ಮಂಡ್ಯ: ಜಿಲ್ಲೆಯಲ್ಲಿ 2012-13ನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ಕೃಷಿ ಸೇರಿದಂತೆ ಸೇರಿ ವಿವಿಧ ಕ್ಷೇತ್ರಗಳಿಗೆ ಸಾಲ ನೆರವು ಕುರಿತ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೋಮವಾರ ಬಿಡುಗಡೆ ಮಾಡಿದರು.
ಸಾಲ ಯೋಜನೆಯ ವಿವರಗಳನ್ನು ಪಟ್ಟಿ ಮಾಡಿದ ನಬಾರ್ಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿಂದು ಮಾಧವ ವಡವಿ ಅವರು, 2012-13ನೇ ಹಣಕಾಸು ಸಾಲಿನಲ್ಲಿ ಆದ್ಯತಾ ವಲಯಕ್ಕೆ ರೂ. 1410.86 ಕೋಟಿ ಮತ್ತು ಇತರೆ ವಲಯಗಳಿಗೆ ರೂ. 224.94 ಕೋಟಿ ರೂ.ಗಳ ಸಾಲ ನೆರವು ಗುರಿ ಹೊಂದಲಾಗಿದೆ ಎಂದರು.
ಈ ಮೊತ್ತವು ಒಟ್ಟಾರೆ 2011-12ನೇ ಸಾಲಿಗಿಂತಲೂ ಶೇ 30.26 ರಷ್ಟು ಹೆಚ್ಚಿನದ್ದಾಗಿದೆ. ಆದ್ಯತಾ ವಲಯದ ಸಾಲದ ಗುರಿಯಲ್ಲಿ ಪ್ರಮುಖ ಕೃಷಿ ಕ್ಷೇತ್ರಕ್ಕಾಗಿ ರೂ. 637.38 ಕೋಟಿ ಬೆಳೆಸಾಲಕ್ಕಾಗಿ ನಿಗದಿಪಡಿಸಲಾಗಿದೆ. ಇದು, ಕಳೆದ ಬಾರಿ ನಿಗದಿಪಡಿಸಿದ್ದಕ್ಕಿಂತಲೂ ಶೇ 33.92ರಷ್ಟು ಹೆಚ್ಚಾಗಿದೆ ಎಂದರು.
ಸಣ್ಣ ನೀರಾವರಿ ಕ್ಷೇತ್ರಕ್ಕಾಗಿ ರೂ. 25.08 ಕೋಟಿ ಹಂಚಿಕೆ ಮಾಡಲಾಗಿದೆ. ಇದು, ಕಳೆದ ವರ್ಷ ರೂ. 22 ಕೋಟಿ ಆಗಿತ್ತು. ಕೃಷಿ ಯಾಂತ್ರೀಕರಣಕ್ಕಾಗಿ ರೂ. 41.15 ಕೋಟಿ, ತೋಟಗಾರಿಕೆ ಹಾಗೂ ಪ್ಲಾಂಟೇಷನ್‌ಗೆ ರೂ. 26.71 ಕೋಟಿ, ಎತ್ತಿನಗಾಡಿ, ಪಶುಸಂಗೋಪನೆ, ಇತರೆ ಪೂರಕ ಕ್ಷೇತ್ರಗಳಿಗೆ ರೂ. 83.27 ಕೋಟಿ ಹಂಚಿಕೆಯಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಜಿ.ಜಯರಾಂ, ಆರ್‌ಬಿಐ ಪ್ರತಿನಿಧಿ ಸುನಿಲ್‌ಕುಮಾರ್, ವಿಜಯ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ಜಯರಾಮಶೆಟ್ಟಿ, ಮೈಸೂರು ಬ್ಯಾಂಕ್‌ನ ಮಲ್ಲಿಕಾರ್ಜುನ ಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್‌ಕುಮಾರ್ ರಾವ್, ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರಾದ ಗೋವಿಂದ ಢೋಂಗ್ರೆ ಅವರು ಉಪಸ್ಥಿತರಿದ್ದರು.
