
ಯಲಬುರ್ಗಾ: ತಾಲ್ಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಮಾರುತೇಶ್ವರ ಜಾತ್ರೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಳೆದ ಒಂದು ವಾರದಿಂದಲೂ ವಿವಿಧ ಧಾರ್ಮಿಕ ಚುಟವಟಿಕೆಗಳು ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ಜರುಗಿದವು.
ದೇವಸ್ಥಾನದ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೇಳಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಜಾತ್ರೆಯ ದಿನ ನಡೆಯುವ ಹಾಲೋಕಳಿ ಭಕ್ತರ ಗಮನ ಸೆಳೆಯಿತು. ಗೊಲ್ಲರ ಸಂಸ್ಕೃತಿಯ ಹಾಲೋಕಳಿಯನ್ನು ನೋಡಲು ದೂರದ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬಂದು ಕಣ್ತುಂಬಿಕೊಂಡರು. ರಥೋತ್ಸವ ನಡೆಯುವ ಮುನ್ನ ನಡೆದ ಹಾಲೋಕಳಿ ಮುಕ್ತಾಯವಾಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸಂಜೆ ನಡೆದ ರಥೋತ್ಸವಕ್ಕೆ ಯಲಬುರ್ಗಾ, ಕೊಪ್ಪಳ, ಕುಷ್ಟಗಿ, ಗಜೇಂದ್ರಗಡ, ರೋಣ ಸೇರಿದಂತೆ ಹಲವು ತಾಲ್ಲೂಕಿನ ಹಲವು ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಸೇರಿ ದೇವರ ಕೃಪೆಗೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.