ADVERTISEMENT

ಅಭ್ಯರ್ಥಿಗಳ ನಿದ್ದೆಗೆಡೆಸಿ 'ಎಕ್ಸಿಟ್ ಪೋಲ್: ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ?

ನಾಳೆ ಫಲಿತಾಂಶ

ಸಿದ್ದನಗೌಡ ಪಾಟೀಲ
Published 22 ಮೇ 2019, 4:03 IST
Last Updated 22 ಮೇ 2019, 4:03 IST
ಸಂಗಣ್ಣ ಕರಡಿ ಹಾಗೂ ಕೆ.ರಾಜಶೇಖರ ಹಿಟ್ನಾಳ
ಸಂಗಣ್ಣ ಕರಡಿ ಹಾಗೂ ಕೆ.ರಾಜಶೇಖರ ಹಿಟ್ನಾಳ   

ಕೊಪ್ಪಳ: ತೀವ್ರ ಹಣಾಹಣಿಯಿಂದ ಕೂಡಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬ ಕೂತೂಹಲ ಇನ್ನೂ ಕಡಿಮೆ ಆಗಿಲ್ಲ.

ಮೇ 23ರಂದು ಫಲಿತಾಂಶ ಬರಲಿದ್ದು, ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಚುನಾವಣೋತ್ತರ ಸಮೀಕ್ಷೆ ಸೋಮವಾರ ಪ್ರಕಟಗೊಂಡಿದೆ. ದೇಶದ ಗೆಲ್ಲುವ ಕ್ಷೇತ್ರ ಮತ್ತು ಪಕ್ಷದ ಬಗ್ಗೆ ಸಮಗ್ರ ಮಾಹಿತಿ ನೀಡಿದೆ. ಆದರೆ ಕೊಪ್ಪಳ ಲೋಕಸಭಾ ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಗೆಲುವಿನ ಕುತೂಹಲ ಹೆಚ್ಚಿಸಿದೆ.

ಬಹುತೇಕ ಸಂಸ್ಥೆಗಳು ಇಬ್ಬರು ಅಭ್ಯರ್ಥಿಗಳು ಸಮಬಲ ಸಾಧಿಸಲಿದ್ದಾರೆ ಎಂದು ಹೇಳಿವೆ. ಮೂರು ಸಂಸ್ಥೆಗಳು ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರಿಂದ ಯಾವುದೇ ಸ್ಪಷ್ಟವಾದ ನಿರ್ಧಾರ ತಳೆಯಲಾಗದೆ ಮತದಾನ ಮುಗಿದುಒಂದು ತಿಂಗಳಾದರೂ ಕುತೂಹಲ ಉಳಿಸಿಕೊಂಡಿರುವುದು ಈ ಕ್ಷೇತ್ರದ ವಿಶೇಷವಾಗಿದೆ.

ADVERTISEMENT

ಕಣದಲ್ಲಿ ಒಟ್ಟು 14 ಅಭ್ಯರ್ಥಿಗಳು ಇದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರವಾದ ಹಣಾಹಣಿ ಇದೆ. ಬಿಜೆಪಿ ಪರವಾಗಿ ನರೇಂದ್ರ ಮೋದಿ ಗಂಗಾವತಿಗೆ ಬಂದು ಪ್ರಚಾರ ಭಾಷಣ ಮಾಡಿದ್ದು, ಗೆಲುವಿನ ದಡ ಸೇರಿಸಲಿದೆ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ ಪರವಾಗಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದು ಕಣವನ್ನು ರಂಗೇರಿಸಿತ್ತು.

