ADVERTISEMENT

ಎತ್ತಿನ ಬಂಡಿಗಳಲ್ಲಿ ನೀರು ಮಾರಾಟ

ಹನುಮಸಾಗರ: ತೀವ್ರವಾದ ಕುಡಿಯುವ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 17:35 IST
Last Updated 27 ಮಾರ್ಚ್ 2019, 17:35 IST
ಹನುಮಸಾಗರದಲ್ಲಿ ಬಂಡಿಗಳಲ್ಲಿ ಕುಡಿಯುವ ನೀರು ತರುತ್ತಿರುವುದು
ಹನುಮಸಾಗರದಲ್ಲಿ ಬಂಡಿಗಳಲ್ಲಿ ಕುಡಿಯುವ ನೀರು ತರುತ್ತಿರುವುದು   

ಹನುಮಸಾಗರ: ಸುಮಾರು ಒಂದು ತಿಂಗಳಿನಿಂದ ಬಳಕೆ ಮತ್ತು ಕುಡಿಯುವ ನೀರಿನ ತೀವ್ರ ಅಭಾವವಾಗಿದ್ದು, ನೀರಿಗಾಗಿ ಸಾರ್ವಜನಿಕರು ನಿತ್ಯ ಹೈರಾಣಾಗುತ್ತಿರುವುದು ಕಂಡು ಬರುತ್ತಿದೆ.

ಗ್ರಾಮ ಪಂಚಾಯಿತಿಯಿಂದ ಹದಿನೈದು ದಿನಕ್ಕೊಮ್ಮೆ ಬರುವ ನೀರನ್ನೇ ಬಳಕೆಗೆ ಹಾಗೂ ಕುಡಿಯುವುದಕ್ಕೆ ಸಂಗ್ರಹಿಸಿಟ್ಟು ಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಅದು ಕೂಡಾ ಸಮರ್ಪಕವಾಗಿ ದೊರಕುವುದಿಲ್ಲ ಎಂದು ಜನರು ಗೋಳು ತೋಡಿಕೊಳ್ಳುತ್ತಾರೆ.

‘ತಿಂಗಳಿಗೆ ಎರಡು ಬಾರಿ ನೀರು ಬಂದರೆ, ಹೇಗೆ ನಿಭಾಯಿಸುವುದು. ಸದ್ಯ ಗ್ರಾಮ ಪಂಚಾಯಿತಿ ಪೂರೈಕೆ ಮಾಡುವ ನೀರು ಎರಡು ದಿನಕ್ಕೂ ಸಾಲವುದಿಲ್ಲ, ಹಣ ಕೊಟ್ಟು ನೀರು ಖರೀದಿಸುವಷ್ಟು ಸಾಮರ್ಥ್ಯ ನಮ್ಮಲ್ಲಿಲ್ಲ’ ಎಂದು ಶರಣಮ್ಮ ಗುಡಿಗದ್ದಿ ವಿಷಾದ ವ್ಯಕ್ತಪಡಿಸುತ್ತಾರೆ.

ADVERTISEMENT

ಗ್ರಾಮಕ್ಕೆ ನೀರು ಪೂರೈಕೆ ಮಾಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಸಾಕಷ್ಟು ಕೊಳವೆಬಾವಿಗಳನ್ನು ಕೊರೆಸಿದೆ. ಆದರೆ ಒಂದರಲ್ಲಿ ಮಾತ್ರ ನೀರು ದೊರಕಿದ್ದು ತರಾತುರಿಯಲ್ಲಿ ಮೋಟರ್‌ ಅಳವಡಿಸುವ ಕಾರ್ಯ ನಡೆದಿದೆ. ಹನುಮಸಾಗರಕ್ಕೆ ನೀರು ಪೂರೈಕೆ ಮಾಡುವ ಸುಮಾರು 23 ಕೊಳವೆಬಾವಿಗಳಲ್ಲಿ ಬಹುತೇಕ ಬತ್ತಿದ್ದರೆ, ಒಂದೆಡು ಕೊಳವೆಬಾವಿಗಳು ಮಾತ್ರ ನೀರು ಪೂರೈಸುತ್ತಿವೆ.

ಖಾಸಗಿ ಕೊಳವೆ ಬಾವಿಗಳನ್ನು ಹೊಂದಿರುವವವರು ಒಂದು ಟ್ಯಾಂಕರ್‌ಗೆ ₹400ರಂತೆ ಸ್ವತಃ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದು ಅದಕ್ಕೂ ಸರತಿಯಲ್ಲಿ ಕಾಯಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಹಣ ಕೊಟ್ಟರೂ ನೀರು ಸಿಗದಂತ ಪರಿಸ್ಥಿತಿ ಇದೆ.

ಕುಡಿಯುವ ನೀರಿಗೆ ಕ್ರಮಕೈಕೊಳ್ಳಬೇಕಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರವಾಣಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನ ಬಂಡಿಗಳನ್ನು ಹೊಂದಿರುವ ರೈತರು ತಮ್ಮ ತೋಟದ ಮೂಲಕ ನೀರು ತರುತ್ತಿದ್ದರೆ, ಇನ್ನು ಕೆಲವರು ಒಂದು ಬ್ಯಾರಲ್‌ಗೆ ನಿಗದಿತ ದರದಲ್ಲಿ ಮನೆ ಮನೆಗಳಿಗೆ ಪೂರೈಸುತ್ತಿರುವವುದು ಕಂಡು ಬರುತ್ತಿದೆ.

‘ಸದ್ಯ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಒಂದೇ ವಾರದಲ್ಲಿ ಐದು ಕೊಳವೆಬಾವಿಗಳನ್ನು ಕೊರೆಸಿದ್ದರೂ ಒಂದರಲ್ಲಿ ಮಾತ್ರ ಒಂದುವರೆ ಇಂಚಿನಿಷ್ಟು ನೀರು ದೊರಕಿದೆ, ಖಾಸಗಿಯಾಗಿ ಏಳು ಕೊಳವೆಬಾವಿಗಳಿಂದ ನೀರು ಪಡೆದುಕೊಂಡಿದ್ದೇವೆ, ಅಂತರ್ಜಲವೇ ಬರಿದಾಗಿರುವುದು ಸಮಸ್ಯಗೆ ಮುಖ್ಯ ಕಾರಣವಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರ ಕಮತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.