಸ್ತೆಗೆ ಹಾಕುವ ಹರಳು ಮಿಶ್ರಿತ ಮಣ್ಣು ಸೇರಿದಂತೆ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಿ ಅನೇಕರಿಗೆ ಉದ್ಯೋಗ ನೀಡಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇದೆ.

ಇದೇ ಮಾದರಿಯಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಘಟಕ ಸ್ಥಾಪಿಸಿ ಗ್ರಾಮದ ಹಸಿ ಮತ್ತು ಒಣ ಕಸವನ್ನು ಸಂಸ್ಕರಣೆ ಮಾಡುವ ಕಾರ್ಯಕ್ಕೆ ಪಂಚಾಯಿತಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಘಟಕದಲ್ಲಿ ಏನೇನು?:

ಪ್ರತಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ₹ 20 ಲಕ್ಷ ವೆಚ್ಚ ಮಾಡಲಾಗುತ್ತಿದೆ. 1 ಆಪೆ ವಾಹನ, 4 ತಳ್ಳುಗಾಡಿಗಳು, ಅವಶ್ಯಕತೆಗೆ ತಕ್ಕಷ್ಟು ಕಸದ ಬುಟ್ಟಿ, ಸಲಕರಣೆ, 1 ಸಂಸ್ಕರಣ ಘಟಕ, ಚಾಲಕ ಮತ್ತು ಕಾರ್ಮಿಕರನ್ನು ಘಟಕ ಒಳಗೊಂಡಿರುತ್ತದೆ. ಕಸದಿಂದ ರಸ ಮಾಡಿ ಬರುವ ಲಾಭದಲ್ಲಿಯೇ ಸಿಬ್ಬಂದಿ ಮತ್ತು ಘಟಕ ನಿರ್ವಹಣೆ ಪಂಚಾಯಿತಿಗಳು ಮಾಡಬೇಕಿದೆ.

ನಿರ್ಮಲ ಭಾರತ ಅಭಿಯಾನದ ಪ್ರಯುಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘಟಕಕ್ಕೆ ಈ ಹಣ ನೀಡಬೇಕು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹೊಣೆ ಜಿಲ್ಲಾ ಪಂಚಾಯಿತಿ ಸಿಇಒಗೆ ವಹಿಸಲಾಗಿದೆ. ಸ್ಥಳೀಯ ಬೇಡಿಕೆಗೆ ತಕ್ಕಂತೆ ತ್ಯಾಜ್ಯ ನಿರ್ವಹಿಸಬೇಕು. ಜಿಲ್ಲಾ ನೋಡಲ್ ಅಧಿಕಾರಿ ಘಟಕಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಬೇಕು.

ಜಿಲ್ಲೆಯಲ್ಲಿ ಬಯಲುಶೌಚ ಮುಕ್ತ, ಕಸ ವಿಲೇವಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿಪರಿಣಾಮಕಾರಿ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಬೇಕಾಗಿರುವುದು ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಮೇಲೆ ಇದೆ. ಸ್ವಚ್ಛ, ಸುಂದರ, ಆರೋಗ್ಯವಂತ ಗ್ರಾಮಗಳ ನಿರ್ಮಾಣ ಮಾಡಬೇಕಾದ ಹೊಣೆ ಸ್ಥಳೀಯ ಪಂಚಾಯಿತಿ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.