ಬಿಜೆಪಿ ಅಭ್ಯರ್ಥಿ ಪರವಾಗಿ ಕೆಎಸ್ಈಶ್ವರಪ್ಪ, ಬಿ.ಎಲ್.ಸಂತೋಷ, ಸಿ.ಟಿ.ರವಿ, ಆರ್.ಅಶೋಕ, ರಾಜುಗೌಡ, ಬಿ.ಶ್ರೀರಾಮುಲು, ನಟಿ ಶ್ರುತಿ ವ್ಯಾಪಕ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಚಿವ ಇ.ತುಕಾರಾಂ, ಮಾಜಿ ಸಚಿವ ಶಿವರಾಜ ತಂಗಡಗಿ ಹಗಲಿರುಳು ಪ್ರಚಾರ ಮಾಡಿದ್ದಾರೆ. ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು,. ಫಲಿತಾಂಶದ ಮೇಲೆ ತಮ್ಮ ಸ್ಥಾನಮಾನ ನಿರ್ಧಾರವಾಗಲಿದೆ. ಈ ಎಲ್ಲ ಪ್ರಶ್ನೆಗಳಿಗೆ ಫಲಿತಾಂಶದ ದಿನದಂದು ಉತ್ತರ ಸಿಗಲಿದೆ.

ಮತದಾನವಾದ ನಂತರ ಇಲ್ಲಿಯವರೆಗೂ ಜಾತಿ ಸಮೀಕರಣವೇ ಜಿಲ್ಲೆಯಲ್ಲಿ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಕುರುಬ ಮತ್ತು ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿದೆ. ಬಿಜೆಪಿಗೆ ಲಿಂಗಾಯತ ಸಮಾಜ ಸಂಪೂರ್ಣ ಬೆಂಬಲ ನೀಡಿದೆ. ರಡ್ಡಿ ಲಿಂಗಾಯತರು ನಿರ್ಣಾಯಕರಾಗಿದ್ದು, ಎರಡು ಪಕ್ಷಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ವಾಲ್ಮೀಕಿ, ಬ್ರಾಹ್ಮಣ, ಕ್ಷತ್ರೀಯ ಮತಗಳು ಸಂಪೂರ್ಣವಾಗಿ ತಮಗೆ ಬರಲಿದೆ ಎಂದು ಬಿಜೆಪಿ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಉಳಿದ ಸಣ್ಣ, ಪುಟ್ಟ ಸಮಾಜಗಳೇ ನಿರ್ಣಾಯಕವಾಗಿದ್ದು, ಅವರ ಒಲವು ಯಾರ ಕಡೆ ಎಂಬುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಎರಡು ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದು, ತಮ್ಮದೇ ಆದ ಅಂಕಿ, ಸಂಖ್ಯೆ ಸಂಗ್ರಹಿಸಿದ್ದಾರೆ. ಎಲ್ಲರ ಚಿತ್ತ ಫಲಿತಾಂಶದತ್ತ ಬೆಟ್ಟಿದ್ದು, ವಿಜಯ ಮಾಲೆ ಯಾರ ಮುಡಿಗೆ ಸೇರಲಿದೆ ಎಂಬುವುದೇ ಕುತೂಹಲ.

ಸಭ್ಯ ಚುನಾವಣೆ: ರಾಜ್ಯ ಮತ್ತು ದೇಶದಲ್ಲಿ ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರು ತಮ್ಮ ನಾಲಿಗೆ ಹರಿಬಿಟ್ಟು, ಚುನಾವಣೆ ವ್ಯವಸ್ಥೆಯನ್ನೇ ಅಣಕಿಸುವಂತೆ ಅಶ್ಲೀಲ, ಕೆಳಮಟ್ಟದ ಭಾಷೆ ಬಳಸಿದ್ದರು. ಆದರೆ ಈ ಕ್ಷೇತ್ರದಲ್ಲಿ ಇಬ್ಬರೂ ಅಭ್ಯರ್ಥಿಗಳು ಸಭ್ಯತೆ ಮೀರದೇ ಚುನಾವಣೆ ಪ್ರಚಾರ ಮಾಡಿದ್ದು, ಅಷ್ಟೇ ವಿಶೇಷ.

