ADVERTISEMENT

ಯಲ್ಲಾಲಿಂಗನ ಕೊಲೆ‌ ಪ್ರಕರಣ: 10 ವರ್ಷ ನಡೆದ ವಿಚಾರಣೆ; ಅಕ್ಟೋಬರ್ 3ರಂದು ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:10 IST
Last Updated 24 ಸೆಪ್ಟೆಂಬರ್ 2025, 3:10 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಕೊಪ್ಪಳ: ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಅಂತಿಮ ಆದೇಶ ಇಲ್ಲಿನ ಜಿಲ್ಲಾ ನ್ಯಾಯಾಲಯದಿಂದ ಅಕ್ಟೋಬರ್‌ 3ರಂದು ಪ್ರಕಟವಾಗಲಿದೆ.

ಆಗಲೂ ಸಚಿವರಾಗಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಿವರಾಜ ತಂಗಡಗಿ ರಾಜೀನಾಮೆಗೂ ಯಲ್ಲಾಲಿಂಗನ ಕೊಲೆ ಪ್ರಕರಣ ಕಾರಣವಾಗಿತ್ತು.  ಜಿಲ್ಲಾ ನ್ಯಾಯಾಲಯ ಮಂಗಳವಾರ ಪ್ರಕರಣದ ಅಂತಿಮ ವಿಚಾರಣೆ ನಡೆಸಿತು. ಪ್ರಕರಣದ ಆರೋಪಿಗಳಾದ ಹನುಮೇಶ ನಾಯಕ, ಬಾಳನಗೌಡ, ಕಾಡಮಂಜ, ಮಹಾಂತೇಶ ನಾಯಕ, ಮನೋಜ ಪಾಟೀಲ್, ನಂದೀಶ, ಪರಶುರಾಮ, ಯಮನೂರಪ್ಪ ಹಾಗೂ ದುರ್ಗಪ್ಪ ವಿಚಾರಣೆಗೆ ಹಾಜರಾಗಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದ ಮಂಡಿಸಿದರು.

ADVERTISEMENT

ಏನಿದು ಘಟನೆ: ಕನಕಗಿರಿ ತಾಲ್ಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತಮ್ಮ ಗ್ರಾಮದಲ್ಲಿ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ. ಇದಾದ ಬಳಿಕ 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನ ಕೊಲೆ ನಡೆದಿತ್ತು.

ಇದು ಮೊದಲು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ ನಂತರ ಕೊಲೆ ಎಂದು ಕೊಪ್ಪಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಸಚಿವ ಶಿವರಾಜ ತಂಗಡಗಿ ಆಪ್ತ ಹನಮೇಶ ನಾಯಕ ಸೇರಿ 9 ಜನರ ವಿರುದ್ಧ ಇಲ್ಲಿ ಪ್ರಕರಣ ದಾಖಲಾಗಿತ್ತು.‌ ಯಲ್ಲಾಲಿಂಗನ ಸಾವಿಗೆ ನ್ಯಾಯ ಒದಗಿಸುವಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ಕೂಡ ನಡೆದಿದ್ದರಿಂದ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿ ಸಚಿವ ಶಿವರಾಜ ತಂಗಡಗಿ ಸಂಪುಟದಿಂದ ಹೊರಬೀಳುವಂತಾಗಿತ್ತು. ಸುದೀರ್ಘ ಹತ್ತು ವರ್ಷಗಳ ವಿಚಾರಣೆ ನಡೆದಿದ್ದು ಈಗ ನ್ಯಾಯಾಲಯದ ಆದೇಶ ಹೊರಬೀಳುವ ದಿನಾಂಕ ನಿಗದಿಯಾಗಿದೆ.

ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ನಂತರ ಆರೋಪಿಗಳಿಗೆ ಜಾಮೀನು ದೊರೆತಿತ್ತು. 2021ರಲ್ಲಿ ಆರೋಪಿ ಮಹಾಂತೇಶ್ ನಾಯಕನ ಮದುವೆಯಲ್ಲಿ ಪೊಲೀಸರು ಭಾಗವಹಿಸಿದ್ದರಿಂದ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.