
ಕೊಪ್ಪಳ: ‘ಕಾರ್ಖಾನೆಗಳು, ಆಣೆಕಟ್ಟುಗಳ ನಿರ್ಮಾಣ ಎಂಬುದು ಈ ಹಿಂದೆ ಅಭಿವೃದ್ಧಿ ಎಂದು ಕರೆಸಿಕೊಳ್ಳುತ್ತಿತ್ತು. ಅವನ್ನು ವರವೆಂದು ಸ್ವೀಕರಿಸಲಾಗುತ್ತಿತ್ತು. ಆದರೆ ಅಂತಹ ಅಭಿವೃದ್ಧಿ ಹೆಸರಿನ ವರಗಳೇ ಇಂದು ಕ್ಯಾನ್ಸರ್‌ನಂತೆ ಶಾಪವಾಗುತ್ತಿವೆ’ ಎಂದು ಹಿರಿಯ ಸಾಹಿತಿ ರಹಮತ್ ತರೀಕೆರೆ ವಿಷಾದ ವ್ಯಕ್ತಪಡಿಸಿದರು.
ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಮತ್ತು ವಿಸ್ತರಣೆಗೆ ಮುಂದಾಗಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್ಸ್, ಮುಕುಂದ್-ಸುಮಿ, ಎಕ್ಸ್ ಇಂಡಿಯಾ ಕಾರ್ಖಾನೆಗಳ ವಿರುದ್ಧ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟದ 60ನೇ ದಿನವಾದ ಮಂಗಳವಾರ ಅವರು ಮಾತನಾಡಿದರು.
‘ಕಾರ್ಖಾನೆಗಳ ಸ್ಥಾಪನೆ, ವಿಸ್ತರಣೆಯಿಂದಾಗಿ ಕೊಪ್ಪಳ ರೋಗಗ್ರಸ್ಥ ನಗರವಾಗುವತ್ತ ಸಾಗುತ್ತಿದೆ. ಯಾವ ಅಭಿವೃದ್ಧಿಯನ್ನು ನಾವೆಲ್ಲ ಬಯಸಿದ್ದೆವೋ ಅದು ಶಾಪವಾಗಿದೆ. ಇಂದು ಹೋರಾಟಗಾರರೊಂದಿಗೆ ಸುತ್ತಮುತ್ತಲಿನ ಹಾಲವರ್ತಿ, ಗಿಣಿಗೇರಿ, ಬಗನಾಳ, ಕಾಸನಕಂಡಿ ಗ್ರಾಮಗಳಿಗೆ ಭೇಟಿ ಕೊಟ್ಟು ಬಂದೆ. ಬೆಳೆದ ಬೆಳೆಗಳ ಬವಣೆಯೂ ಇದಕ್ಕೆ ಹೊರತಾಗಿಲ್ಲ. ಅಲ್ಲಿನ ಜನರ ಅಸಹಾಯಕ ಸ್ಥಿತಿ, ಅವ್ಯಕ್ತ ಭೀತಿ ಕಂಡು ಏನು ಹೇಳಬೇಕೋ ತಿಳಿದಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗೆ ಮುಂದುವರೆದಿದ್ದೆ ಆದಲ್ಲಿ 2027 ಎನ್ನುವಷ್ಟರಲ್ಲಿ ಇಲ್ಲಿನ ಬಹುತೇಕ ಜನರು ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರೋಗಗ್ರಸ್ಥರು ಹೆಚ್ಚಾದರು ಎಂದು ಇಲ್ಲಿನ ವೈದ್ಯರು ಖುಷಿ ಪಡುವ ಅವಶ್ಯಕತೆ ಇಲ್ಲ. ಅವರೂ ಕೂಡ ಇದೇ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಇಷ್ಟೊಂದು ವಿದ್ರಾವಕ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನರ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲದಿರುವುದು ಬೇಸರ ಮೂಡಿಸಿದೆ ಎಂದರು.
ಇಲ್ಲಿ ನಡೆಯುತ್ತಿರುವುದು ಜನರ ಅಳಿವು, ಉಳಿವಿನ ಹೋರಾಟ. ಇದು ಕೇವಲ ರೈತರ ಹೋರಾಟವಲ್ಲ. ರೈತ ಬೆಳೆದ ಅನ್ನ, ಕಾಯಿಪಲ್ಲೆ ಸೇವಿಸುವ ನಮ್ಮೆಲ್ಲರ ಹೋರಾಟ. ಹಾಗಾಗಿ ಇನ್ನೂ ಹೆಚ್ಚು ಹೆಚ್ಚು ನಾಗರಿಕರು ಪರಿಸರದ ಬಗೆಗೆ ಅರಿವು ಮೂಡಿಸಿಕೊಂಡು ಬಂದು ಹೋರಾಟದಲ್ಲಿ ಭಾಗವಹಿಸಬೇಕು. ಅಂತಿಮವಾಗಿ ಈ ಹೋರಾಟ ನಮ್ಮ ಅಳಲನ್ನು ಕೇಳಿಸಿಕೊಳ್ಳದ ರಾಜಕಾರಣಿಗಳ ವಿರುದ್ಧದ ಧ್ವನಿಯಾಗಬೇಕು ಎಂದು ಅವರು ಕರೆ ನೀಡಿದರು.
ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ, ಸಾವಿತ್ರಿ ಮುಜಮದಾರ, ರವಿ ಕಾಂತಣ್ಣವರ, ಹೋರಾಟಗಾರರಾದ ಕೆ.ಬಿ.ಗೋನಾಳ, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮಾಲಿನ್ಯ ಬಾಧಿತ ಪ್ರದೇಶಗಳು ಗ್ರಾಮಗಳಾಗಿ ಉಳಿದಿಲ್ಲ. ಅಲ್ಲಿಗೆ ಹೋದಾಗ ನನಗೆ ಯುದ್ಧ ಭೂಮಿಯಲ್ಲಿ ಓಡಾಡಿ ಬಂದ ಅನುಭವವಾಯಿತು. ಕಾಲಿಟ್ಟಲ್ಲೆಲ್ಲ ಕಪ್ಪು ಧೂಳು. ಮುಟ್ಟಿದ್ದೆಲ್ಲ ಮಸಿಮಯವಾಗಿಬಿಟ್ಟಿದೆ.ರಹಮತ್ ತರೀಕೆರೆ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.