ಕಾರಟಗಿ: ‘ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಬೇಸತ್ತ ತಾಲ್ಲೂಕಿನ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಂಡೂರು ತಿರುವು(ಕೃಷ್ಣಾಪುರ) ಗ್ರಾಮಸ್ಥರು, ಪ್ರತಿ ಕುಟುಂಬದಿಂದ ₹ 3 ಸಾವಿರ ಹಣ ಸಂಗ್ರಹಿಸಿ ದುರಸ್ತಿಗೊಳಿಸಿಕೊಂಡಿದ್ದಾರೆ.
ಗ್ರಾಮದಲ್ಲಿ 35 ಮನೆಗಳಿದ್ದು, ಪ್ರತಿ ಮನೆಗೆ ₹ 3 ಸಾವಿರ ಸಂಗ್ರಹಿಸಲಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ. ಆದರೆ ಯಾರೊಬ್ಬರೂ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಬೇಸಿಗೆ ಇರುವುದರಿಂದ ಕುಡಿಯುವ ನೀರಿಗಾಗಿ ನಾವು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಹೀಗಾಗಿ ಹಣ ಸಂಗ್ರಹಿಸಿ ನೀರಿನ ಶುದ್ಧ ಘಟಕವನ್ನು ನಮ್ಮ ಹಣದಿಂದಲೇ ದುರಸ್ತಿಗೊಳಿಸಿಕೊಂಡಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ವಿಶೇಷ ಸಭೆಗಳು, ಸಮಸ್ಯೆಗೆ ತ್ವರಿತ ಸ್ಪಂದನೆಗೆ ಆದೇಶಗಳು, ನೀರಿಗೆಂದು ದಿನದ 24 ಗಂಟೆಯೂ ನಿರಂತರ ಸೇವೆ ಸಲ್ಲಿಸುವ ಸಹಾಯವಾಣಿ ಕೇಂದ್ರಗಳು, ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ನಿರ್ಧಾಕ್ಷಿಣ್ಯ ಕ್ರಮ, ಕೋಟ್ಯಾಂತರ ಹಣ ಮೀಸಲು ಎಂಬ ಅಂಶಗಳು..ಜನರ ನೀರಿನ ಬವಣೆ ನೀಗಿಸಲಿಲ್ಲ.
2018ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಗುಂಡೂರು ತಿರುವು(ಕೃಷ್ಣಾಪುರ) ಬಳಿಯ ರಾಮಂದಿರದ ದೇವಸ್ಥಾನದ ಆವರಣದಲ್ಲಿ ಆರಂಭಿಸಲಾಗಿತ್ತು. ನಾಲ್ಕೈದು ತಿಂಗಳಿಂದ ಘಟಕ ದುರಸ್ತಿಯಲ್ಲಿತ್ತು. ಕಿ.ಮೀ.ಗಟ್ಟಲೆ ದೂರದ ಸಿದ್ದಾಪುರಕ್ಕೆ ತೆರಳಿ ನೀರು ತರಬೇಕಿತ್ತು. ವಾಹನಗಳ ಸೌಲಭ್ಯ ಬಹಳಷ್ಟು ತೊಂದರೆ ಅನುಭವಿಸಿದರು.
ದುರಸ್ತಿ ಮಾಡಿಸಿ, ಶುದ್ಧ ನೀರು ದೊರೆಯುವಂತೆ ಅಲ್ಲಿಯ ನಾಗಕರಿಕರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ, ಸಚಿವ ತಂಗಡಗಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ಐದಾರು ಸಾವಿರ ವೆಚ್ಚದಲ್ಲಿ ಅನೇಕ ಬಾರಿ ದೇವಸ್ಥಾನ ಸಮಿತಿಯವರು ದುರಸ್ತಿ ಮಾಡಿಸಿದ್ದರು. ಈಗ ಲಕ್ಷಾಂತರ ಖರ್ಚು ಇರುವುದರಿಂದ ಇತರರ ಗಮನ ಸೆಳೆದರು. ಅವರಿಂದಲೂ ಕೆಲಸವಾಗಲಿಲ್ಲ. ಭರವಸೆಯಾಗಿಯೇ ಉಳಿದಿದ್ದರಿಂದ ತಾವೇ ಸನ್ನದ್ಧರಾಗಿ ಪ್ರತಿ ಮನೆಯವರು ಹಣ ನೀಡಲು ನಿರ್ಧರಿಸಿ, ಹಣ ಸಂಗ್ರಹಿಸಿ, ದುರಸ್ತಿ ಮಾಡಿಸಿ, ವ್ಯವಸ್ಥೆಯ ವಿರುದ್ಧ ಬಹುದೊಡ್ಡ ಮಾದರಿ ಆಗಿದ್ದಾರೆ.
ತಾವೇ ದುರಸ್ತಿ ಮಾಡಿಸಿಕೊಂಡಿರುವ ಶುದ್ಧ ನೀರಿನ ಘಟಕದಿಂದ ನೀರು ಪೂರೈಕೆಯಾಗುತ್ತಿದೆ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಅವುಗಳ ಲಾಭ ಜನಸಾಮಾನ್ಯರಿಗೆ ದೊರೆಯಬೇಕು. ಆಗಷ್ಟೇ ಯೋಜನೆಗಳು ಯಶಸ್ವಿ ಆಗುತ್ತವೆ. ಆ ದಿಸೆಯಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಲಿ ಎಂಬ ಸಂದೇಶವನ್ನು ಜನರು ನೀಡಿದ್ದಾರೆ.
ಕುಡಿಯುವ ನೀರು ಎಲ್ಲರಿಗೂ ಅಗತ್ಯ. ನೀರಿನ ಘಟಕ ದುರಸ್ತಿಗೀಡಾದಾಗ ಸಂಬಂಧಿಸಿದವರು ಪರಿಹರಿಸಲು ಮುಂದಾಗಬೇಕು. ಸಚಿವರು ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ದುರಸ್ತಿ ಮಾತ್ರ ಆಗಲಿಲ್ಲ. ನಾವೇ ಪ್ರತಿ ಮನೆಯವರು ಹಣ ಹಾಕಿ ದುರಸ್ತಿ ಮಾಡಿಸಿಕೊಂಡಿದ್ದೇವೆ. ಕುಡಿಯುವ ನೀರಿನ ವಿಷಯದಲ್ಲಿ ಅದೂ ಬಿರು ಬಿಸಿಲಿನ ಬೇಸಿಗೆಯಲ್ಲಿ ಸಂಬಂಧಿಸಿದವರು ಸ್ಪಂದಿಸಬೇಕಿತ್ತು ಎಂದು ಕೃಷ್ಣಾಪುರ ನಿವಾಸಿಗಳಾದ ಶ್ರೀನಿವಾಸ ರವಿ ಚಲವಾದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.