ADVERTISEMENT

ಗಂಗಾವತಿ | ತುಂಗಭದ್ರಾ ಜಲಾಶಯದಿಂದ ನದಿಗೆ ವ್ಯಾಪಕ ನೀರು: ಶಾಲೆಗೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 5:36 IST
Last Updated 3 ಆಗಸ್ಟ್ 2024, 5:36 IST
ಪಂಪಾಸರೋವರಕ್ಕೆ ತೆರಳುವ ರಸ್ತೆಯಲ್ಲಿ ಜಲಾವೃತವಾಗಿದ್ದು ಅದರಲ್ಲೇ ವಾಹನಗಳು ಸಂಚರಿಸುತ್ತಿರುವುದು
ಪಂಪಾಸರೋವರಕ್ಕೆ ತೆರಳುವ ರಸ್ತೆಯಲ್ಲಿ ಜಲಾವೃತವಾಗಿದ್ದು ಅದರಲ್ಲೇ ವಾಹನಗಳು ಸಂಚರಿಸುತ್ತಿರುವುದು   

ಗಂಗಾವತಿ: ಎಂಟು ದಿನ ಆತ್ರೀ ನಾವ್ ಸಾಲಿಗೆ ಹೋಗಿಲ್ಲ. ಹೊಸ ಸಾಲಿಗೆ ದಿನಾ ಆಟೊದಾಗ ಹೋಗಿಬರ್ತಿದ್ದವಿ. ದಾರ‍್ಯಾಗ, ಸಾಲಿ ಹತ್ರ ನೀರು ಬಂದಾವೇ...

ಇದು ವಿರೂಪಾಪುರಗಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮಾತು.

ತುಂಗಾಭದ್ರ ಜಲಾಶಯದಿಂದ ಕಳೆದ 8-10 ದಿನಗಳಿಂದ  ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ವಿರೂಪಾಪುರಗಡ್ಡೆಯಲ್ಲಿರುವ ಶಾಲೆಗೆ ಸಂಪರ್ಕ ಕಡಿತವಾಗಿದೆ. ಇಲ್ಲಿ 1ರಿಂದ 5ನೇ ತರಗತಿವರೆಗೆ 25 ವಿದ್ಯಾರ್ಥಿಗಳಿದ್ದಾರೆ.

ADVERTISEMENT

ಈ ವಿಷಯವನ್ನು ಬಿಇಒ ಅವರ ಗಮನ ತಂದಿರುವ  ಶಾಲೆಯ ಮುಖ್ಯಶಿಕ್ಷಕ ಹನುಮಂತಪ್ಪ, ‘ನಿತ್ಯ ವಿರುಪಾಪುರಗಡ್ಡೆಯಿಂದ ಮಕ್ಕಳ ಪಾಲಕರ ಆಟೊಗಳ ಮೂಲಕ ಸಾಣಾಪುರ ಗ್ರಾ.ಪಂ ವ್ಯಾಪ್ತಿಯ ಕರಿಯಮ್ಮನಗಡ್ಡಿ ಪುನರ್ವಸತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋಗಿ ಪಠ್ಯ ಚಟುವಟಿಕೆ ನಡೆಸಲಾಗುತ್ತಿದೆ. ಮಧ್ಯಾಹ್ನ ಸಾಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬಿಸಿಯೂಟ ಸಿದ್ದಪಡಿಸಿಕೊಂಡು ಬಂದು ಬಡಿಸಲಾಗುತ್ತಿದೆ. ಸದ್ಯ ನೆರೆ ಹೆಚ್ಚಿರುವುದರಿಂದ ಕರಿಯಮ್ಮನಗಡ್ಡಿ ಶಾಲೆಯಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿದೆ. ನೀರಿನ ಪ್ರಮಾಣ ಇಳಿದ ಬಳಿಕ ವಿರುಪಾಪುರಗಡ್ಡೆಯಲ್ಲಿ ಶಾಲೆ ಆರಂಭಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ನಮ್ಮ ಶಾಲೆಯೇ ಚೆಂದ: ‘ಜಗ್ಗೂ... ನಮ್ಮ ಸಾಲಿ ಕಡೆ ನೀರ್ ಬಂದಾವೂ. ನಡೆದುಕೊಂಡ ಹೋಗಾ ಬರಲ್ಲ. ಎಷ್ಟು ದಿನ ಆತ ನಮ್ಮ ಸಾಲೆಗೆ ಹೋಗಿಲ್ಲ, ಆಟ ಆಡಿಲ್ಲ. ಹೊಸ ಶಸಾಲಿ ಐತಿ. ಆಟೊದಾಗ ಹೋಗಿ ಬರ್ತೇವಿ. ನಮಗೆ ನಮ್ಮ ಸಾಲಿನ ಚಂದ ಎನ್ನುವುದು ವಿರೂಪಾಪುರಗಡ್ಡೆಯ ವಿದ್ಯಾರ್ಥಿಗಳ ಬೇಸರದ ಮಾತು.

ಸಾರ್ವಜನಿಕ ಶೌಚಾಲಯಕ್ಕೆ ನುಗ್ಗಿದ ನೀರು: ತುಂಗಾಭದ್ರ ಜಲಾಶಯದಿಂದ 1.79 ಲಕ್ಷ ಕ್ರುಸೆಕ್ ನೀರು ನದಿಗೆ ಹರಿಬಿಟ್ಟಿ ದ್ದು ಪಂಪಾಸರೋವರಕ್ಕೆ ತೆರಳುವ ಮಾರ್ಗ ಮತ್ತು ಸಾರ್ವಜನಿಕ ಶೌಚಾಲಯಕ್ಕೆ ನೀರು ನುಗ್ಗಿದೆ. ಸದ್ಯ ಆಟೊ, ಕಾರುಗಳು ನೀರಿನಲ್ಲಿಯೇ ಪ್ರವಾಸಿಗರನ್ನ ಕರೆದುಕೊಂಡು ಪಂಪಾಸರೋವರಕ್ಕೆ ತರಳುತ್ತಿವೆ. ಇದರ ಬಳಿಯ ಬಾಳೆ ತೋಟಗಳಿಗೆ ನೀರು‌ ನುಗ್ಗಿದ ದೃಶ್ಯಗಳು ಕಂಡು ಬಂದವು.

ವಿಜಯನಗರ ಸಾಮ್ರಾಜ್ಯದ ಇತಿಹಾಸ ಹೊಂದಿರುವ ಚಿಂತಾಮಣಿ ಬಳಿಯ ಕುಳ ಮಂಟಪ ತುಂಗಾಭದ್ರ ಜಲಾಶಯದಿಂದ ನದಿಗೆ ಬಿಟ್ಟ ನೀರಿನ ಪ್ರಮಾಣಕ್ಕೆ ಸಂಪೂರ್ಣ ಮುಳಗಿದೆ.

ಪಂಪಾಸರೋವರದ ಸಾರ್ವಜನಿಕ ಶೌಚಾಲಯ ಜಲಾವೃತವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.