ADVERTISEMENT

ಕುಷ್ಟಗಿ: ಸ್ಮಶಾನ ಅಭಿವೃದ್ಧಿಗೆ ಯುವಕರ ‘ಸಂಕಲ್ಪ’

ನಾರಾಯಣರಾವ ಕುಲಕರ್ಣಿ
Published 12 ಡಿಸೆಂಬರ್ 2024, 6:00 IST
Last Updated 12 ಡಿಸೆಂಬರ್ 2024, 6:00 IST
ಕುಷ್ಟಗಿಯ ಗೆಳೆಯರ ಬಳಗದ ಯುವಕರು ಗಜೇಂದ್ರಗಡ ರಸ್ತೆಯಲ್ಲಿನ ರುದ್ರಭೂಮಿ ಸ್ವಚ್ಛಗೊಳಿಸಿರುವುದು
ಕುಷ್ಟಗಿಯ ಗೆಳೆಯರ ಬಳಗದ ಯುವಕರು ಗಜೇಂದ್ರಗಡ ರಸ್ತೆಯಲ್ಲಿನ ರುದ್ರಭೂಮಿ ಸ್ವಚ್ಛಗೊಳಿಸಿರುವುದು   

ಕುಷ್ಟಗಿ: ಸಾರ್ವಜನಿಕ ಸ್ಥಳ, ರಸ್ತೆ, ಗುಡಿಗುಂಡಾರದ ಬಳಿ ಸ್ವಚ್ಛತೆ, ಶ್ರಮದಾನ ನಡೆಸುವುದು ಸಾಮಾನ್ಯ. ಸ್ಮಶಾನ ಸ್ವಚ್ಛಗೊಳಿಸುವವರ ಸಂಖ್ಯೆ ಅಪರೂಪ. ಆದರೆ ಪಟ್ಟಣದ ಕೆಲ ಸ್ನೇಹಿತರ ಗುಂಪು ಸ್ಮಶಾನ ಸ್ವಚ್ಛಗೊಳಿಸಿ ಶ್ರಮದಾನ ನಡೆಸುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿ ಸೈ ಎನಿಸಿಕೊಂಡಿದ್ದು ಬುಧವಾರ ಪಟ್ಟಣದಲ್ಲಿ ಕಂಡುಬಂದಿತು.

ಗಜೇಂದ್ರಗಡ ರಸ್ತೆಯಲ್ಲಿನ ಕ್ರೈಸ್ತ ದ ಕಿಂಗ್‌ ಶಾಲೆಯ ಹಿಂದಿರುವ ಸ್ಮಶಾನ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಅಲ್ಲಿನ ಸ್ಥಿತಿ ಶೋಚನೀಯವಾಗಿತ್ತು. ಪಟ್ಟಣದಲ್ಲಿ ಪ್ರಬಲ ಸಮುದಾಯಗಳಿಗೆ ಸೇರಿದ ರುದ್ರಭೂಮಿಗಳು ಅಭಿವೃದ್ಧಿಗೊಂಡಿವೆ. ಆದರೆ ಬಹುತೇಕ ತಳಸಮುದಾಯದವರಿಗೆ ಸೇರಿದ ಸ್ಮಶಾನ ಮಾತ್ರ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಎರಡು ಎಕರೆ ವಿಸ್ತಾರದ ಸ್ಮಶಾನ ಜಾಗದಲ್ಲಿ ಬಳಕೆಯಾಗುತ್ತಿದ್ದುದು ಕೇವಲ ಶೇ 25ರಷ್ಟು ಮಾತ್ರ. ಇಡಿ ಪ್ರದೇಶ ಅನೇಕ ದಶಕಗಳಿಂದಲೂ ಮುಳ್ಳುಕಂಟಿ ಬೆಳೆದು ಕಾಲಿಡದಂತಾಗಿತ್ತು. ಹಾಗಾಗಿ ಶವ ಸಂಸ್ಕಾರಕ್ಕೆ ಹೋದವರೇ ಸುಸ್ತಾಗಿ ಬರುವಂಥ ಪರಿಸ್ಥಿತಿ ಅಲ್ಲಿತ್ತು.

