ಸಾಂದರ್ಭಿಕ ಚಿತ್ರ
ಯಲಬುರ್ಗಾ: ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರಿಕನ ಅಂಗಡಿಯಲ್ಲಿ ಶನಿವಾರ ನಡೆದ ಪರಿಶಿಷ್ಟ ಸಮುದಾಯದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಸ್ಥಳ ಮಹಜರು ನಡೆಸಿದರು.
ಕ್ಷೌರ ಮಾಡುವ ವಿಚಾರವಾಗಿ ಪರಿಶಿಷ್ಟ ಸಮುದಾಯದ ಮೃತ ವ್ಯಕ್ತಿ ಯಮನೂರಸ್ವಾಮಿ ಬಂಡಿಹಾಳ ಹಾಗೂ ಕೊಲೆ ಆರೋಪಿ ಮುದುಕಪ್ಪ ಹಡಪದ ನಡುವೆ ಶನಿವಾರ ಜಟಾಪಟಿ ನಡೆದಿತ್ತು. ಕ್ಷೌರ ಮಾಡುವಂತೆ ಯಮನೂರಸ್ವಾಮಿ ಕೇಳಿದ್ದು, ‘ಮೊದಲು ಹಣ ಕೊಡು ಬಳಿಕ ಮಾಡುತ್ತೇನೆ’ ಎಂದು ಮುದುಕಪ್ಪ ಹೇಳಿದ್ದಾನೆ. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದವಾಗಿ ಹೊಡೆದಾಟ ನಡೆದಿದ್ದು ತೀವ್ರ ಸ್ವರೂಪ ಪಡೆದು ಕೊಲೆ ಹಂತದ ತನಕ ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾತಿನ ಭರದಲ್ಲಿ ಸಿಟ್ಟಿಗೆದ್ದ ಕ್ಷೌರಿಕ ಕತ್ತರಿಯಿಂದ ಹೊಟ್ಟೆಗೆ ಇರಿದಿದ್ದಾನೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೃತ ಯುವಕನ ಸಹೋದರ ಹನುಮಂತಪ್ಪ ಬಂಡಿಹಾಳ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ವಾಗ್ವಾದದ ವೇಳೆ ಕೊಲೆ ಆರೋಪಿ ಜಾತಿನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೃತ ವ್ಯಕ್ತಿಯ ಬಳಿ ಹಣವಿದ್ದಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲವೇ? ಎನ್ನುವ ಚರ್ಚೆಯೂ ಗ್ರಾಮದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.