ಪ್ರಭಾವ ಬೀರದ ನಾಯ್ಡು: ದೇಶದಲ್ಲಿ ತೃತೀಯ ರಂಗದ ಅಸ್ತಿತ್ವಕ್ಕೆ ಓಡಾತ್ತಾ ಸುದ್ದಿಯಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಗಾವತಿ ಭಾಗದಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ಭಾಷಣ ಮಾಡಿ ತೆಲುಗು ಭಾಷಿಕರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೂ ಕೂಡಾ ಅಂತಹ ಹೇಳಿಕೊಳ್ಳುವ ಪ್ರಭಾವ ಆಗಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗೊಂದಲದಲ್ಲಿ ಅಲ್ಪಸಂಖ್ಯಾತರು..!

ಕ್ಷೇತ್ರದಲ್ಲಿ ಜೆಡಿಎಸ್‌ಗೆ ಯಾವುದೇ ನೆಲೆ ಇಲ್ಲ. ಸಿಂಧನೂರಿನಲ್ಲಿ ಸಚಿವ ವೆಂಕಟರಾವ್ ನಾಡಗೌಡ ಅವರೊಬ್ಬರೇ ಜೆಡಿಎಸ್‌ನಿಂದ ಚುನಾಯಿತರಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದು, ಬೇರೆ ಆಯ್ಕೆ ಇಲ್ಲದೆ ಅನಿವಾರ್ಯವಾಗಿ ಕಾಂಗ್ರೆಸ್‌ ಅನ್ನೇ ಬೆಂಬಲಿಸಿದ್ದಾರೆ ಎಂದು ಆ ಪಕ್ಷದ ಮುಖಂಡರ ವಾದ.

ಆದರೆ ಅಲ್ಪಸಂಖ್ಯಾತ ಸಮುದಾಯದಲ್ಲಿಯೇ ಬಹುಸಂಖ್ಯಾತರಾಗಿರುವ ಮುಸ್ಲಿಂರು ನಿರೀಕ್ಷಿತ ಪ್ರಮಾಣದಲ್ಲಿ ಮತಚಲಾಯಿಸಿಲ್ಲ ಎಂಬ ವಾದವೂ ಇದೆ. ನೋಟಾ ಹಾಗೂ ಮತದಾನದಿಂದ ದೂರ ಉಳಿದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದು ಪಕ್ಷಕ್ಕೆ ಮೈನಸ್ ಆಗಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತವೆ.

ಎಲ್ಲೆಲ್ಲಿ ಯಾರ, ಯಾರ ಪ್ರಭಾವ?

ಯಲಬುರ್ಗಾ, ಕನಕಗಿರಿ, ಗಂಗಾವತಿ, ಮಸ್ಕಿ ಬಿಜೆಪಿ ಕೈಹಿಡಿಯಲಿವೆ ಎನ್ನಲಾಗುತ್ತಿದೆ. ಶಿರಗುಪ್ಪ, ಸಿಂಧನೂರ, ಕೊಪ್ಪಳ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್‌ ನೀಡಲಿವೆ ಎಂದು ತಿಳಿದು ಬಂದಿದೆ. ಕುಷ್ಟಗಿಯಲ್ಲಿ ಸಮಬಲ ಸಾಧಿಸಲಿದ್ದು, ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುವುದೇ ಕುತೂಹಲ ಮೂಡಿಸಿದೆ.

ಅಸ್ತಿತ್ವದ ಪ್ರಶ್ನೆ: ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಿವರಾಜ ತಂಗಡಗಿ, ಇಕ್ಬಾಲ್‌ ಅನ್ಸಾರಿ ಅವರಿಗೆ ಈ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸ್ನಾನಮಾನದ ನಿರೀಕ್ಷೆ ಇಟ್ಟುಕೊಳ್ಳಬಹುದು.

ಅಲ್ಲದೆ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ತಮ್ಮ ವಿಶೇಷ ಆಸಕ್ತಿಯಿಂದ ತಮ್ಮದೇ ಸಮುದಾಯಕ್ಕೆ ಟಿಕೆಟ್‌ ನೀಡಿರುವುದು ಗೆಲುವು ಅನಿವಾರ್ಯ ಎಂಬ ಸ್ಥಿತಿಗೆ ಬಂದು ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.