ADVERTISEMENT

ಇದನ್ನು ಗಮನಿಸಿದ ಪಟ್ಟಣದ ವಿವಿಧ ಸಮುದಾಯಗಳಿಗೆ ಸೇರಿದ ಯುವಕರು ಸ್ವತಃ ಹಣ ಖರ್ಚು ಮಾಡಿ ಇಡಿ ದಿನ ಜೆಸಿಬಿ ಯಂತ್ರ ಬಳಸಿ ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಜಾಗವನ್ನು ಸಮತಟ್ಟಾಗಿಸಿದರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಗಿಡಗಳನ್ನು ಬೆಳೆಸಲು ಗುಂಡಿ ತೋಡಿದ್ದಾರೆ. ಕುಡಿಯುವ ಮತ್ತು ಬಳಕೆಯ ನೀರಿನ ವ್ಯವಸ್ಥೆಯನ್ನೂ ಕಲ್ಪಿಸುವುದು. ಮಳೆಗಾಲದಲ್ಲಿ ಶವ ದಹಿಸುವುದಕ್ಕೆ ಮಂಟಪ ಸೇರಿ ಮೂಲಸೌಲಭ್ಯ ಕಲ್ಪಿಸುವ ಚಿಂತನೆ ಇದೆ ಎನ್ನುತ್ತಾರೆ ಶ್ರಮದಾನದ ನೇತೃತ್ವ ವಹಿಸಿದ್ದ ವೆಂಕಟೇಶ ವಡ್ಡಿಗೇರಿ, ಜಗದೀಶ ನಾಲಗಾರ ಇತರರು.

ಬೆಳಿಗ್ಗೆಯಿಂದಲೇ ನಡೆದ ಸ್ಮಶಾನದಲ್ಲಿ ಸ್ವಚ್ಚತೆ, ಶ್ರಮದಾನ ಕಾರ್ಯಾಚರಣೆಗೆ ಯುವಕರಾದ ರಾಘವೇಂದ್ರ ಭಜಂತ್ರಿ, ನಿಂಗಪ್ಪ ಸಂಗಟಿ, ರಾಜು ನಾಲಗಾರ, ಪರಶುರಾಮ ಚೌಡ್ಕಿ, ಪರಶುರಾಮ ಹೀರಣ್ಣೇರ, ಮುತ್ತಣ್ಣ ಜಗ್ಗಲರ್, ವಿಜಯಕುಮಾರ, ಮುತ್ತಣ್ಣ ಗುಡಿವಾಲ, ಮಂಜುನಾಥ ವಡ್ಡಿಗೇರಿ, ತೊಂಡೆಪ್ಪ ಚೂರಿ ಇನ್ನೂ ಅನೇಕ ಯುವಕರು ಕೈ ಜೋಡಿಸಿದ್ದರು.

ಬಲಿಷ್ಠ ಸಮುದಾಯಗಳ ಸ್ಮಶಾನಗಳನ್ನೆಲ್ಲ ಅಭಿವೃದ್ಧಿಪಡಿಸಿರುವ ಪುರಸಭೆ ತಳಸಮುದಾಯದವರ ರುದ್ರಭೂಮಿಯನ್ನು ಮಾತ್ರ ನಿರ್ಲಕ್ಷಿಸಿದೆ. ಯುವಕರ ಈ ಸಮಾಜಮುಖಿ ಸೇವೆ ಮಾದರಿಯಾಗಿದೆ.
ಪರಶುರಾಮಪ್ಪ ನಿವಾಸಿ

ಜನರ ಪಡಿಪಾಟಲೇ ಪ್ರೇರಣೆ

ಈಚೆಗೆ ಪಟ್ಟಣದ ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆ ಬಂದಿದ್ದ ಮಹಿಳೆಯರು ಸೇರಿದ ಸಾಕಷ್ಟು ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶವ ಹೂಳುವುದಕ್ಕೂ ಮುಳ್ಳುಕಂಟಿಗಳ ಸಮಸ್ಯೆ ಕಾಲಿಡುವುದಕ್ಕೂ ಜಾಗವಿರಲಿಲ್ಲ. ಮೃತರ ಕುಟುಂಬದವರು ಗೋಳಿಡುತ್ತಿದ್ದುದು ಒಂದೆಡೆಯಾದರೆ ಇನ್ನೊಂದೆಡೆ ರುದ್ರಭೂಮಿಯ ದುಸ್ತಿತಿಗೀಡಾಗಿದ್ದ ರುದ್ರಭೂಮಿಯಲ್ಲಿ ಸಂಸ್ಕಾರಕ್ಕೆ ಬಂದ ಇತರರು ಅನುಭವಿಸುತ್ತಿದ್ದ ಯಾತನೆ. ಮನ ಕಲಕಿದ ಈ ದೃಶ್ಯವೇ ರುದ್ರಭೂಮಿಯ ಸ್ವಚ್ಛತೆಗೆ ನಮಗೆ ಪ್ರೇರಣೆ ನೀಡಿದೆ. ರುದ್ರಭೂಮಿಯ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸಲು ಸಂಕಲ್ಪಿಸಿದ್ದೇವೆ ಎಂದೆ ಶ್ರಮದಾನದಲ್ಲಿ ತೊಡಗಿದ್ದ ರಾಘವೇಂದ್ರ ಭಜಂತ್ರಿ ಇತರರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.