ADVERTISEMENT

ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 14:28 IST
Last Updated 13 ಡಿಸೆಂಬರ್ 2024, 14:28 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಮಾಡಲು ಶುಕ್ರವಾರ ಬೆಟ್ಟವೇರಿ ಸರತಿಯಲ್ಲಿ ನಿಂತಿದ್ದ ಮಾಲಾಧಾರಿಗಳು  ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಮಾಡಲು ಶುಕ್ರವಾರ ಬೆಟ್ಟವೇರಿ ಸರತಿಯಲ್ಲಿ ನಿಂತಿದ್ದ ಮಾಲಾಧಾರಿಗಳು  ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಗಂಗಾವತಿ (ಕೊಪ್ಪಳ ಜಿಲ್ಲೆ): ಹಲವು ದಿನಗಳಿಂದ ಹನುಮ ವ್ರತ ಕೈಗೊಂಡಿದ್ದ ರಾಜ್ಯದ ವಿವಿಧೆಡೆಯ ಅಪಾರ ಸಂಖ್ಯೆಯ ಭಕ್ತರು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ಹನುಮಮಾಲೆ ವಿಸರ್ಜನೆ ಮಾಡಿದರು.

ಮೋಡಮುಸುಕಿದ ಹಾಗೂ ಚಳಿಯ ವಾತಾವರಣದಲ್ಲಿಯೂ 575 ಮೆಟ್ಟಿಲುಗಳನ್ನು ಏರಿ ಬಂದ ಮಾಲಾಧಾರಿಗಳು ತಮ್ಮ ಕೊರಳಲ್ಲಿ ಧರಿಸಿದ್ದ ಗಂಧದ ಮಾಲೆಯನ್ನು ಬೆಟ್ಟದಲ್ಲಿ ಬಿಚ್ಚುವ ಮೂಲಕ ವ್ರತ ಪೂರ್ಣಗೊಳಿಸಿದರು. ಮಾಲಾಧಾರಿಗಳಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿತ್ತು.

ಬೆಳಗಾವಿ, ಧಾರವಾಡ, ಬಳ್ಳಾರಿ, ಗದಗ ಹೀಗೆ ಹಲವು ಜಿಲ್ಲೆಗಳಿಂದ ಮತ್ತು ಕೊಪ್ಪಳ ಜಿಲ್ಲೆಯ ವಿವಿಧೆಡೆಯಿಂದ ಅನೇಕ ಭಕ್ತರು ಪಾದಯಾತ್ರೆ ಮೂಲಕ ಬಂದು ಗುರುವಾರ ರಾತ್ರಿಯೇ ಅಂಜನಾದ್ರಿ ಸಮೀಪದಲ್ಲಿ ವಾಸ್ತವ್ಯ ಹೂಡಿದ್ದರು. ಮಧ್ಯರಾತ್ರಿಯಿಂದಲೇ ಬೆಟ್ಟ ಏರಿದರು. ಶುಕ್ರವಾರ ಬೆಳಿಗ್ಗೆ ಹೊತ್ತು ಏರಿದಂತೆ ಮಾಲಾಧಾರಿಗಳು ಬರುವ ಸಂಖ್ಯೆಯೂ ಹೆಚ್ಚಾಗುತ್ತಲೇ ಇತ್ತು. ಬೇಗನೆ ಬೆಟ್ಟ ಏರುವ ಭರದಲ್ಲಿ ಸಾಕಷ್ಟು ಭಕ್ತರು ನುಗ್ಗಿ ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಅಧಿಕಾರಿಗಳು ಪರದಾಡಬೇಕಾಯಿತು.

ADVERTISEMENT

ಮಾಲೆ ವಿಸರ್ಜನೆ ಅಂಗವಾಗಿಯೇ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಮುಖಂಡರು ಗಂಗಾವತಿಯಲ್ಲಿ ಬೃಹತ್‌ ಮೆರವಣಿಗೆ ನಡೆಸಿ ಹನುಮ ನಾಮ ಜಪಿಸಿದರು. ಈ ವೇಳೆ ಮುಸ್ಲಿಂ ಸಮುದಾಯದವರು ಹೂಮಳೆಗೆರೆದು ಸ್ವಾಗತ ಕೋರಿದರು. ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿಯೂ ಹಗಲಿರುಳು ಹಾಡುಗಳು ಮೊಳಗಿದವು. ಬಂದಿದ್ದ ಎಲ್ಲ ಭಕ್ತರಿಗೂ ಜಿಲ್ಲಾಡಳಿತವೇ ಊಟದ ವ್ಯವಸ್ಥೆ ಮಾಡಿತ್ತು.

ಶೋಧ: ಹನುಮಮಾಲೆ ಧರಿಸಿದ್ದ ಕೊಪ್ಪಳ ತಾಲ್ಲೂಕಿನ ಅಗಳಕೇರಾ ಗ್ರಾಮದ ಯಮನೂರಪ್ಪ ಮಲ್ಲಪ್ಪ ಚಿಲುಕಮುಕಿ (18) ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ಮುಂದುವರಿದಿದೆ.   

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಮಾಡಲು ಶುಕ್ರವಾರ ಬೆಟ್ಟವೇರಿ ಸರತಿಯಲ್ಲಿ ನಿಂತಿದ್ದ ಮಾಲಾಧಾರಿಗಳು  ಪ್ರಜಾವಾಣಿ ಚಿತ್ರ/ಭರತ್ ಕಂದಕೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.