ADVERTISEMENT

International Yoga Day 2021: ಯೋಗ ಗುರು ಬಸವಲಿಂಗೇಶ್ವರ ಸ್ವಾಮೀಜಿ

ಉಮಾಶಂಕರ ಬ.ಹಿರೇಮಠ
Published 21 ಜೂನ್ 2021, 2:01 IST
Last Updated 21 ಜೂನ್ 2021, 2:01 IST
ಬಸವಲಿಂಗೇಶ್ವರ ಸ್ವಾಮೀಜಿ ಯೋಗ ಮಾಡುತ್ತಿರುವುದು
ಬಸವಲಿಂಗೇಶ್ವರ ಸ್ವಾಮೀಜಿ ಯೋಗ ಮಾಡುತ್ತಿರುವುದು   

ಯಲಬುರ್ಗಾ: ಸಂಸ್ಕೃತಿಯ ತವರಿನಂತಿರುವ ಸ್ಥಳೀಯ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಕೇವಲ ಧಾರ್ಮಿಕ ಗುರುವಾಗಿರದೇ ಯೋಗ ಗುರು ಕೂಡ ಆಗಿದ್ದಾರೆ.

ಮಠದ ಪೀಠಾಧಿಪತಿಯಾಗುವ ಮುನ್ನವೇ ಯೋಗದಲ್ಲಿ ನೈಪುಣ್ಯತೆ ಪಡೆದು ನೂತನ ಆಯಾಮಗಳಲ್ಲಿ ಸಿದ್ಧಿ ಸಾಧಿಸಿ ಅವುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಸಫಲರಾಗಿದ್ದಾರೆ.

15 ವರ್ಷಗಳಿಂದಲೂ ನಿತ್ಯ ಯೋಗ ಮತ್ತು ಆಧ್ಯಾತ್ಮ ಚಟುವಟಿಕೆಗಳಿಂದ ಸಾಕಷ್ಟು ಸಂಖ್ಯೆಯ ಯುವಕರು ಯೋಗದಲ್ಲಿ ಪರಿಣಿತಿ ಪಡೆಯುವಂತೆ ಮಾಡಿದ್ದಾರೆ. ಇವರ ಗರಡಿಯಲ್ಲಿ ಕಲಿತ ಅನೇಕರು ಯೋಗ ಬೋಧಕರಾಗಿ ಕಾರ್ಯನಿರ್ವಹಿಸಿ ಮಠದ ಮತ್ತು ಶ್ರೀಗಳ ಕೀರ್ತಿ ಇಮ್ಮಡಿಗೊಳಿಸುತ್ತಿದ್ದಾರೆ.

ADVERTISEMENT

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಯಲಬುರ್ಗಾ ಪಟ್ಟಣದಲ್ಲಿ ಮುಗಿಸಿ ನಂತರ ಶಿವಯೋಗ ಮಂದಿರ, ತಿರುಪತಿಯಲ್ಲಿ ವಿವಿಧ ಧಾರ್ಮಿಕ, ಸಾಹಿತ್ಯ ಹಾಗೂ ಸಂಸ್ಕೃತ ಅಭ್ಯಾಸ ಮಾಡಿ ಪಟ್ಟಣದ ಶ್ರೀಮಠಕ್ಕೆ ಪಟ್ಟಾಧಿಕಾರಿಯಾಗಿ ಇಲ್ಲಿಯವರೆಗೂ ಶಿಕ್ಷಣ, ಸಾಹಿತ್ಯ, ಸಂಗೀತ ಹಾಗೂ ಧಾರ್ಮಿಕ ವಾತಾವರಣ ನಿರ್ಮಿಸಿದ್ದಾರೆ. ಜತೆಗೆ ನಿತ್ಯ ಉಚಿತ ಯೋಗ ತರಗತಿಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

ಆಯುರ್ವೇದದಲ್ಲಿಯೂ ಹೆಚ್ಚಿನ ಜ್ಞಾನವುಳ್ಳವರಾಗಿರುವ ಸ್ವಾಮೀಜಿ, ಕೃಷಿಯಲ್ಲಿಯೂ ನಿತ್ಯ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ವೈವಿಧ್ಯಮಯ ವ್ಯಕ್ತಿತ್ವದ ಈಗಿನ ಬಸವಲಿಂಗೇಶ್ವರ ಸ್ವಾಮೀಜಿ ಇತರರಿಗೆ ಮಾದರಿಯಾಗಿದ್ದಾರೆ.

ಯೋಗವು ಸರ್ವ ರೋಗಗಳಿಗೆ ಮದ್ದು, ನಿರಂತರ ಹಾಗೂ ನಿಯಮಿತ ಯೋಗಾಭ್ಯಾಸದಿಂದ ದೇಹದ ಆರೋಗ್ಯದಲ್ಲಿ ಸಮತೋಲನ ಉಂಟಾಗುತ್ತದೆ. ಇದರಿಂದ ಯಾವ ಕಾಯಿಲೆಗಳು ಬರುವುದಿಲ್ಲ. ಶ್ರೀಮಠದಿಂದ ಸುಮಾರು ವರ್ಷಗಳಿಂದಲೂ ಯೋಗ ಹೇಳಿಕೊಡಲಾಗುತ್ತಿದೆ. ಸಾಕಷ್ಟು ಸಂಖ್ಯೆಯ ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದು ನಿರಂತರವಾಗಿರುತ್ತದೆ. ಆಸಕ್ತರು ಭಾಗವಹಿಸಬಹುದು ಎಂದು ಬಸವಲಿಂಗೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

‘ಮಠದಲ್ಲಿ ಯೋಗ ಕಲಿತ್ತಿದ್ದರಿಂದ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳಲು ಸಾಧ್ಯವಾಗಿದೆ’ ಎಂದು ಯೋಗ ಪಟು ಶರಣಬಸಪ್ಪ ದಾನಕೈ ತಿಳಿಸಿದ್ದಾರೆ.

ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೆ ಭಕ್ತ ಸಮೂಹ ಆಸಕ್ತಿ ತೋರಿದೆ. ಈಗಾಗಲೇ ಬಸವಲಿಂಗೇಶ್ವರ ಯೋಗ ಸಮಿತಿ ಸಂಘ ಅಸ್ತಿತ್ವದಲ್ಲಿದ್ದು, ಈ ಮೂಲಕ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿವಿಧೆಡೆ ಯೋಗ ಶಿಬಿರಗಳನ್ನು ಆಯೋಜಿಸಿ ಸದೃಢ ಹಾಗೂ ಆರೋಗ್ಯಯುತ ಭಾರತ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡುತ್ತಿರುವುದು ಸ್ಥಳೀಯ ಭಕ್ತರಲ್ಲಿ ಸಂತಸಕ್ಕೆ ಕಾರಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.