ಗ್ರಾಮೀಣರಿಗೆ ಬ್ಯಾಂಕಿಗ್ ಸೇವೆ
ಮಂಡ್ಯ: ಸಾಲ ನೀಡುವುದು,ಖಾತೆ ತೆರೆಯುವ ಹಂತದಲ್ಲಿನ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಮೂಲಕ ಬ್ಯಾಂಕಿಂಗ್ ಸೌಲಭ್ಯವು ಗ್ರಾಮೀಣ ಭಾಗದ ಎಲ್ಲರಿಗೂ ತಲುಪುವಂತೆ ನೋಡಿ ಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಸೋಮವಾರ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2012-13ನೇ ಹಣಕಾಸು ವರ್ಷದ `ಜಿಲ್ಲಾ ವಾರ್ಷಿಕ ಸಾಲ ಯೋಜನೆ~ ಬಿಡುಗಡೆ ಮಾಡಿದ ಅವರು, `ಆರ್ಥಿಕ ವರ್ಷ ಆರಂಭಕ್ಕೂ ಮುನ್ನವೇ ಸಾಲ ಯೋಜನೆ ಸಿದ್ಧಪಡಿಸಿ ಬಿಡುಗಡೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ~ ಎಂದು ಶ್ಲಾಘಿಸಿದರು.
ಬಹುತೇಕ ಸಂದರ್ಭ ಕ್ರಿಯಾ ಯೋಜನೆ ರೂಪಿಸುವುದರಲ್ಲೇ ವಿಳಂಬ ಆಗಲಿದೆ. ಇದರಂದ ಅನುಷ್ಠಾನವೂ ವಿಳಂಬವಾಗುತ್ತಿದೆ. ಇಲಾಖೆಗಳು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕ್ರಿಯಾ ಯೋಜನೆ ತಯಾರಿಸಿದಲ್ಲಿ, ದ್ವಿತೀಯ ತ್ರೈಮಾಸಿಕದಲ್ಲಿ ಜಾರಿಗೊಳಿಸ ಬಹುದು. ತೊಡಕುಗಳಿದ್ದಲ್ಲಿ ಸರಿಪಡಿಸಲು ಅವಕಾಶ ದೊರೆಯಲಿದೆ ಎಂದರು.
ಆರ್ಥಿಕ ಸೇರ್ಪಡೆ ಆದಾಕ್ಷಣ ಗ್ರಾಮೀಣ ಪ್ರದೇಶದ ಜನರ ಅಗತ್ಯಗಳು ಈಡೇರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕ್ ಸಿಬ್ಬಂದಿಗಳ ಧೋರಣೆಯೂ ಬದಲಾಗಿ, ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸಲು ಕ್ರಮ ಕೈಗೊಳ್ಳಬೆಕು. ಇದಕ್ಕಾಗಿ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಸಲಹೆ ಮಾಡಿದರು.
ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೂ ವಿತರಣೆ ಪ್ರಕ್ರಿಯೆಯ ವಿಳಂಬದಿಂದಾಗಿ ರೈತರು ತಕ್ಷಣದ ಅಗತ್ಯಗಳಿಗಾಗಿ ಹೆಚ್ಚು ಬಡ್ಡಿ ನೀಡಿಡಯೇ ಖಾಸಗಿ ಸಾಲ ಪಡೆಯಲು ಮುಂದಾಗುತ್ತಾರೆ. ಜನರಿಗೆ ಸಾಲ ಪ್ರಕ್ರಿಯೆ ಬಗೆಗೆ ತಿಳಿಸಬೇಕು. ಬ್ಯಾಂಕುಗಳೇ ಅಗತ್ಯ ಮಾಹಿತಿಗಳಿಗೆ ನೇರವಾಗಿ ಕಂದಾಯ ಇಲಾಖೆ ಜೊತೆಗೆ ವ್ಯವಹರಿಸುವ ಸಾಧ್ಯತೆಗಳ ಬಗೆಗೂ ಚಿಂತಿಸಬಹುದು ಎಂದು ಸಲಹೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.