
ಯಲಬುರ್ಗಾ: ಕಳೆದ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಹೊಸ ಕೆರೆಗಳ ನಿರ್ಮಾಣ ಹಾಗೂ ಕೆರೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಹೊರತು ಪಡಿಸಿದರೆ ಉಳಿದ ಯಾವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಘೋಷಣೆಯಾಗಿರಲಿಲ್ಲ. ಕೆರೆ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿರುವುದೇ ಒಂದು ಸಮಾಧಾನದ ಸಂಗತಿಯಾಗಿದೆ.
ಮುಖ್ಯಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ತಮ್ಮ ಕ್ಷೇತ್ರಕ್ಕೆ ಹೇರಳ ಅನುದಾನ ತಂದಿದ್ದಾರೆ. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಠಿವೆ.
ಆದರೆ ಅನೇಕ ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಚಿಂಕೆವನ ನಿರ್ಮಾಣ, ಯಲಬುರ್ಗಾ ತಾಲ್ಲೂಕು ಪ್ರದೇಶದಲ್ಲಿ ಕೈಗಾರಿಕೆ ವಲಯ, ತೋಳ ಸಂರಕ್ಷಣಾ ಧಾಮ ಸೇರಿದಂತೆ ಅಗತ್ಯ ಯೋಜನೆಗಳ ಮಂಜೂರಾತಿಗೆ ಜನರು ಎದುರು ನೋಡುತ್ತಿದ್ದಾರೆ.
ಈಶಣ್ಣ ಗುಳಗಣ್ಣವರ ಶಾಸಕರಾಗಿದ್ದ ಸಂದರ್ಭದಲ್ಲಿ ಜಿಂಕೆವನ ನಿರ್ಮಾಣಕ್ಕೆ ₹ 50 ಲಕ್ಷ ಮಂಜೂರಾಗಿದ್ದನ್ನು ಬಿಟ್ಟರೆ ಇನ್ನೂವರೆಗೂ ಯಾವುದೇ ಕೆಲಸವಾಗಿಲ್ಲ. ಮಂಜೂರಾಗಿದ್ದ ಹಣ ಏನಾಯಿತೆಂಬುದೇ ಗೊತ್ತಾಗಿಲ್ಲ. ನಂತರ ಆಯ್ಕೆಯಾದ ಶಾಸಕರಲ್ಲಿ ಇಚ್ಚಾಶಕ್ತಿಯ ಕೊರತೆಯಿಂದ ಇದು ನೆನೆಗುದಿಗೆ ಬಿದ್ದಿದೆ.
ಹಾಗೆಯೇ ಮ್ಯಾದನೇರಿ ಹೊರವಲಯದಲ್ಲಿ ಕರಡಿ ಹಾವಳಿಗೆ ರೈತರು ಕಂಗಾಲಾಗುತ್ತಿದ್ದಾರೆ. ಕರಡಿ ದಾಳಿಯ ನಿಯಂತ್ರಣ, ಮಕ್ಕಳ್ಳಿ ಮತ್ತು ಮಂಡಲಮರಿ ಗ್ರಾಮದ ವ್ಯಾಪ್ತಿಯಲ್ಲಿ ಅಧಿಕವಾಗಿರುವ ತೋಳಗಳ ರಕ್ಷಣೆಗೆ ಧಾಮ ನಿರ್ಮಾಣದ ಕೂಗು ರೈತರಿಂದ ಕೇಳಿ ಬರುತ್ತಿದೆ.
ಹೊಸ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಇರುವ ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕಿದೆ. ಯಲಬುರ್ಗಾ ಕೆಂಪು ಕೆರೆ ಸೇರಿದಂತೆ ಅನೇಕ ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಬೇಕಿದೆ. ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಲಭ್ಯವಾಗಲು ಕ್ಷೇತ್ರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗಬೇಕು ಎನ್ನುತ್ತಾರೆ ಯುವ ಸಮೂಹ.
ಭಾನಾಪುರ ಗ್ರಾಮದ ಬಳಿವಿರುವಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಇರುವ ಕೊಪ್ಪಳ ವಿಶ್ವವಿದ್ಯಾಲಯವನ್ನು ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.
ವಿವಿಧ ಕಾಮಗಾರಿಗಳಲ್ಲಿ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನಿಗೆ ಹೆಚ್ಚುವರಿ ಪರಿಹಾರಕ್ಕೆ ಅನುದಾನ ಕಲ್ಪಿಸುವುದು. ಯಲಬುರ್ಗಾ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳಲು ಅನುದಾನ ಒದಗಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಾಗಿದೆ.
ವನ್ಯಪ್ರಾಣಿಗಳ ರಕ್ಷಣೆಯ ಜೊತೆಗೆ ರೈತರ ಮತ್ತು ಜನಸಾಮಾನ್ಯರ ಹಿತ ಕಾಪಾಡಬೇಕಾಗಿದೆ. ಅದಕ್ಕಾಗಿ ಜಿಂಕೆವನ ಹಾಗೂ ವನ್ಯಪ್ರಾಣಿ ಸಂರಕ್ಷಣಾ ಘಟಕ ನಿರ್ಮಿಸಲು ಶಾಸಕರು ಪ್ರಯತ್ನಿಸಬೇಕು-ಅಂದಪ್ಪ ಕೊಳೂರು ರೈತ ಮುಖಂಡ ಯರೇಹಂಚಿನಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.