ADVERTISEMENT

ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ‘ಅಕ್ಷರ’ ದೇವರು

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಎಲ್‌.ಹನುಮಂತಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 19:30 IST
Last Updated 8 ಸೆಪ್ಟೆಂಬರ್ 2019, 19:30 IST
ಡಾ.ಬಾಬು ಜಗಜೀವನರಾಮ್‌ ಸಂಘಗಳ ಒಕ್ಕೂಟ  ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು
ಡಾ.ಬಾಬು ಜಗಜೀವನರಾಮ್‌ ಸಂಘಗಳ ಒಕ್ಕೂಟ  ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಮಂಡ್ಯ: ‘ಶಿಕ್ಷಣವೇ ಬದಲಾವಣೆಯ ಅಸ್ತ್ರವಾಗಬೇಕು. ಅಕ್ಷರ ನಮ್ಮ ಪಾಲಿನ ದೇವರಾಗಬೇಕು. ಅಕ್ಷರ ದೇವರು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಬೇಕು’ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಅಭಿಪ್ರಾಯಪಟ್ಟರು.

ಡಾ.ಬಾಬು ಜಗಜೀವನರಾಮ್‌ ಸಂಘಗಳ ಒಕ್ಕೂಟ ಭಾನುವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೇರೆ ಯಾವುದೇ ದೇವರು ನಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ. ಶಿಕ್ಷಣ ಪಡೆಯದಿದ್ದರೆ ಪ್ರಾಣಿಗಳ ರೀತಿಯಲ್ಲಿ ಬದುಕಬೇಕಾದ ದುಸ್ಥಿತಿ ಬರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ನೀಡುವ ಕಾಣಿಗೆ ಏನಾದರೂ ಇದ್ದರೆ ಅದು ಶಿಕ್ಷಣ ಮಾತ್ರ. ವೈಯಕ್ತಿಕವಾಗಿ ಅಕ್ಷರ ದೇವರು ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದೆ. ಶಿಕ್ಷಣ ಪಡೆಯದಿದ್ದರೆ ನಾನು ಜೀತ ಮಾಡಬೇಕಾಗಿತ್ತು, ಇಲ್ಲವೇ ಯಾರದೋ ಮನೆಯಲ್ಲಿ ದನ ಮೇಯಿಸಬೇಕಾಗಿತ್ತು. ನನ್ನ ತಂದೆ, ತಾತ ಎಲ್ಲರೂ ಜೀತವನ್ನೇ ಮಾಡಿದ್ದಾರೆ’ಎಂದು ಹೇಳಿದರು.

ADVERTISEMENT

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬಿ.ಎ ಪಾಸ್‌ ಮಾಡಿದಾಗಲೇ ಅವರಿಗೆ ಕೆಲಸ ಸಿಗುತ್ತಿತ್ತು. ಆದರೆ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಶಾಹೂ ಮಹಾರಾಜರ ಸಹಾಯದೊಂದಿಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಅವರೊಳಗಿದ್ದ ಛಲ ಅವರನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿತು. ಅಂಬೇಡ್ಕರ್‌ ಅಸಮಾನ್ಯ ವ್ಯಕ್ತಿ ಆಗಿರಲಿಲ್ಲ, ಎಲ್ಲರಂತೆ ಸಾಮಾನ್ಯವಾಗಿದ್ದರು. ಈಗಿನ ಯುವಕರು ತಾವು ಅಂಬೇಡ್ಕರ್‌ಗಿಂತ ಕಡಿಮೆ ಎಂದು ಭಾವಿಸಬೇಕಾಗಿಲ್ಲ. ಅವರಿಗಿಂತ ಹೆಚ್ಚಿನ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು.

‘ನಮ್ಮ ಸಮಾಜದ ಯುವಜನರು ಅವಕಾಶಗಳನ್ನು ಕಸಿದುಕೊಳ್ಳಬೇಕು. ಯಾರ ಮನೆಯ ಬಾಗಿಲಿಗೂ ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಅವಕಾಶಗಳು ಇರುವಲ್ಲಿಗೇ ತೆರಳಿ ಅವುಗಳನ್ನು ಕಸಿದುಕೊಳ್ಳಬೇಕು. ಸ್ವಾತಂತ್ರ್ಯ ಬಂದು 70 ಷರ್ಷಗಳಾದರೂ ನಮಗೆ ಶಿಕ್ಷಣ ಇಲ್ಲ, ಶಕ್ತಿ ಇಲ್ಲ, ಹಣ ಇಲ್ಲ ಎಂದು ರೋಧನ ಮಾಡುವುದನ್ನು ಮೊದಲು ಬಿಡಬೇಕು’ ಎಂದು ಸಲಹೆ ನೀಡಿದರು.

‘ಆದಿ ಜಾಂಬವ ಅಭಿವೃದ್ಧಿ ನಿಗಮ ಕಾರ್ಯಾರಂಭ ಮಾಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಸಮಾಜದವರು ₹ 50 ಲಕ್ಷದವರೆಗೂ ಗುತ್ತಿಗೆ ಪಡೆಯುವ ಅವಕಾಶವಿದೆ. ಗುತ್ತಿಗೆದಾರರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಬೇರೆಯವರಿಗೆ ಬಿಟ್ಟುಕೊಡಬಾರದು. ಸಮಾಜದ ವಿದ್ಯಾವಂತ ಉದ್ಯೋಗಿಗಳು ತಾವೂ ಬೆಳೆದು, ಸಮಾಜದ ಸದಸ್ಯರನ್ನೂ ಬೆಳೆಸುವ ಪ್ರಯತ್ನ ಪಡಬೇಕು’ ಎಂದರು.

ಸಂಸದ ಎ.ನಾರಾಯಣ ಸ್ವಾಮಿ ಮಾತನಾಡಿ ‘ಶಿಕ್ಷಣ ಪಡೆಯದೇ ನಾವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ನಾಗರಿಕ ಸಮಾಜದಲ್ಲಿ ನಮ್ಮದೂ ಒಂದು ಸಮಾಜ ಎಂದು ಗುರುತಿಸಿಕೊಳ್ಳಬೇಕಾದರೆ ನಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕು. ಈ ಬಗ್ಗೆ ಹಿರಿಯರು ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಶರಣ ಮಾದರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡ ಕೆ.ಬಿ.ಚಂದ್ರಶೇಖರ್‌, ಜಗಜೀವನ್‌ರಾಮ್‌ ಸಂಘಗಳ ಒಕ್ಕೂಟದ ಅಧ್ಯಕ್ಷ ಎನ್‌.ಆರ್‌.ಚಂದ್ರಶೇಖರ್‌, ಶಿವಣ್ಣ, ಕೆಂಪಬೋರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.