ADVERTISEMENT

ತುಂಗಭದ್ರೆಗೆ ಹರಿದು ಬರುತ್ತಿರುವ ನೀರು

ಸ್ಲೂಸ್ ಗೇಟ್ ಸೇರಿದಂತೆ ಅಗತ್ಯ ದುರಸ್ತಿ ಕಾರ್ಯ ಕೈಗೊಂಡ ಸಿಬ್ಬಂದಿ

ಸಿದ್ದನಗೌಡ ಪಾಟೀಲ
Published 4 ಜುಲೈ 2020, 14:03 IST
Last Updated 4 ಜುಲೈ 2020, 14:03 IST
ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು
ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು   

ಕೊಪ್ಪಳ: ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಪಾತ್ರದಲ್ಲಿಮುಂಗಾರು ಮಳೆಅಷ್ಟೊಂದು ಪ್ರಮಾಣದಲ್ಲಿ ಆಗದಿದ್ದರೂ ಭದ್ರಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಒಳಹರಿವು ಹೆಚ್ಚುತ್ತಿದೆ.

ಸದ್ಯ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹವಾಗಿದೆ. ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಮಾತ್ರ ಜಲಾಶಯ ಆಶ್ರಿತ ಕೊನೆಯ ಭಾಗದ ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಸಮೀಪದ ಪ್ರದೇಶಗಳಲ್ಲಿ ಮೂರು ಬೆಳೆಯನ್ನು ರೈತರು ಬೆಳೆದು ದಾಖಲೆ ನಿರ್ಮಿಸುತ್ತಾರೆ. ಆದರೆ ಕೊನೆಯ ಭಾಗದ ರೈತರು ಕೆಲವೊಮ್ಮೆ ನೀರಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಾರೆ.

ಈ ಸಾರಿ ಎರಡನೇ ಬೆಳೆಗೆ ನೀರು ರೈತರಿಗೆ ಕಷ್ಟವಾಗಲಿಲ್ಲ. ಅದೇ ರೀತಿ ಹಿಂಗಾರು ದೊಡ್ಡ ಮಳೆ ಸುರಿದರೆ ಮಾತ್ರ ರೈತರ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಇಲ್ಲದಿದ್ದರೆ ಕಾಡಾ ಕಚೇರಿಗೆ ನಿತ್ಯ ರೈತರ ಮುತ್ತಿಗೆ ತಪ್ಪಿದ್ದಲ್ಲ.

ADVERTISEMENT

ಎಡದಂಡೆ ವ್ಯಾಪ್ತಿಗೆ ಬರುವ ಕೊಪ್ಪಳ, ರಾಯಚೂರು ಜಿಲ್ಲೆ ಕಾಲುವೆಯನ್ನು ಬೇಸಿಗೆಯಲ್ಲಿ ಸ್ವಚ್ಛಗೊಳಿಸಲಾಗಿದೆ. ಕೆಲೆವೆಡೆ ಸಣ್ಣಪುಟ್ಟ ದುರಸ್ತಿ ಉಳಿದಿದ್ದು, ಕಾಲುವೆಗೆ ನೀರು ಬಿಡುವ ಸಮಯದಲ್ಲಿ ಸಂಪೂರ್ಣವಾಗಲಿದೆ. ಪ್ರತಿವರ್ಷ ಜಲಾಶಯದ 0.2 ಕಿ.ಮೀ ವ್ಯಾಪ್ತಿಯಲ್ಲಿ ಕಾಲುವೆ ಒಡೆವುದು, ಬೋಂಗಾ ಬೀಳುವುದು ವ್ಯವಸ್ಥೆಯ ವ್ಯಂಗ್ಯವಾಗಿತ್ತು.

ಸ್ಲೂಸ್ ಗೇಟ್ ಒಡೆದು ಅಪಾರ ಹಾನಿ ಸಂಭವಿಸಿದ ನಂತರ ನೀರಾವರಿ ನಿಗಮ ಎಚ್ಚೆತ್ತುಕೊಂಡಿದ್ದು, ಜನರಿಂದ, ರೈತರಿಂದ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸ್ವತಃ ಉನ್ನತ ಅಧಿಕಾರಿಗಳೇ ನಿಂತು ಕಾಲುವೆಗಳ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ.

ಕಾಲುವೆ ನೀರಿನ ಧಾರಣಾ ಸಾಮರ್ಥ್ಯ ಹೆಚ್ಚಿಗೆ ಆಗಿದ್ದು, ನೀರಿಕ್ಷೆಗೆ ತಕ್ಕಂತೆ ನೀರು ಹರಿದು ಬರಲಿದೆಯೇ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಜಲಾಶಯದ ಮುಖ್ಯ ಎಂಜಿನಿಯರ್ ಮಂಜಪ್ಪ, ಹಿರಿಯ ಅಧಿಕಾರಿ ಬಸಪ್ಪ ಜಾನಕರ್ ಬೇಸಿಗೆಯಲ್ಲಿ ಕಾಲುವೆಗಳಿಗೆ ಭೇಟಿ ನೀಡಿ ಮೇಲುಸ್ತುವಾರಿ ವಹಿಸಿ ದುರಸ್ತಿ ಕಾರ್ಯ ಮಾಡಿಸಿದ್ದಾರೆ.

ಬಲದಂಡೆ ಆಂಧ್ರಪ್ರದೇಶದ ವ್ಯಾಪ್ತಿಗೆ ಬರುತ್ತಿದ್ದು, ಸದಾ ತುಂಬಿ ಹರಿಯುತ್ತಿದೆ. ಅಲ್ಪ ನೀರು ಬಳ್ಳಾರಿಗೆ ತಲುಪಿದರೆ ಶೇ 70ರಷ್ಟು ನೀರು ಆಂಧ್ರಕ್ಕೆ ಯಾವುದೇ ವಿವಾದವಿಲ್ಲದೆ ನಿತ್ಯ ಹರಿಯುತ್ತಿದೆ.

ಜಿಲ್ಲೆಯ ನದಿ ಪಾತ್ರದಲ್ಲಿ ಇನ್ನೂ ಹೆಚ್ಚಿನ ಮಳೆಯಾದರೆ ಜಲಾಶಯ ಭರ್ತಿಯಾಗಿ ಭತ್ತ ಬೆಳೆಗೆ ತೊಂದರೆಯಿಲ್ಲ. ಜಲಾಶಯ ಭರ್ತಿಯಾಗಲಿದೆ ಎಂಬ ರೈತರ ಅಂದಾಜು ಆಗಿದ್ದು, ಮುಂದಿನ ಮಳೆಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.