ADVERTISEMENT

ಅಂಗವಿಕಲರ ಸೇವೆ ಮಾಡುವ ಸುಂದ್ರಪ್ಪ

ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಸೇವಕ, ಮಕ್ಕಳಿಗೆ ಆರ್ಥಿಕ ಸಹಾಯ

ಎನ್.ಪುಟ್ಟಸ್ವಾಮಾರಾಧ್ಯ
Published 4 ಮೇ 2019, 20:00 IST
Last Updated 4 ಮೇ 2019, 20:00 IST
ಅಂಗವಿಕಲ ಬಾಲಕನಿಗೆ ಯೋಗ ಹೇಳಿಕೊಡುತ್ತಿರುವ ಶಿಕ್ಷಕ ಸುಂದ್ರಪ್ಪ
ಅಂಗವಿಕಲ ಬಾಲಕನಿಗೆ ಯೋಗ ಹೇಳಿಕೊಡುತ್ತಿರುವ ಶಿಕ್ಷಕ ಸುಂದ್ರಪ್ಪ   

ಮಳವಳ್ಳಿ: ತಾಲ್ಲೂಕಿನ ಲಿಂಗಪಟ್ಟಣ ಗ್ರಾಮದ ಸುಂದ್ರಪ್ಪ ಸರ್ಕಾರಿ ಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರೂ, ಬಿಡುವಿನ ವೇಳೆಯಲ್ಲಿ ಅಂಗವಿಕಲರ ಸೇವೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇವರ ಸೇವಾಕಾರ್ಯದಿಂದಾಗಿ ಮಂಡ್ಯ ಜಿಲ್ಲೆಯಾದ್ಯಂತ ಮಾದರಿ ಶಿಕ್ಷಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಸುಂದ್ರಪ್ಪ ತಾಲ್ಲೂಕಿನ ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಇವರು ತಾಲ್ಲೂಕಿನ ಗುಂಡಾಪುರ, ಹುಲ್ಲಹಳ್ಳಿ, ಲಿಂಗಪಟ್ಟಣ, ಬಾಣ ಸಮುದ್ರ, ಡಿ.ಕೆ.ಹಳ್ಳಿ ಸೇರಿ ಹಲವು ಗ್ರಾಮಗಳ 40ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ಅಂಗವಿಕಲರ ಮನೆಗೆ ತೆರಳುವ ಇವರು ಅವರ ಸೇವೆ ಮಾಡುತ್ತಾರೆ.

ಅಂಗವಿಕಲರಿಗೆ ಆರೋಗ್ಯ ಹಾಗೂ ಶುಚಿತ್ವ ಕುರಿತು ಮಾರ್ಗದರ್ಶನ ನೀಡುತ್ತಾರೆ. ಅವರನ್ನು ಪ್ರೀತಿಯಿಂದ ಮಾತನಾಡಿಸಿ ಯೋಗ ಹೇಳಿಕೊಡುತ್ತಾರೆ. ಇದರಿಂದ ಅಂಗವಿಕಲ ಮಕ್ಕಳೂ ದಿನನಿತ್ಯ ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ.

ADVERTISEMENT

ಅಂಗವಿಕಲ ಮಕ್ಕಳು ಶಾಲಾ ವಿದ್ಯಾರ್ಥಿಗಳಾಗಿದ್ದರೆ ಅವರಿಗೆ ಅನುಕೂಲವಾಗುವಂತೆ ನೋಟ್‌ ಪುಸ್ತಕ, ಸಮವಸ್ತ್ರ, ಶಾಲಾ ಬ್ಯಾಗ್ ವಿತರಣೆ, ಕನ್ನಡಕ, ಊರುಗೋಲು, ಶಾಲಾ ಶುಲ್ಕ ಭರಿಸುವ ಕೆಲಸ ಮಾಡುತ್ತಾರೆ. ಕೆಲವು ವೇಳೆ ಅಗತ್ಯವಿರುವ ಮಕ್ಕಳ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ.

ಕಳೆದ 20 ವರ್ಷಗಳಿಂದ ಅಂಗವಿಕಲರ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಹೋಬಳಿ ಕೇಂದ್ರವಾದ ಹಲಗೂರಿನಲ್ಲಿ ಆರೋಗ್ಯ ಶಿಬಿರ, ನೇತ್ರ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಮಾನ್ಯ ಜನರ ಸೇವೆಗೂ ಮುಂದಾಗಿದ್ದಾರೆ. ಜೊತೆಗೆ ಅನಾಥ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸುತ್ತಲಿನ ಗ್ರಾಮಸ್ಥರ ನೆರವಿನಿಂದ ಹಣ ಸಂಗ್ರಹಿಸಿ ಅನಾಥ ಮಕ್ಕಳಿಗೆ ಸಮವಸ್ತ್ರ ಹಾಗೂ ಅಗತ್ಯ ಸಲಕರಣೆ ಒದಗಿಸುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿರುವ ಇವರು ಸ್ಥಳೀಯ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಎರಡು ಪುಸ್ತಕ ಪ್ರಕಟ ಮಾಡಿದ್ದಾರೆ. ತಾವು ಕೆಲಸ ಮಾಡುವ ಕೆಂಪಯ್ಯನದೊಡ್ಡಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿಯೂ ಉತ್ತಮವಾಗಿ ಶಿಕ್ಷಕ ಸೇವೆ ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಗ್ರಾಮಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ಆವರಣದಲ್ಲಿ ಉತ್ತಮ ಪರಿಸರ ನಿರ್ಮಿಸಿದ್ದಾರೆ.

ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನೂ ಪ್ರಾರಂಭಿಸಿದ್ದಾರೆ. ಇವರ ಸೇವೆ ಗುರುತಿಸಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಜೊತೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ಧಾರವಾಡದಲ್ಲಿ ನಡೆದ 84ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.